ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಸಮೂಹದ ಹಗರಣ ಕುರಿತು ನರೇಂದ್ರ ಮೋದಿ ಮೌನ ಮುರಿಯಲಿ: ಕಾಂಗ್ರೆಸ್‌

Last Updated 5 ಫೆಬ್ರುವರಿ 2023, 14:34 IST
ಅಕ್ಷರ ಗಾತ್ರ

ನವದೆಹಲಿ: ಅದಾನಿ ಸಮೂಹದ ಮೇಲಿನ ಆರೋಪಗಳ ಕುರಿತು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಭಾನುವಾರ ತನ್ನ ವಾಗ್ದಾಳಿಯನ್ನು ಮ‌ತ್ತಷ್ಟು ತೀವ್ರಗೊಳಿಸಿದೆ. ಈ ಹಗರಣದಲ್ಲಿ ಮೋದಿ ನೇತೃತ್ವದ ಸರ್ಕಾರ ವಹಿಸಿರುವ ‘ಭಾರಿ ಮೌನ’ದ ಹಿಂದೆ ‘ಪ್ರಬಲವಾದ ಒಳಸಂಚು’ ಇದೆ ಎಂದು ಆರೋಪಿಸಿದೆ.

ಅದಾನಿ ಸಮೂಹದ ವಂಚನೆಯ ಹಗರಣದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪಕ್ಷವು ದಿನವೂ ಮೂರು ಪ್ರಶ್ನೆಗಳನ್ನು ಕೇಳಲಿದೆ ಎಂದು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್‌ ರಮೇಶ್‌ ಅವರು ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅದಾನಿ ಸಮೂಹದ ವಿರುದ್ಧದ ಈ ಗಂಭೀರ ಆರೋಪಗಳ ಮಧ್ಯೆ, ಮೋದಿ ಸರ್ಕಾರದ ಭಾರಿ ಮೌನದ ಹಿಂದೆ ಭಾರಿ ಒಳಸಂಚು ಇದೆ ಎಂದು ಅವರು ಆರೋಪಿಸಿದ್ದಾರೆ.

ಭ್ರಷ್ಟಾಚಾರದ ವಿರುದ್ಧದ ಪ್ರಧಾನಿಯವರ ಹಿಂದಿನ ಹೇಳಿಕೆಗಳನ್ನು ಪಕ್ಷದ ಟ್ವಿಟರ್‌ ಖಾತೆಯಲ್ಲಿ ಟ್ಯಾಗ್‌ ಮಾಡಿರುವ ಅವರು, ‘ಅದಾನಿ ಮಹಾಮೆಗಾ ಹಗರಣದಲ್ಲಿ ಪ್ರಧಾನಿಯವರ ನಿರರ್ಗಳ ಮೌನವು ‘ಎಚ್‌ಎಎಚ್‌ಕೆ–ಹಮ್ ಅದಾನಿಕೆ ಹೈ ಕೌನ್’ ಎಂಬ ಸರಣಿ ಪ್ರಾರಂಭಿಸಲು ನಮ್ಮನ್ನು ಪ್ರೇರೇಪಿಸಿದೆ. ಈ ಹಗರಣದಲ್ಲಿ ಪ್ರಧಾನಿಯವರು ತಮ್ಮ ಮೌನ ಮುರಿಯಬೇಕೆಂದು ಭಾನುವಾರದಿಂದಲೇ ಪ್ರಧಾನಿಯವರಿಗೆ ಪ್ರತಿ ದಿನ ಮೂರು ಪ್ರಶ್ನೆಗಳನ್ನು ಕೇಳಲು ಆರಂಭಿಸಿದ್ದೇವೆ’ ಎಂದು ಜೈರಾಮ್‌ ರಮೇಶ್‌ ಹೇಳಿದರು.

‘ಪನಾಮ ಪೇಪರ್ಸ್‌ ಹಗರಣಕ್ಕೆ ಪ್ರತಿಕ್ರಿಯಿಸುವಾಗ ಹಣಕಾಸು ಸಚಿವಾಲಯವು, ತೆರಿಗೆ ವಂಚಕರ ಪಾಲಿಗೆ ಸ್ವರ್ಗವೆನ್ನುವ ಸಾಗರದಾಚೆಯ ವ್ಯವಹಾರಗಳು ಮತ್ತು ಹಣಕಾಸಿನ ಹರಿವಿನ ಮೇಲ್ವಿಚಾರಣೆಗೆ ಮೋದಿ ಅವರು ವೈಯಕ್ತಿಕವಾಗಿ ಬಹು ಏಜೆನ್ಸಿಯ ತನಿಖಾ ತಂಡಗಳನ್ನು ನಿಯೋಜಿಸಿದ್ದಾರೆಂದು 2016ರ ಏಪ್ರಿಲ್ 4ರಂದು ಪ್ರಕಟಿಸಿತ್ತು. ಗೌತಮ್ ಅದಾನಿಯ ಸಹೋದರ ವಿನೋದ್‌ ಅದಾನಿ ಬಹಾಮಾಸ್ ಮತ್ತು ಬ್ರಿಟಿಷ್ ವರ್ಜಿನ್ ದ್ವೀಪಗಳಲ್ಲಿ ಸಾಗರದಾಚೆಗಿನ ತೆರಿಗೆ ವಂಚನೆಯ ಘಟಕಗಳನ್ನು ನಿರ್ವಹಿಸುತ್ತಿದ್ದಾರೆಂದು ಅದಾನಿ ಸಮೂಹದ ವಿನೋದ್ ಹೆಸರನ್ನು ವಿನೋದ್‌ ಪನಾಮ ಪೇಪರ್ಸ್ ಮತ್ತು ಪಂಡೋರಾ ಪೇಪರ್ಸ್ ಬಹಿರಂಗಪಡಿಸಿದ್ದವು. ಇಂತಹ ಗಂಭೀರ ಆರೋಪಗಳ ಬಗ್ಗೆ ನೀವು (ಮೋದಿ) ಮತ್ತು ನಿಮ್ಮ ಸರ್ಕಾರ ಏನು ಹೇಳುತ್ತದೆ, ನಿಮ್ಮ ತನಿಖೆಯ ಗುಣಮಟ್ಟ ಯಾವ ರೀತಿಯದು’ ಎಂದು ಜೈರಾಮ್‌ ರಮೇಶ್‌ ಪ್ರಶ್ನಿಸಿದ್ದಾರೆ.

‘2016ರ ಸೆಪ್ಟೆಂಬರ್ 5ರಂದು ಚೀನಾದ ಹ್ಯಾಂಗ್‌ಜುಹುದಲ್ಲಿ ಜಿ 20 ಶೃಂಗಸಭೆಯಲ್ಲಿ ನೀವು(ಮೋದಿ) ‘ಆರ್ಥಿಕ ಅಪರಾಧಿಗಳ ಸ್ವರ್ಗೀಯ ತಾಣಗಳ ನಿವಾರಣೆಗೆ ನಾವು ಕಾರ್ಯನಿರ್ವಹಿಸಬೇಕಾಗಿದೆ, ಹಣ ಅಕ್ರಮ ವರ್ಗಾವಣೆ ಪತ್ತೆಗೆ ಮತ್ತು ಅಂಥವರ ಬೇಷರತ್‌ ಹಸ್ತಾಂತರಕ್ಕೆ ಅಂತರರಾಷ್ಟ್ರೀಯ ಸಂಕೀರ್ಣವಾದ ನಿಯಮಗಳು, ಭ್ರಷ್ಟರ ಮತ್ತು ಅವರ ಕಾರ್ಯ ಮರೆಮಾಚುವ ಅತಿಯಾದ ಬ್ಯಾಂಕಿಂಗ್ ಗೋಪ್ಯತೆಯನ್ನು ಮುರಿಯಬೇಕು’ ಎಂದು ಹೇಳಿದ್ದೀರಿ. ಈಗ, ನೀವು ಮತ್ತು ನಿಮ್ಮ ಸರ್ಕಾರವು ಎಚ್‌ಎಎಚ್‌ಕೆ ಎಂದು ಹೇಳಿ ಈ ಹಗರಣ ಮರೆಮಾಚಲು ಸಾಧ್ಯವಾಗದು’ ಎಂದು ಜೈರಾಮ್‌ ರಮೇಶ್‌ ಕುಟುಕಿದ್ದಾರೆ.

ಭ್ರಷ್ಟಾಚಾರದ ವಿರುದ್ಧ ಹೋರಾಡುವಲ್ಲಿ ನಿಮ್ಮ ಪ್ರಾಮಾಣಿಕತೆ ಮತ್ತು ಉದ್ದೇಶ ಬಗ್ಗೆ ನೀವು ಆಗಾಗ್ಗೆ ಮಾತನಾಡಿದ್ದೀರಿ. ಅದಾನಿ ಸಮೂಹದ ವಿರುದ್ಧದ ಗಂಭೀರ ಆರೋಪಗಳ ತನಿಖೆಗೆ ಯಾವ ಕ್ರಮ ಕೈಗೊಳ್ಳಲಾಗಿದೆ? ಪ್ರಧಾನಿ ಅವರ ಅಧೀನದ ತನಿಖೆಯಲ್ಲಿ ವಿಶ್ವಾಸವಿಡಬಹುದೇ? ಪ್ರಾಮಾಣಿಕ ತನಿಖೆ ನಡೆಯುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.

ಅಮೆರಿಕ ಮೂಲದ ಸಂಶೋಧನಾ ಸಂಸ್ಥೆ ‘ಹಿಂಡನ್‌ಬರ್ಗ್‌ ರಿಸರ್ಚ್‌’ ಗೌತಮ್‌ ಅದಾನಿ ನೇತೃತ್ವದ ಸಮೂಹವು ‘ತನ್ನ ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರಬಲ್ಲ ಕೃತ್ಯಗಳಲ್ಲಿ ಲಜ್ಜೆಯಿಲ್ಲದೆ ತೊಡಗಿಸಿಕೊಂಡಿದೆ ಹಾಗೂ ಲೆಕ್ಕಪತ್ರ ವಂಚನೆ ಎಸಗಿದೆ’ ಎಂದು ಆರೋಪಿಸಿ ವರದಿ ಪ್ರಕಟಿಸಿತ್ತು. ಈ ವರದಿಯ ನಂತರ ಅದಾನಿ ಸಮೂಹದ ಷೇರುಗಳು ಷೇರುಪೇಟೆಯಲ್ಲಿ ನಿರಂತರ ಕುಸಿಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT