ಸೋಮವಾರ, ಮೇ 10, 2021
19 °C
ಮಧ್ಯಪ್ರದೇಶದ ಶಿವಪುರಿ ಆಸ್ಪತ್ರೆಯಲ್ಲಿ ನಡೆದ ಘಟನೆ

ಆಮ್ಲಜನಕ ಪೂರೈಕೆ ತೆಗೆದ ಕಾರಣ ಕೋವಿಡ್ ರೋಗಿ ಸಾವು: ಮೃತರ ಸಂಬಂಧಿಕರ ಆರೋಪ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ಶಿವಪುರಿ, ಮಧ್ಯಪ್ರದೇಶ: ಇಲ್ಲಿನ ಆಸ್ಪತ್ರೆಯೊಂದರ ಐಸಿಯು ವಾರ್ಡ್‌ನಲ್ಲಿ ‘ಕೋವಿಡ್‌ ರೋಗಿಗೆ ನೀಡಿದ್ದ ಕಿರು ಆಮ್ಲಜನಕ ಪೂರೈಕೆಯ ನೆರವನ್ನು ವಾರ್ಡ್‌ಬಾಯ್‌ ಬಲವಂತವಾಗಿ ತೆಗೆದ ಪರಿಣಾಮ, ರೋಗಿ ಸಾವನ್ನಪ್ಪಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಆರೋಪಿಸಿದ್ದಾರೆ.

‘ಕೋವಿಡ್‌ 19‘ನಿಂದ ಬಳಲುತ್ತಿದ್ದ 52 ವರ್ಷದ ಸರ್ಕಾರಿ ಶಾಲೆಯ ಶಿಕ್ಷಕರು, ಚಿಕಿತ್ಸೆಗಾಗಿ ಇಲ್ಲಿನ ಆಸ್ಪತ್ರೆಗೆ ದಾಖಲಾಗಿದ್ದರು. ಉಸಿರಾಟದ ತೊಂದರೆ ಕಾರಣ ಅವರಿಗೆ ಆಮ್ಲಜನಕದ ನೆರವು ನೀಡಲಾಗಿತ್ತು. ಅದೇ ಆಸ್ಪತ್ರೆಯಲ್ಲಿದ್ದ ಮತ್ತೊಬ್ಬ ವ್ಯಕ್ತಿಗೆ ಆಮ್ಲಜನಕದ ನೆರವು ನೀಡುವುದಕ್ಕಾಗಿ ಆಸ್ಪತ್ರೆಯ ವಾರ್ಡ್‌ಬಾಯ್‌ ಈ ಶಿಕ್ಷಕರಿಗೆ ನೀಡಿದ್ದ ಕಿರು ಆಮ್ಲಜನಕ ಪೂರೈಕೆಯನ್ನು ಬಲವಂತವಾಗಿ ತೆಗೆದಿದ್ದಾರೆ. ಇದರಿಂದ ಅವರು ಸಾವನ್ನಪ್ಪಿದ್ದಾರೆ ಎಂಬುದು ಕುಟುಂಬದ ಸದಸ್ಯರ ಆರೋಪ.

ಈ ಘಟನೆ ಬುಧವಾರ ನಡೆದಿದೆ. ಆದರೆ, ಆಸ್ಪತ್ರೆ ಸಿಬ್ಬಂದಿ ಮೃತರ ಕುಟುಂಬದ ಸದಸ್ಯರಿಗೆ ತಡವಾಗಿ ಈ ಮಾಹಿತಿ ನೀಡಿದ್ದು ಗುರುವಾರ ಬೆಳಕಿಗೆ ಬಂದಿದೆ.

‘ಆಸ್ಪತ್ರೆಯಲ್ಲಿ ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಗಳ ಪ್ರಕಾರ, ಕೋವಿಡ್‌ ರೋಗಿಗೆ ನೀಡಿದ್ದ ಆಮ್ಲಜನಕ ಪೂರೈಕೆ ವ್ಯವಸ್ಥೆಯನ್ನು ವಾರ್ಡ್ ಬಾಯ್‌ ಬಲವಂತವಾಗಿ ತೆಗೆದಿದ್ದಾರೆ. ಇದಾದ 10-15 ನಿಮಿಷಗಳಲ್ಲಿ ರೋಗಿ ಸಾವನ್ನಪ್ಪಿದ್ದಾರೆ‘ ಎಂದು ಮೃತರ ಸಂಬಂಧಿಕರೊಬ್ಬರು ತಿಳಿಸಿದ್ದಾರೆ.

‘ನಾನು ಮಂಗಳವಾರದವರೆಗೆ ನಮ್ಮ ತಂದೆಯೊಂದಿಗೆ ಆಸ್ಪತ್ರೆಯಲ್ಲಿದ್ದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿತ್ತು. ಅವರು ಸರಿಯಾಗಿ ಆಹಾರ ಮತ್ತು ನೀರು ತೆಗೆದುಕೊಳ್ಳುತ್ತಿದ್ದರು. ಆದರೆ, ಬುಧವಾರ ನಮ್ಮ ತಂದೆಗೆ ನೀಡಿದ್ದ ಆಮ್ಲಜನಕದ ನೆರವನ್ನು ತೆಗೆದಿದ್ದಾರೆ. ಹೀಗಾಗಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟು, ಸಾವನ್ನಪ್ಪಿದ್ದಾರೆ‘ ಎಂದು ಮೃತರ ಪುತ್ರ ಆರೋಪಿಸಿದ್ದಾರೆ.

 ಆಸ್ಪತ್ರೆಯ ಅಧಿಕಾರಿಗಳು ಈ ಘಟನೆ ಬಗ್ಗೆ ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿದ್ದಾರೆ. ಮುಖ್ಯ ಆರೋಗ್ಯಾಧಿಕಾರಿ (ಸಿಎಂಎಚ್‌ಒ) ಡಾ. ಅರ್ಜುನ್ ಲಾಲ್ ಶರ್ಮಾ ಮಾತನಾಡಿ, ‘ಮೃತ ವ್ಯಕ್ತಿ ಡಯಾಲಿಸಿಸ್‌ಗೆ ಒಳಗಾಗಿದ್ದರು. ಅವರಿಗೆ ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಇತ್ತು. ಈ ಘಟನೆಗೆ ಸಂಬಂಧಿಸಿದಂತೆ ನಾವು ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಿಸುತ್ತೇವೆ. ಯಾರಾದರೂ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಆ ವ್ಯಕ್ತಿಗೆ ಶಿಕ್ಷೆಯಾಗುತ್ತದೆ‘ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು