ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಹಮದಾಬಾದ್ ಸ್ಫೋಟ: ಅಪರಾಧಿಗಳಿರುವ ಭೋಪಾಲ್ ಜೈಲಿನ ಭದ್ರತೆ ಹಚ್ಚಿಸಲು ಸಮಿತಿ ರಚನೆ

Last Updated 22 ಫೆಬ್ರುವರಿ 2022, 7:06 IST
ಅಕ್ಷರ ಗಾತ್ರ

ಭೋಪಾಲ್: '2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣದ ಆರು ಅಪರಾಧಿಗಳು ಇರುವ ಭೋಪಾಲ್ ಸೆಂಟ್ರಲ್ ಜೈಲಿನ ಭದ್ರತೆ ಪರಿಶೀಲಿಸಲು ಮಧ್ಯಪ್ರದೇಶ ಸರ್ಕಾರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಜೈಲಿನ ರಕ್ಷಣೆಗೆ ವಿಶೇಷ ಸಶಸ್ತ್ರ ಪಡೆ ತಂಡವನ್ನು ನಿಯೋಜಿಸಲು ನಿರ್ಧರಿಸಿದೆ' ಎಂದು ಗೃಹ ಸಚಿವ ನರೋತ್ತಮ್ ಮಿಶ್ರಾ ತಿಳಿಸಿದ್ದಾರೆ.

ಸ್ಫೋಟದ ಪ್ರಮುಖ ರೂವಾರಿ ಸಫ್ದರ್ ನಗೋರಿ ಸೇರಿದಂತೆ ಇಲ್ಲಿನ ಜೈಲಿನಲ್ಲಿ ಆರು ಜನ ಅಪರಾಧಿಗಳನ್ನು ಇರಿಸಲಾಗಿದೆ. ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ 38 ಜನರಲ್ಲಿ ಒಬ್ಬರಾದ ನಗೋರಿಗೆ ಮರಣ ದಂಡನೆ ವಿಧಿಸಲಾಗಿದೆ.

'ಅಹಮದಾಬಾದ್ ಸ್ಫೋಟಕ್ಕೆ ಸಂಬಂಧಿಸಿದ ಭಯೋತ್ಪಾದಕರು ಇರುವ ಭೋಪಾಲ್ ಸೆಂಟ್ರಲ್ ಜೈಲಿನ ಭದ್ರತೆಯ ಮೇಲ್ವಿಚಾರಣೆ ನಡೆಸಲು ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ' ಎಂದು ಸೋಮವಾರ ಸಂಜೆ ಉನ್ನತ ಪೊಲೀಸ್ ಮತ್ತು ಜೈಲು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಿಶ್ರಾ ತಿಳಿಸಿದ್ದಾರೆ.

ಕಾರಾಗೃಹ ಇಲಾಖೆಯ ಹೆಚ್ಚುವರಿ ಮಹಾನಿರ್ದೇಶಕರಾದ ಗಜಿರಾಮ್ ಮೀನಾ ಅವರ ನೇತೃತ್ವದ ಸಮಿತಿಯಲ್ಲಿ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ ಸಂಜಯ್ ಪಾಂಡೆ ಮತ್ತು ಭೋಪಾಲ್ ಸೆಂಟ್ರಲ್ ಜೈಲಿನ ಸೂಪರಿಂಟೆಂಡೆಂಟ್ ದಿನೇಶ್ ನರಗಾವೆ ಇದ್ದಾರೆ.

'ಜೈಲಿನಲ್ಲಿರುವ ಈ ಅಪರಾಧಿಗಳನ್ನು ಭೇಟಿಯಾಗಲು ಬಯಸುವವರು, ಅವರ ಆಹಾರ ಮತ್ತು ಭದ್ರತೆ ಸೇರಿದಂತೆ ಎಲ್ಲ ಆಯಾಮಗಳಲ್ಲಿಯೂ ಸಮಿತಿಯು ದಿನನಿತ್ಯ ಭದ್ರತಾ ಪರಿಶೀಲನೆ ನಡೆಸಲಿದೆ' ಎಂದು ಕಾರಾಗೃಹ ಇಲಾಖೆಯ ಉಸ್ತುವಾರಿಯೂ ಆಗಿರುವ ಮಿಶ್ರಾ ತಿಳಿಸಿದ್ದಾರೆ. ಅಲ್ಲದೆ, ಕೇಂದ್ರ ಕಾರಾಗೃಹದ ಸುತ್ತ ನಿಗಾ ವಹಿಸಲು ಮತ್ತು ಗಸ್ತು ಹೆಚ್ಚಿಸಲು ಭೋಪಾಲ್ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

'ಭದ್ರತೆಯ ದೃಷ್ಟಿಯಿಂದ ಕೇಂದ್ರ ಕಾರಾಗೃಹದಲ್ಲಿ ವಿಶೇಷ ಸಶಸ್ತ್ರ ಪಡೆ ತಂಡವನ್ನು ನಿಯೋಜಿಸಲು ನಿರ್ಧರಿಸಿದೆ' ಎಂದು ತಿಳಿಸಿದ್ದಾರೆ.

ಕಳೆದ ವಾರವಷ್ಟೇ ಸರಣಿ ಬಾಂಬ್‌ ಸ್ಫೋಟ ಪ್ರಕರಣ ಸಂಬಂಧ 38 ಜನರಿಗೆ ಗಲ್ಲುಶಿಕ್ಷೆ, 11 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗುಜರಾತ್ ವಿಶೇಷ ನ್ಯಾಯಾಲಯ ಆದೇಶಿಸಿತ್ತು. ಸ್ಪೋಟದಲ್ಲಿ 56 ಜನರು ಮೃತಪಟ್ಟಿದ್ದರು ಮತ್ತು 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಲ್ಲು ಶಿಕ್ಷೆಗೆ ಒಳಗಾದ ಎಲ್ಲರೂ ಇಂಡಿಯನ್‌ ಮುಜಾಹಿದೀನ್‌ ಸಂಘಟನೆಗೆ ಸೇರಿದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT