ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ವಂಶಸ್ಥರೇಕೆ ಅವರ ಉಪನಾಮ ಬಳಸಲ್ಲ

ಕಾಂಗ್ರೆಸ್‌ ಮೇಲೆ ಮತ್ತೊಮ್ಮೆ ಹರಿಹಾಯ್ದ ಪ್ರಧಾನಿ ಮೋದಿ
Last Updated 14 ಫೆಬ್ರುವರಿ 2023, 9:44 IST
ಅಕ್ಷರ ಗಾತ್ರ

ನವದೆಹಲಿ: ‘ದೇಶದ ಮೊದಲ ಪ್ರಧಾನಿ ಪಂಡಿತ್‌ ಜವಾಹರಲಾಲ್‌ ನೆಹರೂ ಅವರು ಶ್ರೇಷ್ಠ ಆಡಳಿತಗಾರರಾಗಿದ್ದೇ ಆದಲ್ಲಿ ಅವರ ವಂಶಸ್ಥರು ಏಕೆ ತಮ್ಮ ಹೆಸರಿನ ಜೊತೆ ಅವರ ಉಪನಾಮ ಬಳಸುತ್ತಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಶ್ನಿಸಿದ್ದಾರೆ. ಆ ಮೂಲಕ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರನ್ನು ಕುಟುಕಿದ್ದಾರೆ.

ರಾಷ್ಟ್ರಪತಿಯವರ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲಿನ ಚರ್ಚೆಗೆ ರಾಜ್ಯಸಭೆಯಲ್ಲಿ ಗುರುವಾರ ಉತ್ತರ ನೀಡಿದ ಅವರು, ಕಾಂಗ್ರೆಸ್‌ ಹಾಗೂ ಇತರೆ ವಿರೋಧ ಪಕ್ಷಗಳ ಮೇಲೆ ಮತ್ತೊಮ್ಮೆ ಹರಿಹಾಯ್ದರು.

ಸ್ವಾತಂತ್ರ್ಯ ನಂತರದಲ್ಲಿ ಈ ದೇಶ ಕಟ್ಟುವುದಕ್ಕಾಗಿ ನೆಹರೂ ಅವರು ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಆದರೆ ಬಿಜೆಪಿಯವರು ಅದನ್ನು ಕಡೆಗಣಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ಸಂಸದರು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಮೋದಿ ‘ನೆಹರೂ ಅಷ್ಟೊಂದು ಶ್ರೇಷ್ಠ ಆಡಳಿತಗಾರರಾಗಿದ್ದೇ ಆದಲ್ಲಿ ಅವರ ವಂಶಸ್ಥರು ಏಕೆ ಅವರ ಉಪನಾಮ ಬಳಸುತ್ತಿಲ್ಲ’ ಎಂದು ತಿರುಗೇಟು ನೀಡಿದರು.

ಇದು ವಿರೋಧ ಪಕ್ಷದ ಸಂಸದರನ್ನು ಕೆರಳಿಸಿತು. ಭಿತ್ತಿಪತ್ರ ಹಿಡಿದಿದ್ದ ಕೆಲವರು ಸಭಾಪತಿ ಪೀಠದ ಮುಂಭಾಗಕ್ಕೆ ತೆರಳಿ ಪ್ರಧಾನಿ ವಿರುದ್ಧ ಘೋಷಣೆಗಳನ್ನು ಕೂಗಿದರು. ಅದಾನಿ ಸಮೂಹದ ವಿರುದ್ಧದ ಪ್ರಕರಣವನ್ನು ಜಂಟಿ ಸಂಸದೀಯ ಸಮಿತಿಯ (ಜೆಪಿಸಿ) ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.

ಗದ್ದಲದ ನಡುವೆಯೂ ಮಾತು ಮುಂದುವರಿಸಿದ ಮೋದಿ, ‘ನೀವು ಎಷ್ಟು ಕೆಸರು ಎರಚುತ್ತೀರೋ (ಆರೋಪ) ಅಷ್ಟು ದೊಡ್ಡದಾಗಿ ಕಮಲ ಅರಳುತ್ತದೆ’ ಎಂದು ವಿರೋಧ ಪಕ್ಷಗಳ ಸಂಸದರನ್ನು ಛೇಡಿಸಿದರು.

ಎದೆ ತಟ್ಟಿಕೊಳ್ಳುತ್ತಲೇ, ‘ನಾನು ಈ ದೇಶಕ್ಕಾಗಿ ಬದುಕುತ್ತಿದ್ದೇನೆ. ಈ ದೇಶಕ್ಕೆ ಏನನ್ನಾದರೂ ಮಾಡಬೇಕೆಂದು ಬಯಸುತ್ತಿದ್ದೇನೆ. ಇದನ್ನು ವಿರೋಧ ಪಕ್ಷಗಳು ಸಹಿಸಿಕೊಳ್ಳುತ್ತಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳುವುದಕ್ಕಾಗಿ ರಾಜಕೀಯ ನಾಟಕಗಳನ್ನು ಆಡುತ್ತಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.

‘ನಾನೊಬ್ಬನೇ ಎಲ್ಲರನ್ನೂ ಎದುರಿಸುತ್ತಿದ್ದೇನೆ. ಎಲ್ಲರನ್ನೂ ಮೀರಿಸುತ್ತಿದ್ದೇನೆ. ಅದನ್ನು ಇಡೀ ದೇಶವೇ ನೋಡುತ್ತಿದೆ’ ಎಂದು ಹೇಳಿದಾಗ ವಿರೋಧ ಪಕ್ಷಗಳ ಸದಸ್ಯರು ‘ಮೋದಿ–ಅದಾನಿ ಭಾಯ್‌ ಭಾಯ್‌; ದೇಶ್‌ ಬೇಚ್‌ ಕೆ ಖಾಯಿ ಮಲಾಯ್‌’ ಎಂದು ಗೇಲಿ ಮಾಡಿದರು.

ಇದರಿಂದ ವಿಚಲಿತರಾಗದ ಮೋದಿ, ‘ನನ್ನನ್ನು ಏಕಾಂಗಿಯಾಗಿ ಎದುರಿಸುವುದಕ್ಕೆ ವಿರೋಧ ಪಕ್ಷಗಳಿಗೆ ಧೈರ್ಯವಿಲ್ಲ. ಹೀಗಾಗಿ ಅವರು ರಾಜಕೀಯ ನಾಟಕ ಆಡುತ್ತಿದ್ದಾರೆ’ ಎಂದು ಕೆಣಕಿದರು.

‘ಕಾಂಗ್ರೆಸ್‌ ಪಕ್ಷ ದೇಶದ ಸಮಸ್ಯೆಗಳನ್ನು ಪರಿಹರಿಸುವ ವಿಚಾರದಲ್ಲಿ ಸಾಂಕೇತಿಕ ಧೋರಣೆಗಳನ್ನಷ್ಟೇ ಅನುಸರಿಸಿತ್ತು. ಆ ಪಕ್ಷ ತನ್ನ ರಾಜಕೀಯ ಹಿತಾಸಕ್ತಿ ಬಗ್ಗೆ ಚಿಂತಿಸುತ್ತಿತ್ತೇ ಹೊರತು ದೇಶದ ಅಭಿವೃದ್ಧಿಯ ಕುರಿತಲ್ಲ. ಸಾಂಕೇತಿಕ ಧೋರಣೆಗಳಲ್ಲಿ ನಮಗೆ ನಂಬಿಕೆ ಇಲ್ಲ. ದೇಶ ಮುನ್ನಡೆಸುವ ವಿಚಾರದಲ್ಲಿ ನಾವು ಪರಿಶ್ರಮದ ಹಾದಿ ಆಯ್ದುಕೊಂಡಿದ್ದೇವೆ’ ಎಂದರು.

‘ರಾಜ್ಯಗಳ ಹಕ್ಕು ಕಸಿದಿದ್ದ ಕಾಂಗ್ರೆಸ್‌’

‘ಕಾಂಗ್ರೆಸ್‌ ಪಕ್ಷವು ಸಂವಿಧಾನದ 356ನೇ ವಿಧಿಯನ್ನು ದುರ್ಬಳಕೆ ಮಾಡಿಕೊಂಡು 90 ಬಾರಿ ಚುನಾಯಿತ ಸರ್ಕಾರಗಳನ್ನು ವಜಾಗೊಳಿಸಿತ್ತು. ಆ ಮೂಲಕ ರಾಜ್ಯಗಳು ಹಾಗೂ ಪ್ರಾದೇಶಿಕ ಪಕ್ಷಗಳ ಹಕ್ಕು ಕಸಿದಿತ್ತು. ಇಂದಿರಾಗಾಂಧಿ ಒಬ್ಬರೇ 50 ಬಾರಿ ಸರ್ಕಾರಗಳನ್ನು ವಜಾ ಮಾಡಿದ್ದರು’ ಎಂದು ಮೋದಿ ಆರೋಪಿಸಿದರು.

‘ಈ ದೇಶ ಯಾರೊಬ್ಬರ ಸ್ವತ್ತಲ್ಲ. ನಮ್ಮ ನೀತಿಗಳು ರಾಷ್ಟ್ರೀಯ ಹಾಗೂ ಪ್ರಾದೇಶಿಕ ಆಕಾಂಕ್ಷೆಗಳನ್ನು ಪ್ರತಿಬಿಂಬಿಸುತ್ತವೆ. ಈಗ ಇಲ್ಲಿ ಕುಳಿತಿದ್ದಾರಲ್ಲ (ಕಾಂಗ್ರೆಸ್‌) ಇವರ ಮುಖವಾಡವನ್ನು ನಾನು ಕಳಚಲು ಬಯಸುತ್ತೇನೆ’ ಎಂದು ಹರಿಹಾಯ್ದರು.

‘ಕೇರಳದಲ್ಲಿನ ಎಡಪಕ್ಷ, ಶರದ್‌ ಪವಾರ್‌ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಹಾಗೂ ಎಂಜಿಆರ್‌ ಮುಂದಾಳತ್ವದ ತಮಿಳುನಾಡು ಸರ್ಕಾರಗಳನ್ನು ಕಾಂಗ್ರೆಸ್‌ ವಜಾಗೊಳಿಸಿತ್ತು. ಎನ್‌ಟಿಆರ್‌ ಅವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾಗ ಅವರ ಸರ್ಕಾರ ವಜಾಗೊಳಿಸಲಾಗಿತ್ತು. ಈ ಪಕ್ಷಗಳ ಸಂಸದರು ಇಂದು ಕಾಂಗ್ರೆಸ್‌ ಸಂಸದರ ಜೊತೆಯೇ ಕುಳಿತಿದ್ದಾರೆ. ಈ ಹಿಂದೆ ಹಲವು ಪಾಪಗಳನ್ನು ಮಾಡಿರುವ ಕಾಂಗ್ರೆಸ್‌ ಈಗ ದೇಶದ ದಾರಿ ತಪ್ಪಿಸಲು ಮುಂದಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನಿಮ್ಮ ರಾಜಕೀಯ ಹಿತಾಸಕ್ತಿಗಾಗಿ ಉಚಿತ ಕೊಡುಗೆಗಳನ್ನು ಪ್ರಕಟಿಸಲು ಹೋಗಬೇಡಿ. ಹಳೆ ಪಿಂಚಣಿ ವ್ಯವಸ್ಥೆಯಂತಹ ಯೋಜನೆಗಳನ್ನು ಮರು ಜಾರಿಗೊಳಿಸಬೇಡಿ. ಇಂತಹ ಪಾಪಗಳ ಮೂಲಕ ಮುಂದಿನ ಪೀಳಿಗೆಯನ್ನು ಸಂಕಷ್ಟಕ್ಕೆ ದೂಡಬೇಡಿ’ ಎಂದು ರಾಜ್ಯಗಳಿಗೆ ಎಚ್ಚರಿಸಿದರು.

***

ಜನರ ಕಲ್ಯಾಣಕ್ಕಾಗಿ ರೂಪಿಸಿದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಬೇಕು. ಅದು ನಿಜವಾದ ಜಾತ್ಯತೀತತೆ. ಇದರಿಂದ ಭ್ರಷ್ಟಾಚಾರ ಮತ್ತು ತಾರತಮ್ಯ ತೊಡೆದುಹಾಕಲು ಸಾಧ್ಯ

–ನರೇಂದ್ರ ಮೋದಿ, ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT