ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ ಡ್ರಗ್ಸ್ ಕೇಸ್: ನಿರ್ಮಾಪಕ ಇಮ್ತಿಯಾಜ್ ಖತ್ರಿ ಮನೆ ಮೇಲೆ ಎನ್‌ಸಿಬಿ ದಾಳಿ

Last Updated 9 ಅಕ್ಟೋಬರ್ 2021, 5:41 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬೈನ ಕ್ರೂಸ್ ಹಡಗಿನಲ್ಲಿ ಕಳೆದ ವಾರ ನಡೆದಿತ್ತು ಎನ್ನಲಾದ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ದಳದ (ಎನ್‌ಸಿಬಿ) ಅಧಿಕಾರಿಗಳು ನಿರ್ಮಾಪಕ ಇಮ್ತಿಯಾಜ್ ಖತ್ರಿ ಮನೆ ಮೇಲೆ ಶನಿವಾರ ದಾಳಿ ನಡೆಸಿದ್ದಾರೆ.

ಇಮ್ತಿಯಾಜ್ ಅವರ ಬಾಂದ್ರಾದ ನಿವಾಸದ ಮೇಲೆ ದಾಳಿ ಮಾಡಿರುವ ಎನ್‌ಸಿಬಿ ಅಧಿಕಾರಿಗಳು ಡ್ರಗ್ಸ್ ಸಂಗ್ರಹದ ಕುರಿತಂತೆ ತಪಾಸಣೆ ನಡೆಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.

ಕಳೆದ ವಾರ ಹಡಗಿನ ಮೇಲೆ ದಾಳಿ ನಡೆದಾಗಇಮ್ತಿಯಾಜ್ ಆಪ್ತ ಅಚಿತ್ ಕುಮಾರ್ ಎನ್ನುವರನ್ನು ಬಂಧಿಸಲಾಗಿತ್ತು. ಅಚಿತ್ ಕುಮಾರ್ ಅವರಿಂದ ಸಣ್ಣ ಪ್ರಮಾಣದ ಡ್ರಗ್ಸ್‌ನ್ನು ಎನ್‌ಸಿಬಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕ್ರೂಸ್ ಹಡಗಿನ ಡ್ರಗ್ಸ್ ಪಾರ್ಟಿ ಬಾಲಿವುಡ್ ಮಂದಿಗೆ ಸಂಬಂಧ ಇದೆ ಎನ್ನುವುದನ್ನು ಈ ದಾಳಿ ತೋರಿಸಿಕೊಟ್ಟಿದೆ ಎಂದು ಎನ್‌ಸಿಬಿ ಅಧಿಕಾರಿಗಳು ಹೇಳಿದ್ದಾರೆ.

ಶೀಘ್ರದಲ್ಲೇ ಕ್ರೂಸ್ ಹಡಗಿನ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ತಾರ್ಕಿಕ ಅಂತ್ಯ ಕಾಣಿಸುತ್ತೇವೆ ಎಂದು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖಡೆ ಹೇಳಿದ್ದಾರೆ.

ಇಮ್ತಿಯಾಜ್ ಖತ್ರಿ ಹೆಸರು ಈ ಹಿಂದೆ ನಟ ಸುಶಾಂತ್ ಸಿಂಗ್ ರಜಪೂತ ನಿಗೂಢ ಸಾವಿನಲ್ಲೂ ಕೇಳಿ ಬಂದಿತ್ತು. ಅವರು ಕೆಲವು ಬಾಲಿವುಡ್ ಸಿನಿಮಾಗಳಿಗೆ ಹಾಗೂ ಮರಾಠಿ ಸಿನಿಮಾಗಳಿಗೆ ಹಣ ಹೂಡಿದ್ದರು.

ಬಾಲಿವುಡ್‌ ನಟ ಶಾರುಖ್ ಖಾನ್‌ ಮಗ,ಡ್ರಗ್ಸ್‌ ಸೇವನೆ ಅರೋಪ ಹೊತ್ತಿರುವ ಆರ್ಯನ್‌ ಖಾನ್‌ ಮತ್ತು ಇತರ ಇಬ್ಬರು ಆರೋಪಿಗಳ ಜಾಮೀನು ಅರ್ಜಿಗಳನ್ನು ಮುಂಬೈನ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಆರ್‌. ಎಂ. ನೆರ್ಲೀಕರ್‌ ಶುಕ್ರವಾರ ತಿರಸ್ಕರಿಸಿದ್ದಾರೆ. ಹೀಗಾಗಿ ಎನ್‌ಸಿಬಿ ಹೆಚ್ಚಿನ ವಿಚಾರಣೆ ನಡೆಸುತ್ತಿದೆ.

ಎನ್‌ಸಿಬಿ ಪರವಾಗಿ ಕೋರ್ಟ್‌ಗೆ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅನಿಲ್‌ ಸಿಂಗ್‌ ಅವರು ಆರ್ಯನ್‌ ಖಾನ್‌ ಮತ್ತು ಇನ್ನಿಬ್ಬರು ಆರೋಪಿಗಳ ಜಾಮೀನು ಅರ್ಜಿಗಳನ್ನು ವಿರೋಧಿಸಿದರು. ವಾದಗಳನ್ನು ಆಲಿಸಿದ ಬಳಿಕ, ಆರ್ಯನ್‌ ಖಾನ್‌, ಮುನ್‌ಮುನ್‌ ಧಮೆಚ ಮತ್ತು ಅರ್ಬಾಜ್‌ ಮರ್ಚೆಂಟ್‌ ಅವರಿಗೆ ಜಾಮೀನು ನೀಡಲು ಮ್ಯಾಜಿಸ್ಟ್ರೇಟ್‌ ನಿರಾಕರಿಸಿದರು.

ಆರ್ಯನ್‌ ಖಾನ್‌ ಮತ್ತು ಇತರ ಏಳು ಜನ ಆರೋಪಿಗಳ ಎನ್‌ಸಿಬಿ ಕಸ್ಟಡಿ ಮುಕ್ತಾಯವಾದ ಕಾರಣ ಕೋರ್ಟ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.

ಅ.3ರಂದು ಮುಂಬೈ ಕರಾವಳಿ ತೀರದಲ್ಲಿ ಐಷಾರಾಮಿ ಹಡಗಿನ ಮೇಲೆ ನಡೆಸಿದ ದಾಳಿಯಲ್ಲಿ ಆರ್ಯನ್‌ ಮತ್ತು ಇತರರನ್ನು ಬಂಧಿಸಲಾಗಿತ್ತು. ಪ್ರಕರಣದಲ್ಲಿ ಈ ವರೆಗೆ 18 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಎನ್‌ಸಿಬಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT