ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಪೊಲೀಸರಿಂದ ರೆಮ್‌ಡಿಸಿವಿರ್ ಪೂರೈಕೆದಾರನ ವಿಚಾರಣೆ: ಬಿಜೆಪಿ ಆಕ್ಷೇಪ

Last Updated 18 ಏಪ್ರಿಲ್ 2021, 7:46 IST
ಅಕ್ಷರ ಗಾತ್ರ

ಮುಂಬೈ: ಕೋವಿಡ್‌ ಚಿಕಿತ್ಸೆ, ಔಷಧ ಪೂರೈಕೆ ವಿಚಾರಕ್ಕೆ ಸಂಬಂಧಿಸಿ ಮಹಾರಾಷ್ಟ್ರ ಸರ್ಕಾರ ಮತ್ತು ಬಿಜೆಪಿ ನಡುವಣ ಆರೋಪ–ಪ್ರತ್ಯಾರೋಪಗಳು ಭಾನುವಾರವೂ ಮುಂದುವರಿದಿದೆ.

ಕೇಂದ್ರಾಡಳಿತ ಪ್ರದೇಶ ದಮನ್‌ನ ರೆಮ್‌ಡಿಸಿವಿರ್ ಪೂರೈಕೆ ಕಂಪನಿ ‘ಬ್ರಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್’ ನಿರ್ದೇಶಕರನ್ನು ಮುಂಬೈ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಇದಕ್ಕೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಹೆಚ್ಚುವರಿ ರೆಮ್‌ಡಿಸಿವಿರ್ ಹೊಂದಿದ್ದ ಆರೋಪದಲ್ಲಿ ಕಂಪನಿಯ ನಿರ್ದೇಶಕರನ್ನು ಮುಂಬೈನ ವಿಲೆ ಪಾರ್ಲೆ ಪೊಲೀಸ್ ಠಾಣೆಯ ಪೊಲೀಸರು ಶನಿವಾರ ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಪ್ರತಿಪಕ್ಷ ನಾಯಕ ದೇವೇಂದ್ರ ಫಡಣವೀಸ್, ವಿಧಾನಪರಿಷತ್ ಪ್ರತಿಪಕ್ಷ ನಾಯಕ ದರೇಕರ್‌ ಮತ್ತು ಬಿಜೆಪಿ ಎಂಎಲ್‌ಸಿ ಪ್ರಸಾದ್ ಲಾಡ್ ಠಾಣೆಗೆ ಧಾವಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಬ್ರಕ್ ಫಾರ್ಮಾವು ರೆಮ್‌ಡಿಸಿವಿರ್ ರಫ್ತು ಮಾಡುವ ಕಂಪನಿಯಾಗಿದೆ. ದೇಶದಲ್ಲಿ 7 ಕಂಪನಿಗಳು ರೆಮ್‌ಡಿಸಿವಿರ್ ಉತ್ಪಾದಿಸುತ್ತಿವೆ.

ರೆಮ್‌ಡಿಸಿವಿರ್‌ ದಾಸ್ತಾನು ಇದೆ ಮತ್ತು ವಿಮಾನದ ಮೂಲಕ ರಫ್ತು ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿಯ ಮೇರೆಗೆ ಕಂಪನಿಯ ನಿರ್ದೇಶಕರನ್ನು ರಾತ್ರಿ ಕರೆಸಿಕೊಂಡಿದ್ದ ಪೊಲೀಸರು ಸುಮಾರು 45 ನಿಮಿಷಗಳ ಕಾಲ ವಿಚಾರಣೆ ನಡೆಸಿದ್ದರು. ಬಳಿಕ ಬಿಡುಗಡೆ ಮಾಡಿದ್ದರು.

ಈ ಮಧ್ಯೆ, ರೆಮ್‌ಡಿಸಿವಿರ್‌ ಕೊರತೆ ಹಿನ್ನೆಲೆಯಲ್ಲಿ ಬಿಜೆಪಿಯ ಮಹಾರಾಷ್ಟ್ರ ಘಟಕವು ವಿವಿಧ ಫಾರ್ಮಾ ಕಂಪನಿಗಳನ್ನು ಸಂಪರ್ಕಿಸಿತ್ತು ಎಂದು ಫಡಣವೀಸ್ ಹೇಳಿದ್ದಾರೆ.

‘ಕೋವಿಡ್ ಸಾಂಕ್ರಾಮಿಕದ ವಿರುದ್ಧ ನಾವು ಹೋರಾಡುತ್ತಿರುವಾಗ ಮಹಾರಾಷ್ಟ್ರ ಸರ್ಕಾರವು ಈ ರೀತಿ ನಡೆದುಕೊಂಡಿರುವುದು ನಾಚಿಕೆಗೇಡಿನ ವಿಚಾರ. ಇಂಥ ಕಷ್ಟದ ಸಮಯದಲ್ಲಿ ರಾಜ್ಯಕ್ಕೆ ರೆಮ್‌ಡಿಸಿವಿರ್‌ ಪೂರೈಸಲು ಮುಂದಾಗಿದ್ದ ಕಂಪನಿಯ ಅಧಿಕಾರಿಗಳನ್ನು ಹಠಾತ್ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದು ಎಷ್ಟು ಸರಿ’ ಎಂದು ಫಡಣವೀಸ್ ಪ್ರಶ್ನಿಸಿದ್ದಾರೆ.

ದೇಶದಲ್ಲಿ ಕೋವಿಡ್ ಎರಡನೇ ಅಲೆ ತೀವ್ರಗೊಂಡಿರುವುದರಿಂದ ರೆಮ್‌ಡಿಸಿವಿರ್‌ಗೆ ಬೇಡಿಕೆ ಹೆಚ್ಚಿದೆ. ಬೇಡಿಕೆಗೆ ತಕ್ಕ ಪೂರೈಕೆಯಾಗುತ್ತಿಲ್ಲ ಎಂಬ ದೂರುಗಳೂ ಕೇಳಿಬಂದಿವೆ. ಇದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ನಡುವಣ ರಾಜಕೀಯ ವಾಗ್ವಾದಕ್ಕೂ ಕಾರಣವಾಗಿದೆ.

ರೆಮ್‌ಡಿಸಿವಿರ್ ಪೂರೈಕೆ ಕಂಪನಿಗಳಿಗೆ ಮಹಾರಾಷ್ಟ್ರ ಸರ್ಕಾರ ಕಿರುಕುಳ ನೀಡುತ್ತಿದೆ ಎಂದು ಫಡಣವೀಸ್ ಭಾನುವಾರ ಬೆಳಿಗ್ಗೆ ಆರೋಪಿಸಿದ್ದರು. ರಾಜ್ಯಕ್ಕೆ ರೆಮ್‌ಡಿಸಿವಿರ್ ಚುಚ್ಚುಮದ್ದು ಪೂರೈಸುವಂತೆ ಬಿಜೆಪಿ ನಾಯಕರು ಕೇಳಿಕೊಂಡಿದ್ದಕ್ಕಾಗಿ ಸರ್ಕಾರವು ಕಂಪನಿಗೆ ಕಿರುಕುಳ ನೀಡುತ್ತಿದೆ ಎಂದು ಅವರು ದೂರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT