ಭೋಪಾಲ್: ಭಾರತೀಯ ಸಂಸ್ಕೃತಿಯಲ್ಲಿ ‘ಕೋತಿ’ ಎಂಬ ಪ್ರಾಣಿಯನ್ನು ಜನ ಪೂಜನೀಯ ಭಾವದಿಂದ ಕಾಣುತ್ತಾರೆ. ಭಗವಂತ ಆಂಜನೇಯನ ಸ್ವರೂಪ ಈ ಪ್ರಾಣಿ ಎಂದು ಗೌರವದಿಂದ ಅನೇಕರು ಕಾಣುತ್ತಾರೆ.
ಈ ಹಿನ್ನೆಲೆಯಲ್ಲಿ ಎಲ್ಲಾದರೂ ಕೋತಿಗಳು ಸತ್ತಾಗ ಅವುಗಳಿಗೆ ಪೂಜೆ ಸಲ್ಲಿಸಿ ಕೆಲ ಜನ ಸೇರಿ ಅಂತ್ಯ ಸಂಸ್ಕಾರ ಮಾಡುವುದನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ, ತಮ್ಮೂರಿನ ಕೋತಿಯೊಂದು ಮೃತಪಟ್ಟಾಗ ಬರೋಬ್ಬರಿ 1500 ಕ್ಕೂ ಹೆಚ್ಚು ಜನ ಸೇರಿಕೊಂಡು ಅದರ ಅಂತ್ಯ ಸಂಸ್ಕಾರ ಮಾಡಿದ್ದಾರೆ ಇಲ್ಲೊಂದು ಗ್ರಾಮದವರು!
ಹೌದು, ಮಧ್ಯಪ್ರದೇಶದ ರಾಜಘರ್ ಜಿಲ್ಲೆಯ ದಾಲುಪುರಾ ಎಂಬ ಗ್ರಾಮದಲ್ಲಿ ಈ ಘಟನೆ ಇತ್ತೀಚೆಗೆ ನಡೆದಿದೆ. ಗ್ರಾಮದಲ್ಲಿದ್ದ ಕೋತಿಯೊಂದು ಅನಾರೋಗ್ಯದಿಂದ ಮೃತಪಟ್ಟಿತ್ತು. ಊರಿನಲ್ಲಿ ಜನರ ಪ್ರೀತಿ ಪಾತ್ರವಾಗಿದ್ದ ಈ ಮಂಗನನಿಧನಕ್ಕೆ ಗ್ರಾಮಸ್ಥರೆಲ್ಲರೇ ಮರುಗಿದ್ದಾರೆ.
ಅಲ್ಲದೇ ತಾವು ಪೂಜನೀಯ ಭಾವನೆಯಿಂದ ಕಾಣುತ್ತಿದ್ದ ಮಂಗನ ಅಂತ್ಯಕ್ರಿಯೆಯನ್ನು ಮನುಷ್ಯರಿಗೆ ಮಾಡುವ ಅಂತ್ಯಕ್ರಿಯೆಯಂತೆ ಧಾರ್ಮಿಕ ವಿಧಿ ವಿಧಾನಗಳಿಂದ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸುಮಾರು 1500 ಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು. ಘಟನೆಗೆ ಸಂಬಂಧಿಸಿದ ವಿಡಿಯೊಗಳು ವೈರಲ್ ಆಗಿವೆ.
ತಿಥಿನೂ ಮಾಡಿದರು!
ದಾಲುಪುರಾ ಗ್ರಾಮದ ಜನ ಕೋತಿಯ ಅಂತ್ಯಸಂಸ್ಕಾರ ಮಾಡಿ ಸುಮ್ಮನಾಗಲಿಲ್ಲ. ಮೂರು ದಿನದ ಬಳಿಕ ಕೋತಿಯ ತಿಥಿ ಕಾರ್ಯಕ್ರಮವನ್ನೂ ಮಾಡಿದ್ದಾರೆ. ಈ ವೇಳೆ ಸಾವಿರಕ್ಕೂ ಹೆಚ್ಚು ಜನರಿಗೆ ತಿಥಿ ಊಟ ಉಣಬಡಿಸಲಾಗಿದೆ.
ಕೇಸ್ ಹಾಕಿದ ಪೊಲೀಸರು!
ಮಧ್ಯಪ್ರದೇಶದಲ್ಲಿಯೂ ವ್ಯಾಪಕವಾಗಿ ಕೋವಿಡ್ ಹರಡುತ್ತಿರುವುದರಿಂದ ಸಭೆ ಸಮಾರಂಭಗಳಿಗೆ ಜನರ ಸಂಖ್ಯೆಯನ್ನು ನಿರ್ಭಂಧಿಸಲಾಗಿದೆ. ಆದರೆ ದಾಲುಪುರಾ ಗ್ರಾಮದ ಜನ ಕೋತಿ ಅಂತ್ಯ ಸಂಸ್ಕಾರದ ವೇಳೆ ಕೋವಿಡ್ ನಿಯಮಗಳನ್ನು ಅನುಸರಿಸಿಲ್ಲ ಎಂದು ಪೊಲೀಸರು ಪ್ರಕರಣ ದಾಖಲಿಸಿ ಇಬ್ಬರನ್ನು ಬಂಧಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಇದರಿಂದ ಭಯಗೊಂಡಿರುವ ಅಂತ್ಯಸಂಸ್ಕಾರದಲ್ಲಿ ಭಾಗಿಯಾದ ಜನ ಪೊಲೀಸರಿಂದ ತಪ್ಪಿಸಿಕೊಳ್ಳಲು ಬಚ್ಚಿಟ್ಟುಕೊಳ್ಳುತ್ತಿದ್ದಾರೆ ಎಂದು ವರದಿ ಹೇಳಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.