ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಬಳೆಗಾರನಿಗೆ ಗುಂಪು ಥಳಿತ

ಅನ್ಯಧರ್ಮದ ಹೆಸರು ಹೇಳಿಕೊಂಡು ಬಳೆ ಮಾರಾಟ–ಆರೋಪ
Last Updated 23 ಆಗಸ್ಟ್ 2021, 12:13 IST
ಅಕ್ಷರ ಗಾತ್ರ

ಇಂದೋರ್, ಭೋಪಾಲ್: ಅನ್ಯಧರ್ಮದ ಹೆಸರು ಹೇಳಿಕೊಂಡು ಬಳೆ ಮಾರುತ್ತಿದ್ದ ಎನ್ನುವ ಕಾರಣಕ್ಕೆ ಬಳೆಗಾರನನ್ನು ಬೀದಿಯಲ್ಲೇ ಗುಂಪೊಂದು ಥಳಿಸಿದ ಘಟನೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದಿದೆ.

ಘಟನೆಯ ಬಗ್ಗೆ ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಮಧ್ಯಪ್ರದೇಶದ ಗೃಹಸಚಿವ ನರೋತ್ತಮ್ ಮಿಶ್ರಾ, ‘ಅನ್ಯ ಸಮುದಾಯಕ್ಕೆ ಸೇರಿದ್ದರೂ ಬಳೆಗಾರ ಹಿಂದೂ ಎಂದು ಹೇಳಿಕೊಂಡು ಮಹಿಳೆಯರಿಗೆ ಬಳೆ ಮಾರುತ್ತಿದ್ದ. ಈ ವಿಷಯ ತಿಳಿದು ಗಲಾಟೆ ನಡೆದಿದೆ’ ಎಂದು ಹೇಳಿದ್ದಾರೆ.

ಇಂದೋರ್‌ನ ಗೋವಿಂದ ನಗರದಲ್ಲಿ ಭಾನುವಾರ ಘಟನೆ ನಡೆದಿದ್ದು, ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಅಗಿದೆ. ಗುಂಪು ಥಳಿತಕ್ಕೊಳಗಾದ ವ್ಯಕ್ತಿಯನ್ನು ಬಳೆ ಮಾರಾಟಗಾರ ತಸ್ಲೀಮ್ ಅಲಿ ಎಂದು ಗುರುತಿಸಲಾಗಿದೆ.

‘ವಿಡಿಯೊ ಕ್ಲಿಪ್‌ವೊಂದರಲ್ಲಿ ಗುಂಪು ಥಳಿತಕ್ಕೊಳಗಾದ ತಸ್ಲೀಮ್ ಅಲಿ ತನ್ನನ್ನು ಕ್ಷಮಿಸುವಂತೆ ಕೋರುತ್ತಿದ್ದಾನೆ. ಮತ್ತೊಂದು ಕ್ಲಿಪ್‌ನಲ್ಲಿ ವ್ಯಕ್ತಿಯೊಬ್ಬ ಬಳೆಗಾರನನ್ನು ಥಳಿಸುತ್ತಿದ್ದು, ಮತ್ತೊಮ್ಮೆ ಈ ಪ್ರದೇಶದಲ್ಲಿ ಕಾಣಿಸಿಕೊಳ್ಳದಂತೆ ಎಚ್ಚರಿಕೆ ನೀಡುತ್ತಿದ್ದಾನೆ. ನಿಂದಿಸುತ್ತಲೇ ಆ ವ್ಯಕ್ತಿ ಸುತ್ತಮುತ್ತಲಿನವರನ್ನು ಹೊಡೆಯುವಂತೆ ಪ್ರೇರೇಪಿಸುತ್ತಿದ್ದಾನೆ’ ಎಂದು ಮೂಲಗಳು ತಿಳಿಸಿವೆ.

‘ಬಳೆಗಾರನಿಂದ 2 ಆಧಾರ್ ಕಾರ್ಡ್, ₹ 10 ಸಾವಿರ, ಮೊಬೈಲ್ ಹಾಗೂ ₹ 25 ಸಾವಿರ ಮೌಲ್ಯದ ಬಳೆಗಳನ್ನು ಕಿತ್ತುಕೊಳ್ಳಲಾಗಿದೆ’ ಎಂದು ಬಳೆಗಾರನ ಪರ ಗುಂಪೊಂದು ಆರೋಪಿಸಿದೆ.

‘ಬಳೆಗಾರನಿಗೆ ಬೆಂಬಲಿಸುವಾಗ ಘಟನಾ ಸ್ಥಳದಲ್ಲಿ ಗಲಭೆ ಸೃಷ್ಟಿಸಿದವರಲ್ಲಿ ಕೆಲವು ಸಣ್ಣ ಸಂಘಟನೆಗಳ ಸ್ಥಳೀಯರೂ ಇರುವುದನ್ನು ಶಂಕಿಸಲಾಗಿದೆ’ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ಸಿಂಗ್ ಹೇಳಿದ್ದಾರೆ.

ದ್ವೇಷ ಮತ್ತು ಅಪರಾಧ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡೂ ಗುಂಪುಗಳ ವಿರುದ್ಧ ಇಂದೋರ್‌ನ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಗಲಭೆ ನಡೆದ ಸ್ಥಳದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT