ಶನಿವಾರ, ಜೂನ್ 19, 2021
28 °C

ಮನುಷ್ಯರು ಹಾಗೂ ಆನೆ ನಡುವಿನ ಸಂಘರ್ಷ: ವರ್ಷಕ್ಕೆ 100 ಆನೆಗಳ ಸಾವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮನುಷ್ಯರು ಮತ್ತು ಆನೆಗಳ ನಡುವೆ ನಡೆಯುವ ಸಂಘರ್ಷದಲ್ಲಿ ಪ್ರತಿ ವರ್ಷ 500ಕ್ಕೂ ಅಧಿಕ ಜನರು ಹಾಗೂ ನೂರಕ್ಕೂ ಅಧಿಕ ಆನೆಗಳು ಮೃತಪಟ್ಟಿವೆ ಎಂದು ಪರಿಸರ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ. 

ಆಗಸ್ಟ್‌ 12ರಂದು ಅಂತರರಾಷ್ಟ್ರೀಯ ಆನೆ ದಿನದ ಹಿನ್ನೆಲೆಯಲ್ಲಿ ಈ ಮಾಹಿತಿಯನ್ನು ಕಾರ್ಯಕ್ರಮವೊಂದರಲ್ಲಿ ಸಚಿವಾಲಯ ಬಿಡುಗಡೆಗೊಳಿಸಿದೆ. 2017ರಲ್ಲಿ ನಡೆದ ಸಮೀಕ್ಷೆಯಂತೆ ಭಾರತದಲ್ಲಿ 30 ಸಾವಿರ ಆನೆಗಳಿವೆ. ಮನುಷ್ಯರು ಮತ್ತು ಆನೆಗಳ ನಡುವೆ ನಡೆಯುತ್ತಿರುವ ಸಂಘರ್ಷದಿಂದ ಎರಡೂ ಕಡೆಗಳಲ್ಲಿ ಸಾವು ಸಂಭವಿಸಿದೆ ಎಂದು ಸಚಿವಾಲಯ ತಿಳಿಸಿದೆ. 

ಈ ಕುರಿತು ಮಾತನಾಡಿದ ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್‌, ‘ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿ ಇರಿಸುವ ಆನೆಗಳ ಸಂರಕ್ಷಣೆ ಅತ್ಯಾವಶ್ಯಕ. ಮನುಷ್ಯರ ಜೊತೆಗಿನ ಸಂಘರ್ಷಕ್ಕೆ ಕಡಿವಾಣ ಹಾಕಲು ಆನೆಗಳನ್ನು ಕಾಡಿನಲ್ಲೇ ಇರುವಂತೆ ನೋಡಿಕೊಳ್ಳಬೇಕಾಗಿದೆ. ಇದಕ್ಕಾಗಿ ಅಗತ್ಯ ಮೇವು ಹಾಗೂ ನೀರಿನ ಸಂಗ್ರಹಕ್ಕೆ ಬೇಕಾದ ಯೋಜನೆಗಳನ್ನು ಕೇಂದ್ರ ಸರ್ಕಾರ ಅನುಷ್ಠಾನಗೊಳಿಸುತ್ತಿದ್ದು, ಮುಂದಿನ ವರ್ಷದಿಂದಲೇ ಇದರ ಫಲಿತಾಂಶ ನಮ್ಮ ಮುಂದೆ ಇರಲಿದೆ’ ಎಂದರು. 

ಇದೇ ವೇಳೆ ಕಳೆದ ಮೇ 27ರಂದು ಕೇರಳದಲ್ಲಿ ನಡೆದ ಗರ್ಭಿಣಿ ಆನೆ ಹತ್ಯೆ ಪ್ರಕರಣವನ್ನು ಖಂಡಿಸಿದ ಕೇಂದ್ರ ಪರಿಸರ ಖಾತೆ ರಾಜ್ಯ ಸಚಿವ ಬಾಬುಲ್‌ ಸುಪ್ರಿಯೊ, ‘ನಾವೆಲ್ಲರೂ ಆನೆಗಳ ಸಂರಕ್ಷಿಸಬೇಕು. ಕೇರಳದಲ್ಲಿ ನಡೆದದ್ದು ಅಮಾನವೀಯ ಕೃತ್ಯ. ಅಂಥ ಕ್ರಿಮಿನಲ್‌ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು  ತಿಳಿಸಿದರು. 

‘ಮನುಷ್ಯರ ಜೊತೆ ಸಂಘರ್ಷದ ಕಾರಣದಿಂದ ಪ್ರತಿ ವರ್ಷ ನೂರಕ್ಕೂ ಅಧಿಕ ಆನೆಗಳು ಸಾಯುತ್ತಿವೆ. ಕಳೆದ ಐದು ವರ್ಷದಲ್ಲಿ ಆನೆಗಳ ಸಂರಕ್ಷಣೆಗಾಗಿ ಹೆಚ್ಚಿನ ಕಾರಿಡಾರ್‌ಗಳನ್ನು ಗುರುತಿಸಲಾಗಿದೆ. ಆನೆಗಳ ಸಂರಕ್ಷಣೆಗೆ ಮೀಸಲಿಟ್ಟಿದ್ದ ಬಜೆಟ್‌ ಗಾತ್ರವನ್ನು ಶೇ 30 ಏರಿಕೆ ಮಾಡಲಾಗಿದೆ’ ಎಂದು ಅರಣ್ಯ ಸಚಿವಾಲಯದ ಹೆಚ್ಚುವರಿ ಪ್ರಧಾನ ನಿರ್ದೇಶಕ(ವನ್ಯಜೀವಿ ವಿಭಾಗ) ಸೌಮಿತ್ರ ದಾಸ್‌ಗುಪ್ತಾ ತಿಳಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು