ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಮುಖ್ಯವಾಹಿನಿಗೆ ಬನ್ನಿ: ಈಶಾನ್ಯ ರಾಜ್ಯಗಳ ಭೂಗತ ಉಗ್ರರಿಗೆ ಪ್ರಧಾನಿ ಕರೆ

ಅಸ್ಸಾಂನ ಬೋಡೊ ಲ್ಯಾಂಡ್‌ ವಯಲಯದಲ್ಲಿ ಚುನಾವಣಾ ಪ್ರಚಾರ
Last Updated 3 ಏಪ್ರಿಲ್ 2021, 13:38 IST
ಅಕ್ಷರ ಗಾತ್ರ

ತಮುಲ್ಪುರ್ (ಅಸ್ಸಾಂ): ‘ಈಶಾನ್ಯ ರಾಜ್ಯಗಳಲ್ಲಿ ಭೂಗತ ಮತ್ತು ಉಗ್ರ ಸಂಘಟನೆಗಳೊಂದಿಗೆ ನಡೆದಿರುವ ಶಾಂತಿ ಒಪ್ಪಂದದ ಪ್ರಯತ್ನಗಳಿಗೆ ಸಿಕ್ಕ ಯಶಸ್ಸಿನಿಂದ ಉತ್ತೇಜಿತರಾದಂತೆ ಕಂಡ ಪ್ರಧಾನಿ ನರೇಂದ್ರ ಮೋದಿ ಅವರು, ಅಸ್ಸಾಂನಲ್ಲಿರುವ ಉಗ್ರರೂ ಮುಖ್ಯವಾಹಿನಿಗೆ ಮರಳುವ ಮೂಲಕ ‘ಆತ್ಮನಿರ್ಭರ ಅಸ್ಸಾಂ‘ ನಿರ್ಮಾಣಕ್ಕೆ ನಿಮ್ಮ ಕೊಡುಗೆಯ ಅಗತ್ಯವಿದೆ‘ ಎಂದು ಹೇಳಿದರು.

ಬೋಡೋಲ್ಯಾಂಡ್ ಪ್ರಾದೇಶಿಕ ವಲಯದ (ಬಿಟಿಆರ್) ಬಕ್ಸಾ ಜಿಲ್ಲೆಯಲ್ಲಿ ಚುನಾವಣಾ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ರಾಜ್ಯ ಮಾತ್ರವಲ್ಲ ತಮ್ಮ ಭವಿಷ್ಯದ ದೃಷ್ಟಿಯಿಂದಲೂ ಈವರೆಗೆ ಶರಣಾಗದ ಉಗ್ರರು ಮುಖ್ಯವಾಹಿನಿಗೆ ಮರಳಬೇಕೆಂದು ಮನವಿ ಮಾಡಿದರು.

‘ವರ್ಷಗಳ ಹೋರಾಟದ ನಂತರ ಮುಖ್ಯವಾಹಿನಿಗೆ ಮರಳಿದ ಉಗ್ರರಿಗೆ ಪುನರ್ವಸತಿ ಕಲ್ಪಿಸುವುದು ನಮ್ಮ ಜವಾಬ್ದಾರಿ ಯಾಗಿದೆ‘ ಎಂದ ಮೋದಿಯವರು, ‘ಆತ್ಮನಿರ್ಭರ ಅಸ್ಸಾಂ‘ ನಿರ್ಮಾಣಕ್ಕೆ ಅವರ ಕೊಡುಗೆಯ ಅಗತ್ಯವಿದೆ‘ ಎಂದು ಹೇಳಿದರು.

ಅಸ್ಸಾಂ ರಾಜ್ಯದ ಅಭಿವೃದ್ಧಿ ಕುರಿತು ಮಾತನಾಡಿದ ಮೋದಿ, ‘ಕೆಲವರು ತಮ್ಮ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಸಮಾಜ ವನ್ನು ವಿಭಜಿಸಿ, ತಮಗೆ ಬೇಕಾದ ಸ್ಥಳಗಳಲ್ಲಷ್ಟೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುತ್ತಾ ನಾವು ಜಾತ್ಯತೀತರು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ, ನಾವು ಸಮಾಜದ ಎಲ್ಲ ವರ್ಗದವರಿಗೂ ಅಭಿವೃದ್ಧಿ ಯೋಜನೆಗಳನ್ನು ತಲುಪಿಸು ತ್ತಿದ್ದರೂ, ನಮ್ಮನ್ನು ಕೋಮುವಾದಿಗಳು ಎನ್ನುತ್ತಾರೆ. ಇದು ದುರದೃಷ್ಟಕರ ಸಂಗತಿ‘ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ರಾಜ್ಯದಲ್ಲಿ ಅಭಿವೃದ್ಧಿ, ಶಾಂತಿ, ಐಕ್ಯತೆ ಮತ್ತು ಸ್ಥಿರತೆಗಾಗಿ ನಡೆದಿರುವ ಹಿಂಸಾಚಾರವನ್ನು ಜನರು ತಿರಸ್ಕರಿಸಿದ್ದಾರೆ . ಕಾಂಗ್ರೆಸ್ ಹಿಂಸಾಚಾರವನ್ನು ಪ್ರೋತ್ಸಾಹಿಸುತ್ತಿದೆ ಎಂದು ಆರೋಪಿಸಿದ ಮೋದಿ, ಎನ್‌ಡಿಎ ಸರ್ಕಾರ, ಸಮಾಜದ ಎಲ್ಲ ವರ್ಗದವರಿಗೆ ಅನ್ವಯವಾಗುವಂತಹ, ತಾರತಮ್ಯರಹಿತ ನೀತಿಗಳನ್ನು ಜಾರಿಗೊಳಿಸಿರುವುದಾಗಿ ಸಮರ್ಥಿಸಿಕೊಂಡರು.

ಎನ್‌ಡಿಎ ಸರ್ಕಾರ ‘ಸಬ್‌ ಕಾ ಸಾತ್ ಸಬ್‌ ಕಾ ವಿಕಾಸ್‌, ಸಬ್‌ಕಾ ವಿಶ್ವಾಸ್‌‘ ಧ್ಯೇಯದೊಂದಿಗೆ ದೇಶದ ಪ್ರತಿಯೊಂದು ವರ್ಗವನ್ನು ಬಲವರ್ಧನೆಗೊಳಿಸಲು ಪ್ರಯತ್ನಿಸುತ್ತಿದೆ‘ ಎಂದರು. ಕಳೆದ ಐದು ವರ್ಷದಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ರುವ ‘ಡಬ್ಬಲ್ ಎಂಜಿನ್‌‘ ಸರ್ಕಾರಗಳು ಅಸ್ಸಾಂಗೆ ದುಪ್ಪಟ್ಟು ಅನುಕೂಲಗಳನ್ನು ಕಲ್ಪಿಸಿದೆ ಎಂದು ಮೋದಿ ಹೇಳಿದರು.

ಸಂಸದ ಬದ್ರುದ್ದೀನ್ ಅಜ್ಮಲ್ ಪುತ್ರ ಅಬ್ದುರ್ ರಹೀಂ ಅವರ ‘ರಾಜ್ಯದಲ್ಲಿ ಮುಂದೆ ದಾದಿ, ಟೋಪಿ ಮತ್ತು ಲುಂಗಿ ವಾಲಾಗಳು‘ ಸರ್ಕಾರ ರಚಿಸಲಿದ್ದಾರೆ ಎಂಬ ಹೇಳಿಕೆ ಉಲ್ಲೇಖಿಸಿದ ಮೋದಿ, ‘ಅಸ್ಸಾಂನ ಹೆಮ್ಮೆ ಮತ್ತು ಗುರುತನ್ನು ಅವಮಾನಿಸುವವರನ್ನು ಇಲ್ಲಿನ ಜನರು ಸಹಿಸುವುದಿಲ್ಲ. ಅದಕ್ಕೆ ಮತದಾನದ ಮೂಲಕ ಅಂಥವರಿಗೆ ಸೂಕ್ತ ಉತ್ತರ ನೀಡುತ್ತಾರೆ‘ ಎಂದು ಹೇಳಿದರು.

ರ‍್ಯಾಲಿಯಲ್ಲಿ ಸೇರಿದ್ದ ಬೃಹತ್ ಸಂಖ್ಯೆಯ ಮಹಿಳೆಯರನ್ನು ಉಲ್ಲೇಖಿಸಿ ಮಾತನಾಡಿದ ಮೋದಿ, ‘ನಿಮ್ಮ ಮಕ್ಕಳ ಕನಸುಗಳು ಈಡೇರುವುದಾಗಿ ನಾನು ಇಲ್ಲಿ ಸೇರಿರುವ ಪ್ರತಿಯೊಬ್ಬ ತಾಯಿ ಮತ್ತು ಸಹೋದರಿಗೆ ಭರವಸೆ ನೀಡುತ್ತೇನೆ. ಇನ್ನು ಮುಂದೆ ನಿಮ್ಮ ಮಕ್ಕಳು ಶಸ್ತ್ರಾಸ್ತ್ರಗಳನ್ನು ತೆಗೆದುಕೊಂಡು ಕಾಡಿಗೆ ಹೋಗುವ ಅವಶ್ಯಕತೆಯೂ ಇಲ್ಲ. ಗುಂಡಿನ ಹೊಡೆತಕ್ಕೂ ಬಲಿಯಾಗಬೇಕಾಗಿಲ್ಲ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT