ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯದ ಬಗ್ಗೆ ಕಾಂಗ್ರೆಸ್ ಗಂಭೀರವಾಗಿಲ್ಲ, ಮೋದಿ ಬಲಿಷ್ಠವಾಗುತ್ತಿದ್ದಾರೆ: ಮಮತಾ

Last Updated 30 ಅಕ್ಟೋಬರ್ 2021, 10:03 IST
ಅಕ್ಷರ ಗಾತ್ರ

ಪಣಜಿ: ದೇಶದ ಅತ್ಯಂತ ಹಳೆಯ ಪಕ್ಷವಾದ ಕಾಂಗ್ರೆಸ್, ರಾಜಕೀಯದ ಬಗ್ಗೆ ಗಂಭೀರವಾಗಿಲ್ಲದ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಹೆಚ್ಚು ಶಕ್ತಿಶಾಲಿಯಾಗುತ್ತಿದ್ದಾರೆ. ಕಾಂಗ್ರೆಸ್ ನಿರ್ಧಾರಗಳನ್ನು ತೆಗೆದುಕೊಳ್ಳದ ಕಾರಣ ದೇಶ ಸೊರಗುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೆಹಲಿಯ 'ದಾದಾಗಿರಿ'ಯನ್ನು ಇನ್ನುಮುಂದೆ ಸಹಿಸುವುದಿಲ್ಲ ಎಂದು ಹೇಳಿದರು.

ಮುಂದಿನ ವರ್ಷದ ಆರಂಭದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಗೋವಾ ರಾಜ್ಯಕ್ಕೆ ಮೂರು ದಿನಗಳ ಭೇಟಿಯ ಕೊನೆಯ ದಿನದಂದು ಇಲ್ಲಿ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಮತಾ ಬ್ಯಾನರ್ಜಿ ಮಾತನಾಡಿದರು. ಮುಂದಿನ ಚುನಾವಣೆಯಲ್ಲಿ ನೀವು ಪ್ರಧಾನಿ ಹುದ್ದೆಯ ರೇಸ್‌ನಲ್ಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವತ್ರಿಕ ಚುನಾವಣೆಗಳಲ್ಲಿ, ನಾನು ಕಡಿಮೆ ಪ್ರಾಮುಖ್ಯತೆಯ ಬೀದಿ ಹೋರಾಟಗಾರಳಾಗಲು ಆದ್ಯತೆ ನೀಡುತ್ತೇನೆ ಎಂದು ಹೇಳಿದರು.

66 ವರ್ಷ ವಯಸ್ಸಿನ ಟಿಎಂಸಿ ಮುಖ್ಯಸ್ಥೆ ಗುರುವಾರ ಸಂಜೆ ಗೋವಾಕ್ಕೆ ಆಗಮಿಸಿದ್ದರು. ಪಕ್ಷದ ಸ್ಥಳೀಯ ನಾಯಕರು ಮತ್ತು ಇತರ ರಾಜಕಾರಣಿಗಳೊಂದಿಗೆ ಹಲವು ಸಭೆಗಳನ್ನು ನಡೆಸಿದರು. ಪ್ರಸ್ತುತ ಬಿಜೆಪಿ ಆಡಳಿತವಿರುವ ರಾಜ್ಯದ ಎಲ್ಲಾ 40 ಸ್ಥಾನಗಳಲ್ಲೂ ಸ್ಪರ್ಧಿಸುವುದಾಗಿ ಟಿಎಂಸಿ ಪಕ್ಷ ಘೋಷಿಸಿದೆ.

ಕಾಂಗ್ರೆಸ್ ಕುರಿತಂತೆ ಮಾತನಾಡಿದ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ರಾಜಕೀಯವನ್ನು ಗಂಭೀರವಾಗಿ ಪರಿಗಣಿಸದ ಕಾರಣ ಅವರ ಬಗ್ಗೆ ನಾನು ಈಗಲೇ ಎಲ್ಲವನ್ನೂ ಹೇಳಲಾರೆ, ಮೋದಿ ಅವರು ಕಾಂಗ್ರೆಸ್‌ನಿಂದ ಹೆಚ್ಚು ಶಕ್ತಿಶಾಲಿಯಾಗಲಿದ್ದಾರೆ. ಅವರು ಸೂಕ್ತ ನಿರ್ಧಾರ ತೆಗೆದುಕೊಂಡಿದ್ದರೆ ದೇಶ ನರಳುತ್ತಿರಲಿಲ್ಲ. ಅವರಿಗೆ (ಕಾಂಗ್ರೆಸ್) ಈ ಹಿಂದೆ ಅವಕಾಶ ಸಿಕ್ಕಿತ್ತು. ಅವರು ಬಿಜೆಪಿ ವಿರುದ್ಧ ಹೋರಾಡುವ ಬದಲು ಪಶ್ಚಿಮ ಬಂಗಾಳದಲ್ಲಿ ನನ್ನ ಪಕ್ಷದ ವಿರುದ್ಧ ಸ್ಪರ್ಧಿಸಿದರು ಎಂದಿದ್ದಾರೆ.

ಪಕ್ಷದ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಲು ರಾಹುಲ್ ಗಾಂಧಿ ಗೋವಾಕ್ಕೆ ಬಂದ ದಿನವೇ ಮಮತಾ ಬ್ಯಾನರ್ಜಿ ವಾಗ್ದಾಳಿ ನಡೆಸಿದ್ದಾರೆ. ನಾವು ಬಿಜೆ‍ಪಿಯನ್ನು ಸೋಲಿಸಬೇಕೆಂದರೆ ಕಾಂಗ್ರೆಸ್ ಹೋಗುತ್ತಿರುವ ಮಾರ್ಗದಲ್ಲಿ ಹೋದರೆ ಆಗದು. ಬಿಜೆಪಿಗೆ ಪ್ರಬಲ ಪೈಪೋಟಿ ನೀಡಬೇಕು ಎಂದು ಅವರು ಹೇಳಿದರು.

ಪ್ರಾದೇಶಿಕ ಪಕ್ಷಗಳ ಜೊತೆ ಸೀಟು ಹಂಚಿಕೆ ಬಗ್ಗೆ ನನಗೆ ನಂಬಿಕ ಇದೆ. ಪ್ರಾದೇಶಿಕ ಪಕ್ಷಗಳು ಬಲಿಷ್ಠವಾಗಿರಬೇಕು ಎಂದು ನಾನು ಬಯಸುತ್ತೇನೆ. ಒಕ್ಕೂಟ ವ್ಯವಸ್ಥೆಯು ಅತ್ಯಂತ ಬಲವಾಗಿರಬೇಕು. ನಾವು ರಾಜ್ಯಗಳನ್ನು ಬಲಿಷ್ಠಗೊಳಿಸಬೇಕು, ರಾಜ್ಯಗಳು ಬಲಿಷ್ಠವಾಗಿದ್ದರೆ ಕೇಂದ್ರವು ಬಲವಾಗಿರುತ್ತದೆ. ದೆಹಲಿ ದಾದಾಗಿರಿ ಸಾಕು ಸಾಕು ಎಂದು ಅವರು ಹೇಳಿದರು.

ಕಾಂಗ್ರೆಸ್ ಯಾವ ನಿರ್ಧಾರಗಳನ್ನು ತೆಗೆದುಕೊಳ್ಳಬೇಕೆಂದು ನೀವು ಭಾವಿಸುತ್ತೀರಿ ಎಂದು ಕೇಳಿದಾಗ, ‘ನಾನು ಕಾಂಗ್ರೆಸ್ ಬಗ್ಗೆ ಚರ್ಚಿಸಲು ಹೋಗುವುದಿಲ್ಲ ಏಕೆಂದರೆ ಅದು ನನ್ನ ಪಕ್ಷವಲ್ಲ, ನಾನು ನನ್ನ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸಿದ್ದೇನೆ ಮತ್ತು ಯಾರ ಬೆಂಬಲವಿಲ್ಲದೆ ನಾವು ಮೂರು ಬಾರಿ ಸರ್ಕಾರ ರಚಿಸಿದ್ದೇವೆ. ಅವರ ಪಕ್ಷದ ಬಗ್ಗೆಅವರೇ ನಿರ್ಧರಿಸಲಿ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT