ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊರ್ಬಿ ತೂಗು ಸೇತುವೆ ದುರಂತದಲ್ಲಿ ಆರೋಪಿ ಪರವಾಗಿ ನಿಂತ ಪಾಟಿದಾರ್‌ ಸಮುದಾಯ

Last Updated 4 ಫೆಬ್ರುವರಿ 2023, 11:37 IST
ಅಕ್ಷರ ಗಾತ್ರ

ರಾಜ್‌ಕೋಟ್‌(ಸೌರಾಷ್ಟ್ರ): ಮೊರ್ಬಿ ಸೇತುವೆ ಕುಸಿತ ಪ್ರಕರಣದ ಪ್ರಮುಖ ಆರೋಪಿ ‘ಒರೆವಾ ಗ್ರೂಪ್‌’ನ ವ್ಯವಸ್ಥಾಪಕ ನಿರ್ದೇಶಕ ಜೈಸುಖ್‌ ಪಟೇಲ್‌ಗೆ ಬೆಂಬಲ ನೀಡಲು ಪಾಟಿದಾರ್ ಸಮುದಾಯದ ಉಮಿಯಾಧಾಮ್ ಸಿದ್ಸಾರ್ (ಧಾರ್ಮಿಕ ಕೇಂದ್ರ) ಪ್ರತಿಜ್ಞೆ ಮಾಡಿದೆ.

ಮೊರ್ಬಿ ತೂಗು ಸೇತುವೆ ಕುಸಿತ ಪ್ರಕರಣದಲ್ಲಿ 35 ಮಕ್ಕಳು ಸೇರಿದಂತೆ 132 ಜನರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಜೈಸುಖ್‌ ಪಟೇಲ್ ಪ್ರಮುಖ ಆರೋಪಿ. ಪೊಲೀಸರು ಜನವರಿ 27 ರಂದು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಅವರನ್ನು ಪ್ರಮುಖ ಆರೋಪಿ ಎಂದು ಹೆಸರಿಸಿದ್ದಾರೆ.

ಜನವರಿ 31 ರಂದು ಪಟೇಲ್ ನ್ಯಾಯಾಲಯಕ್ಕೆ ಶರಣಾಗಿದ್ದರು. ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಬುಧವಾರ, ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಫೆಬ್ರುವರಿ 8 ರವರೆಗೆ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದೆ.

ಉಮಿಯಾ ಸಿದ್ಸಾರ್ ಟ್ರಸ್ಟಿಗಳು ಜೈಸುಖ್‌ ಪಟೇಲ್ ಅವರನ್ನು ಸಮರ್ಥಿಸಿ, ಫೆಬ್ರವರಿ 4 ರಂದು ಸಮುದಾಯಕ್ಕೆ ಬಹಿರಂಗ ಪತ್ರ ಬರೆದಿದ್ದಾರೆ. ‘ಜೈಸುಖ್ ಪಟೇಲ್ ಅವರು ತಮ್ಮ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ತೂಗು ಸೇತುವೆ ದುರಸ್ತಿ ಕಾರ್ಯವನ್ನು ಕೈಗೊಂಡಿದ್ದರು. ಅದರಲ್ಲಿ ಅವರಿಗೆ ಯಾವುದೇ ವಾಣಿಜ್ಯ ಆಸಕ್ತಿ ಇರಲಿಲ್ಲ. ದುರಸ್ತಿಗೆ ತಗಲುವ ವೆಚ್ಚವನ್ನು ಅವರು ಪಡೆದಿರಲಿಲ್ಲ’ ಎಂದು ಹೇಳಿದೆ.

ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಇಂತಹವರಿಗೆ ಕಿರುಕುಳ ನೀಡಿದರೆ, ಯಾವುದೇ ಉದ್ಯಮಿ ಸಾಮಾಜಿಕ ಹೊಣೆಗಾರಿಕೆಯಿಂದ ಯಾವ ಕೆಲಸ ಮಾಡಲೂ ಮುಂದೆ ಬರುವುದಿಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಬಿಜೆಪಿಯ ಮಾಜಿ ಶಾಸಕ ಬವಾಂಜಿ ಮೆಟಾಲಿಯಾ ಅವರೂ ಜೈಸುಖ್‌ ಪಟೇಲ್ ಅವರನ್ನು ಬೆಂಬಲಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳು ಜೈಸುಖ್‌ ಪಟೇಲ್‌ ಅವರನ್ನು ಕೆಟ್ಟದಾಗಿ ಬಿಂಬಿಸುತ್ತಿವೆ ಎಂದು ಆರೋಪಿಸಿದ್ದಾರೆ. ‘ಜೈಸುಖ್ ಪಟೇಲ್‌ಗೆ ಬೆಂಬಲ ನೀಡುವ ಉಮಿಯಾ ಸಿದ್ಸಾರ್ ಟ್ರಸ್ಟಿಗಳ ನಿರ್ಧಾರದೊಂದಿಗೆ ನಾನು ನಿಲ್ಲುತ್ತೇನೆ. ಕಾನೂನು ತನ್ನದೇ ಆದ ಕ್ರಮವನ್ನು ತೆಗೆದುಕೊಳ್ಳಲಿ. ಆದರೆ ಜೈಸುಖ್‌ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಮಾಡಿದ ಅವಹೇಳನವನ್ನು ಖಂಡಿಸುತ್ತೇವೆ. ಮೊರ್ಬಿಯ ಪರಂಪರೆಯನ್ನು ರಕ್ಷಿಸಲು ಅವರು ಸೇತುವೆಯ ದುರಸ್ತಿಯ ಜವಾಬ್ದಾರಿಯನ್ನು ತೆಗೆದುಕೊಂಡಿದ್ದರು’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT