ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೃದಯಗಳ ಬೆಸೆಯುವಲ್ಲಿ ಮೋದಿ ವಿಫಲ: ಫಾರೂಕ್‌

Last Updated 7 ಡಿಸೆಂಬರ್ 2021, 15:24 IST
ಅಕ್ಷರ ಗಾತ್ರ

ಜಮ್ಮು: ಜಮ್ಮು ಮತ್ತು ಕಾಶ್ಮೀರದ ಸದ್ಯದ ಪರಿಸ್ಥಿತಿಯು ಗಂಭೀರವಾಗಿದ್ದು, ಇಲ್ಲಿನ ಜನರ ಹೃದಯಗಳ ಅಂತರ ಹಾಗೂ ದೆಹಲಿಯ ಅಂತರವನ್ನು ತೊಡೆದು ಹಾಕುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಭರವಸೆಯು ಈಗ ಹುಸಿಯಾಗಿದೆ ಎಂದು ಸಂಸದ ಫಾರೂಕ್‌ ಅಬ್ದುಲ್ಲಾ ಟೀಕಿಸಿದರು.

ಜಮ್ಮುವಿನಲ್ಲಿ ಮಂಗಳವಾರ ನಡೆದ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಸಮಾವೇಶದಲ್ಲಿ ಅವರು ಮಾತನಾಡಿದರು.

ಮೋದಿಯವರು ಯಾವ ಹೃದಯವನ್ನು ಬೆಸೆಯಲಿಲ್ಲ. ದೆಹಲಿ ಅಂತರವೂ ಕಡಿಮೆಯಾಗಲಿಲ್ಲ. ದೆಹಲಿಯಲ್ಲಿ ಜೂನ್‌ 24ರಂದು ಜಮ್ಮು ಕಾಶ್ಮೀರದ ನಾಯಕರ ಸಭೆ ನಡೆಸಿದ ನಂತರ ಕಣಿವೆ ಪ್ರದೇಶದಲ್ಲಿ ಏನೇನು ಬದಲಾವಣೆಯಾಗಿದೆ ಎಂಬುದನ್ನು ಮೋದಿ ಅವರೇ ಹೇಳಬೇಕು ಎಂದು ಫಾರೂಕ್‌ ಅಬ್ದುಲ್ಲಾ ಒತ್ತಾಯಿಸಿದರು.

ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಗಂಭೀರವಾಗಿದ್ದರೂ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂದು ಗೃಹ ಸಚಿವ ಅಮಿತ್‌ ಶಾ ಹೆಸರು ಉಲ್ಲೇಖಿಸದೇ ಪರೋಕ್ಷವಾಗಿ ಟೀಕಿಸಿದರು.

ಜಮ್ಮು ಕಾಶ್ಮೀರದ ಜನ ಮಹಾತ್ಮ ಗಾಂಧಿ ಭಾರತದ ನಂಬಿಕೆ ಇಟ್ಟಿದ್ದಾರೆ ಹೊರತು ಗೋಡ್ಸೆ ಭಾರತದಲ್ಲಲ್ಲ. ನಾವು ಯಾವುದೇ ಬೇಧಭಾವ ಇಲ್ಲದೇ ಎಲ್ಲರನ್ನು ಒಪ್ಪಿಕೊಂಡಿದ್ದೇವೆ. ನಾವು ದೌರ್ಜನ್ಯದ ವಿರುದ್ಧ ಧ್ವನಿ ಎತ್ತಿ ನಮ್ಮಿಂದ ಕಸಿದುಕೊಂಡಿರುವುದನ್ನು ವಾಪಸ್‌ ಪಡೆಯುತ್ತೇವೆ ಎಂದು ಉಚ್ಛರಿಸಿದರು.

‘ಫಾರೂಕ್‌ ಅಬ್ದುಲ್ಲಾ ದೇಶ ತೊರೆಯಲಿ’ ಎಂಬ ಆರ್‌ಎಸ್‌ಎಸ್‌ ಮುಖಂಡ ಇಂದ್ರೇಶ್‌ಕುಮಾರ್‌ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಫಾರೂಕ್‌ ಅಬ್ದುಲ್ಲಾ, ನಾನು ಭಾರತೀಯ. ಭಾರತೀಯನಾಗಿಯೇ ಸಾಯುತ್ತೇನೆ. ಪ್ರಜಾಪ್ರಭುತ್ವ ಹಾಗೂ ಗಾಂಧೀಜಿ ಅವರ ಅಹಿಂಸಾ ತತ್ವಗಳನ್ನು ಅಪ್ಪಿಕೊಂಡು ಜಮ್ಮು ಮತ್ತು ಕಾಶ್ಮೀರವು ಭಾರತದ ಭಾಗವಾಗಲು ಒಪ್ಪಿಕೊಂಡಿತ್ತು ಎಂದು ತಿರುಗೇಟು ನೀಡಿದರು.

‘ನಮ್ಮ ಹಕ್ಕುಗಳಾಗಿ ನಾವು ಹೋರಾಡಬೇಕು. ನಾವು ಬಂದೂಕು, ಗ್ರೆನೆಡ್‌, ಕಲ್ಲು ಹಿಡಿದಿಲ್ಲ. ನಮಗೆ ಪ್ರಧಾನಿ, ರಾಷ್ಟ್ರಪತಿಯ ಹುದ್ದೆ ಬೇಕಿಲ್ಲ. ನಮ್ಮ ಹಕ್ಕುಗಳಿಗಾಗಿ ಮಾತ್ರ ಹೋರಾಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT