ಮುಂಬೈ: ಕಳೆದ ವಾರ ಮಹಿಳೆಯ ಮೇಲೆ ನಡೆದ ಕ್ರೂರ ಅತ್ಯಾಚಾರ ಮತ್ತು ಹತ್ಯೆ ಬಳಿಕ ಎಚ್ಚೆತ್ತುಕೊಂಡಿರುವ ಮುಂಬೈ ಪೊಲೀಸರು, ಮಹಿಳೆಯರ ಸುರಕ್ಷತೆಗಾಗಿ ನಿರ್ಭಯಾ ದಳವನ್ನು ರಚಿಸಿದ್ದಾರೆ.
ಇದರಲ್ಲಿ ಪಿಎಸ್‌ಐ ಅಥವಾ ಎಎಸ್ಐ ರ್‍ಯಾಂಕ್‌ನ ಮಹಿಳಾ ಪೊಲೀಸ್ ಅಧಿಕಾರಿ, ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಪೊಲೀಸ್ ಪೇದೆ, ಒಬ್ಬ ಡ್ರೈವರ್ ಇರಲಿದ್ಧಾರೆ.
ನವದೆಹಲಿಯ ನಿರ್ಭಯಾ ಅತ್ಯಾಚಾರ ಪ್ರಕರಣವನ್ನೇ ಹೋಲುವಂತೆ ನಡೆದ ಭೀಕರ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ನೇತೃತ್ವದ ಸರ್ಕಾರಕ್ಕೆ ದೊಡ್ಡ ಮುಜುಗರವನ್ನುಂಟುಮಾಡಿತ್ತು. ಸರ್ಕಾರದ ವಿರುದ್ಧ ಭಾರೀ ಟೀಕೆ ಕೇಳಿ ಬಂದಿತ್ತು.
ಮುಂಬೈ, ಹುಡುಗಿಯರು ಮತ್ತು ಮಹಿಳೆಯರಿಗೆ ಸುರಕ್ಷಿತ ನಗರಗಳಲ್ಲಿ ಒಂದಾಗಿದೆ. ಆದರೆ, ಅಂತಹ ನಗರದಲ್ಲೇ ಇಂತಹ ಕ್ರೂರ ಘಟನೆ ನಡೆದಿದೆ ಎಂದು ಸರ್ಕಾರ ಮತ್ತು ಪೋಲಿಸರ ವಿರುದ್ಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿತ್ತು.
ಇದೀಗ, ಪೊಲೀಸರು ರೂಪಿಸಿರುವ ನಿರ್ಭಯಾ ತಂಡವು ಪ್ರತೀ ಪೊಲೀಸ್ ಠಾಣೆಯಲ್ಲೂ ಇರಲಿದೆ.
ಈ ಬಗ್ಗೆ ಮುಂಬೈ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಅವರು ಸುತ್ತೋಲೆಯ ಮೂಲಕ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಪ್ರತಿ ಪೊಲೀಸ್ ಠಾಣೆಯಲ್ಲಿ ಈ ತಂಡಕ್ಕೆ `ಮೊಬೈಲ್ -5 ′ವಾಹನವನ್ನು ನೀಡಲಾಗುವುದು. ಪ್ರತಿಯೊಂದು ಪೊಲೀಸ್ ಠಾಣೆಯಲ್ಲಿ ನಿಗದಿತ ಸಂಖ್ಯೆಯ `ಮೊಬೈಲ್ ' ಗಸ್ತು ವಾಹನಗಳು ಇರಲಿವೆ.
ನಿರ್ಭಯಾ ದಳಗಳು ಎರಡು ದಿನಗಳ ತರಬೇತಿಯನ್ನು ಪಡೆಯುತ್ತವೆ. ಬಾಲಕಿಯರ ಹಾಸ್ಟೆಲ್‌ಗಳು, ಮಕ್ಕಳ ಆಶ್ರಯ ಮನೆಗಳು ಮತ್ತು ಅನಾಥಾಶ್ರಮಗಳು ಇರುವ ಪ್ರದೇಶಗಳಿಂದ ಗೌಪ್ಯ ಮಾಹಿತಿಯನ್ನು ಸಂಗ್ರಹಿಸಲು ಅವರಿಗೆ ತರಬೇತಿ ನೀಡಲಾಗುತ್ತದೆ.
ನಿರ್ಭಯಾ ದಳವು ಸ್ವಯಂ ರಕ್ಷಣೆಗಾಗಿ ಶಾಲಾ, ಕಾಲೇಜುಗಳು, ಬಾಲಕಿಯರ ಹಾಸ್ಟೆಲ್‌ಗಳಲ್ಲಿ ತರಬೇತಿ ಕಾರ್ಯಾಗಾರಗಳನ್ನು ಆಯೋಜಿಸುತ್ತದೆ. ಪ್ರತಿ ಸ್ಥಳದಲ್ಲಿ ‘ನಿರ್ಭಯಾ ಪೇಟಿ’ಎಂಬ ಪೆಟ್ಟಿಗೆಯನ್ನು ಇಡಲಾಗುವುದು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.