ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸತ್ತಿನ ಮುಂಗಾರು ಅಧಿವೇಶನ: ಪ್ರತಿಭಟನೆ ನಡುವೆಯೇ ಪ್ರಶ್ನೋತ್ತರ ಅವಧಿ

ರಾಜ್ಯಸಭೆಯಲ್ಲಿ ಒಂದಿಷ್ಟು ಆಶಾಕಿರಣ
Last Updated 21 ಜುಲೈ 2022, 17:58 IST
ಅಕ್ಷರ ಗಾತ್ರ

ನವದೆಹಲಿ:ವಿರೋಧ ಪಕ್ಷಗಳ ಪ್ರತಿಭಟನೆ, ಗದ್ದಲಗಳಿಂದ ಮೂರು ದಿನಗಳಿಂದ ಸರಿಯಾಗಿ ನಡೆಯದ ರಾಜ್ಯಸಭೆಯ ಕಲಾಪವು ಗುರುವಾರ ಪ್ರಶ್ನೋತ್ತರ ಅವಧಿಗೆ ಸೀಮಿತವಾಯಿತು.

ವಿರೋಧ ಪಕ್ಷಗಳ ಪ್ರತಿಭಟನೆಯ ನಡುವೆಯೂ ಗುರುವಾರ ಮಧ್ಯಾಹ್ನ 12 ಗಂಟೆಗೆ ಪ್ರಶ್ನೋತ್ತರ ಅವಧಿಗೆ ಅವಕಾಶ ಕಲ್ಪಿಸಲಾಯಿತು. ಈ ವೇಳೆಯಲ್ಲಿ ಕೆಲ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಸಂಬಂಧಿಸಿದ ಸಚಿವರು ಉತ್ತರ ನೀಡಿದರು.

ಗುರುವಾರ ಪ್ರಶ್ನೋತ್ತರ ಅವಧಿಗೆ 15 ಮೌಖಿಕ ಪ್ರಶ್ನೆಗಳನ್ನು ಪಟ್ಟಿ ಮಾಡಲಾಗಿತ್ತು. ಆ ಪೈಕಿ 13
ಪ್ರಶ್ನೆಗಳನ್ನು ಕೇಳಲು ಸಾಧ್ಯವಾಯಿತು. ಇದಕ್ಕೂ ಮುನ್ನ ವಿರೋಧ ಪಕ್ಷಗಳ ಪ್ರತಿಭಟನೆಯ ಕಾರಣದಿಂದ ಕಲಾಪವನ್ನು ಎರಡು ಬಾರಿ ಮುಂದೂಡಲಾಗಿತ್ತು.

ಜಿಎಸ್‌ಟಿ ಮಂಡಳಿಯಲ್ಲಿ ಪ್ರಶ್ನಿಸಿ: ‘ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ ವಿರೋಧಿಸಿ ವಿರೋಧ ಪಕ್ಷಗಳು ರಾಜ್ಯಸಭೆ, ಲೋಕಸಭೆಯಲ್ಲಿ ಪ್ರತಿಭಟಿಸುವ ಬದಲಿಗೆ, ಜಿಎಸ್‌ಟಿ ಮಂಡಳಿಯಲ್ಲಿ ಧ್ವನಿ ಎತ್ತಿ’ ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳಿಗೆ ತಿಳಿಸಿದರು.

‘ಜಿಎಸ್‌ಟಿಗೆ ಸಂಬಂಧಿಸಿದ ವಿಷಯಗಳನ್ನು ಅವರು (ಬಿಜೆಪಿಯೇತರ ರಾಜ್ಯ ಸರ್ಕಾರಗಳು) ಜಿಎಸ್‌ಟಿ ಮಂಡಳಿಯಲ್ಲಿ ಚರ್ಚಿಸಬೇಕು. ಅದನ್ನು ಬಿಟ್ಟು ಅಧಿವೇಶನದಲ್ಲಿ ಫಲಕಗಳನ್ನು ಪ್ರದರ್ಶಿಸಿ ಪ್ರತಿಭಟಿಸುವುದು ಸರಿಯಲ್ಲ’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ, ಕೋವಿಡ್‌ ಲಸಿಕೆ, ಅಗ್ನಿಪಥ ಯೋಜನೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಸುವ ನಿಟ್ಟಿನಲ್ಲಿ ಕೆಲ ಜನಪ್ರತಿನಿಧಿಗಳು ಕಾರ್ಯೋನ್ಮುಖರಾಗಿದ್ದಾರೆ’ ಎಂದು ಅವರು ಯಾರ ಹೆಸರನ್ನೂ ಹೇಳದೆ ವಿರೋಧ ಪಕ್ಷಗಳ ನಾಯಕರನ್ನು ದೂರಿದರು.

94 ಯುಟ್ಯೂಬ್‌ ಚಾನೆಲ್‌ಗಳ ನಿಷೇಧ: ಕೇಂದ್ರ ಸರ್ಕಾರ 2021– 22ರಲ್ಲಿ ದೇಶ ವಿರೋಧ ಚಟುವಟಿಕೆಗಳಲ್ಲಿ ತೊಡಗಿದ್ದ 94 ಯುಟ್ಯೂಬ್‌ ಚಾನೆಲ್‌ಗಳೂ, ಸಾಮಾಜಿಕ ಮಾಧ್ಯಮಗಳಲ್ಲಿನ 19 ಖಾತೆಗಳು ಮತ್ತು 747 ಯುಆರ್‌ಎಲ್‌ಗಳನ್ನು (ಯುನಿಫಾರಂ ರಿಸೋರ್ಸ್‌ ಲೊಕೇಟರ್‌) ನಿಷೇಧಿಸಿದೆ ಎಂದು ಸಚಿವರು ಪ್ರಶ್ನೆಯೊಂದಕ್ಕೆ ಮಾಹಿತಿ ನೀಡಿದರು.

ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರ ವಿರುದ್ಧ ಕ್ರಮಗಳನ್ನು ತೆಗೆದುಕೊಳ್ಳುವ ವಿಚಾರದಲ್ಲಿ ಸರ್ಕಾರ ಯಾವುದೇ ರೀತಿಯಲ್ಲೂ ಹಿಂಜರಿಯುವುದಿಲ್ಲ ಎಂದು ಅವರು ಹೇಳಿದರು.

ಲೋಕಸಭೆ: ಕಲಾಪ ಮುಂದೂಡಿಕೆ

ಭಾರತೀಯ ಅಂಟಾರ್ಕಟಿಕ್‌ ಮಸೂದೆ– 2022ರ ಮಂಡನೆ ಸಂದರ್ಭದಲ್ಲಿ ವಿರೋಧ ಪಕ್ಷಗಳ ಸದಸ್ಯರು ಹಾಜರಿರುವುದು ಸೂಕ್ತ ಎಂದು ಕೇಂದ್ರ ಸರ್ಕಾರ ಮನವಿ ಮಾಡಿದ ಬಳಿಕ ಲೋಕಸಭಾ ಸ್ಪೀಕರ್‌, ಕಲಾಪವನ್ನು ಗುರುವಾರ ದಿನದ ಮಟ್ಟಿಗೆ ಮುಂದೂಡಿದರದು.

ಲೋಕಸಭಾ ಕಲಾಪಬೆಳಿಗ್ಗೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್‌ ಸದಸ್ಯರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸಿದ ಕ್ರಮವನ್ನು ಖಂಡಿಸಿದ ಕಾಂಗ್ರೆಸ್‌ ಸಂಸದರು, ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟಿಸಿದರು. ಬಳಿಕ ಸ್ಪೀಕರ್‌ ಓಂ ಬಿರ್ಲಾ ಅವರು ಕಲಾಪವನ್ನು ಕೆಲ ನಿಮಿಷಗಳ ಕಾಲ ಮುಂದೂಡಿದರು.

ಮತ್ತೆ 11.30ಕ್ಕೆ ಕಲಾಪ ಆರಂಭವಾದಾಗ, ಕಾಂಗ್ರೆಸ್‌ ಸದಸ್ಯರು ಸದನಕ್ಕೆ ಬರಲಿಲ್ಲ. ಡಿಎಂಕೆ ಸದಸ್ಯರು ಕಲಾಪ ಬಹಿಷ್ಕರಿಸಿ ಹೊರನಡೆದರು.

ಮಧ್ಯಾಹ್ನ 2.15ಕ್ಕೆ ಮತ್ತೆ ಕಲಾಪ ಆರಂಭವಾದಾಗ, ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು, ಭಾರತೀಯ ಅಂಟಾರ್ಕಟಿಕ್‌ ಮಸೂದೆ– 2022 ಅತ್ಯಂತ ಮಹತ್ವದ್ದಾಗಿದ್ದು, ಸದನದಲ್ಲಿ ವಿರೋಧ ಪಕ್ಷಗಳು ಹಾಜರಿದ್ದಾಗ ಮಸೂದೆಯನ್ನು ಮಂಡನೆಗೆ ಪರಿಗಣಿಸುವುದು ಸೂಕ್ತ ಎಂದು ಸ್ಪೀಕರ್‌ ಬಳಿ ಮನವಿ ಮಾಡಿದರು.ಸದನದಲ್ಲಿ ವಿರೋಧ ಪಕ್ಷಗಳ ಸದಸ್ಯರುಕಡಿಮೆ ಸಂಖ್ಯೆಯಲ್ಲಿ ಹಾಜರಿದ್ದುದನ್ನು ಗಮನಿಸಿದ ಸ್ಪೀಕರ್‌ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT