ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹುತೇಕ ಇತಿಹಾಸಕಾರರು ಮೊಘಲರಿಗೇ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ: ಅಮಿತ್ ಶಾ

Last Updated 10 ಜೂನ್ 2022, 13:28 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಬಹುತೇಕ ಇತಿಹಾಸಕಾರರು ಮೊಘಲರ ಇತಿಹಾಸವನ್ನು ದಾಖಲಿಸುವುದಕ್ಕೇ ಹೆಚ್ಚು ಪ್ರಾಮುಖ್ಯತೆ ನೀಡಿದ್ದಾರೆ. ಪಾಂಡ್ಯರು, ಚೋಳರು, ಮೌರ್ಯರು ಸೇರಿದಂತೆ ಹಲವು ಮಹೋನ್ನತ ಸಾಮ್ರಾಜ್ಯಗಳ ಇತಿಹಾಸವನ್ನು ಕಡೆಗಣಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ನಾವೀಗ ಸ್ವತಂತ್ರರಾಗಿದ್ದು, ಇತಿಹಾಸ ದಾಖಲಿಸುವ ವಿಷಯದಲ್ಲಿ ಈಗ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.

ದೆಹಲಿಯಲ್ಲಿ ‘ಮಹಾರಾಣಾ–ಸಹಸ್ರ ವರ್ಷ ಕ ಧರ್ಮಯುದ್ಧ’ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಅವರು, ಇತಿಹಾಸವನ್ನು ಪ್ರಸ್ತುತಕ್ಕಾಗಿ ಪುಸ್ತಕದಲ್ಲಿ ದಾಖಲಿಸುವಂತೆ ಇತಿಹಾಸಕಾರರಿಗೆ ಹೇಳಿದರು. ಈ ಪುಸ್ತಕವನ್ನು ಸರ್ಕಾರಕ್ಕೆ ಆಪ್ತರಾದವರು ರಚಿಸಿಲ್ಲ. ಸತ್ಯ ಸಂಗತಿಗಳ ಆಧಾರದ ಮೇಲೆ ಇತಿಹಾಸಕಾರರು ರಚಿಸಿದ್ದಾರೆ ಎಂದು ಹೇಳಿದರು.

ಭಾರತದ ಹಲವು ರಾಜರು ಆಕ್ರಮಣಕಾರರ ವಿರುದ್ಧ ವೀರಾವೇಷದಿಂದ ಹೋರಾಡಿ ತಮ್ಮ ಪ್ರದೇಶಗಳನ್ನು ರಕ್ಷಿಸಿಕೊಂಡಿದ್ದರು. ದುರಾದೃಷ್ಟವಶಾತ್, ಈ ಕುರಿತ ವಿವರವಾದ ಮಾಹಿತಿ ಇತಿಹಾಸ ಪುಸ್ತಕಗಳಲ್ಲಿ ಸಿಗುತ್ತಿಲ್ಲ ಎಂದರು.

ನಮ್ಮ ಸಂಸ್ಕೃತಿ, ಭಾಷೆ ಮತ್ತು ಧರ್ಮದ ರಕ್ಷಣೆಗೆ ಸಾವಿರಾರು ವರ್ಷಗಳ ಕಾಲ ಅವರು ಹೋರಾಡಿದ್ದಾರೆ. ಆ ಹೋರಾಟದ ಗುಣ ನಮ್ಮ ನರನಾಡಿಗಳಲ್ಲಿ ಈಗಲೂ ಇದೆ. ರಾಜರ ಹೋರಾಟದ ಇತಿಹಾಸವನ್ನು ಜಗತ್ತಿನ ಮುಂದೆ ತೆರೆದಿಡಲು ಸಜ್ಜಾಗಿದ್ದೇವೆ ಎಂದು ಹೇಳಿದರು.

‘ನಾನು ಇತಿಹಾಸಕಾರರಿಗೆ ಹೇಳಲು ಬಯಸುತ್ತೇನೆ. ನಮ್ಮ ದೇಶವನ್ನು ಹಲವು ಸಾಮ್ರಾಟರು ಆಳಿದ್ದಾರೆ. ಆದರೆ, ಇತಿಹಾಸ ದಾಖಲಿಸುವಾಗ ಮೊಘಲರ ಬಗ್ಗೆ ಮಾತ್ರ ಗಮನ ಹರಿಸಲಾಗಿದೆ ಮತ್ತು ಅದನ್ನೇ ಬರೆಯಲಾಗಿದೆ. ಪಾಂಡ್ಯಾ ಸಾಮ್ರಾಜ್ಯವು 800 ವರ್ಷಗಳ ಕಾಲ ಆಡಳಿತ ನಡೆಸಿದೆ. ಅಹೊಮ್ ಸಾಮ್ರಾಜ್ಯವು 600 ವರ್ಷಗಳ ಕಾಲ ಅಸ್ಸಾಂನಲ್ಲಿ ಆಳ್ವಿಕೆ ನಡೆಸಿತ್ತು. ಭಕ್ತಿಯಾರ್ ಖಿಲ್ಜಿ, ಔರಂಗಜೇಬನನ್ನು ಸೋಲಿಸಿ ಅಸ್ಸಾಂ ಅನ್ನು ಸ್ವತಂತ್ರವಾಗಿ ಇರಿಸಿದ್ದರು. ಚೋಳ ಮತ್ತು ಪಲ್ಲವರು 600 ವರ್ಷಗಳ ಕಾಲ ಆಳ್ವಿಕೆ ನಡೆಸಿದ್ದರು ಎಂದು ಅಮಿತ್ ಶಾ ಹೇಳಿದ್ದಾರೆ.

‘ಮೌರ್ಯರು ಅಫ್ಗಾನಿಸ್ತಾನದಿಂದ ಲಂಕಾವರೆಗೆ ಸಂಪೂರ್ಣ ದೇಶದಲ್ಲಿ 550 ವರ್ಷಗಳ ಕಾಲ ಆಡಳಿತ ನಡೆಸಿದ್ದರು. ಗುಪ್ತರು 400 ವರ್ಷಗಳ ಕಾಲ ಇದ್ದರು. ಸಮುದ್ರಗುಪ್ತ ಭಾರತವನ್ನು ಒಗ್ಗೂಡಿಸುವ ಕನಸು ಹೊಂದಿದ್ದರು. ದೇಶದಾದ್ಯಂತ ಸಾಮ್ರಾಜ್ಯ ವಿಸ್ತರಿಸಿದ್ದರು. ಆದರೆ, ಈ ಬಗ್ಗೆ ತಿಳಿಯಲು ಸರಿಯಾದ ಉಲ್ಲೇಖವಿರುವ ಪುಸ್ತಕ ಲಭ್ಯವಿಲ್ಲ’ಎಂದು ಶಾ ಹೇಳಿದ್ದಾರೆ.

ಈ ರಾಜವಂಶಗಳ ಕುರಿತಾದ ಇತಿಹಾಸ ಪುಸ್ತಕಗಳನ್ನು ರಚಿಸಬೇಕು. ಇಂತಹ ಪುಸ್ತಕಗಳನ್ನು ರಚಿಸಿದರೆ ಮುಂಬರುವ ದಿನಗಳಲ್ಲಿ ನಾವು ಈಗ ತಿಳಿದಿರುವ ತಪ್ಪು ಇತಿಹಾಸವು ಕ್ರಮೇಣ ಮರೆಯಾಗುತ್ತದೆ ಎಂದು ಅಮಿತ್ ಶಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT