ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡಿಶಾ: 24 ವರ್ಷ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ ಕೊಲೆಗಾರ ಸೆರೆ

Last Updated 16 ಜೂನ್ 2022, 8:55 IST
ಅಕ್ಷರ ಗಾತ್ರ

ಭುವನೇಶ್ವರ (ಒಡಿಶಾ):ಎರಡು ಕೊಲೆ ಸೇರಿದಂತೆ ಹಲವು ಅಪರಾಧ ಪ್ರಕರಣಗಳಲ್ಲಿ ಬೇಕಾಗಿದ್ದ 42ದ ವರ್ಷ ವ್ಯಕ್ತಿಯೊಬ್ಬ ಬರೋಬ್ಬರಿ ಎರಡು ದಶಕಗಳ ಕಾಲ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದ. ಆದರೆ ಇದೀಗ, ಒಡಿಶಾದ ಗಂಜಾಂ ಜಿಲ್ಲೆಯಲ್ಲಿರುವ ತನ್ನ ಹಳ್ಳಿಯಲ್ಲಿಯೇ ಸಿಕ್ಕಿಬಿದ್ದಿದ್ದಾನೆ.

ಕಲ್ಲಿಕೋಟೆ ಪೊಲೀಸ್‌ ಠಾಣೆ ವ್ಯಾಪ್ತಿಯ ತುಳಸಿಪುರ ಗ್ರಾಮದ ಆ ವ್ಯಕ್ತಿಯ ಹೆಸರು ಶಂಕರ್‌ ಬಿಸ್ವಾಲ್. ಕೇರಳದಲ್ಲಿ ದಿನಗೂಲಿ ಕೆಲಸಗಾರನಾಗಿ ದುಡಿಯುತ್ತಿದ್ದ ಆತ, ಕುಟುಂಬದವರನ್ನು ಬೇಟಿ ಮಾಡಲು ಮಂಗಳವಾರ ಊರಿಗೆ ಬಂದಿದ್ದ. ಖಚಿತ ಮಾಹಿತಿ ಆಧರಿಸಿ ಆತನನ್ನು ಬಂಧಿಸಲಾಗಿದೆ ಎಂದು ಸೂಪರಿಂಟೆಂಡೆಂಟ್‌ ಆಫ್‌ ಪೊಲೀಸ್‌ ಬ್ರಿಜೇಶ್‌ ರೈ ತಿಳಿಸಿದ್ದಾರೆ.

ಆತ 1998ರಲ್ಲಿ ನಡೆದ ಎರಡು ಕೊಲೆ, 10 ಕೊಲೆ ಯತ್ನ ಹಾಗೂ 1 ಕಳ್ಳತನ ಸೇರಿದಂತೆ, ಕನಿಷ್ಠ 13 ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ರೈ ಹೇಳಿದ್ದಾರೆ.

ಶಂಕರ್‌ನನ್ನು ಸೆರೆ ಹಿಡಿಯಲು ಈ ಹಿಂದೆಯೂ ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಆದರೆ, ಪ್ರತಿಬಾರಿಯೂ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ. ಒಂದು ತಂಡವನ್ನು ಕೇರಳಕ್ಕೆ ಕಳುಹಿಸಿದ್ದರೂ ಬಂಧನ ಸಾಧ್ಯವಾಗಿರಲಿಲ್ಲ ಎಂದೂ ಅವರು ವಿವರಿಸಿದ್ದಾರೆ.

ಕಳೆದ 24 ವರ್ಷಗಳಲ್ಲಿ ಶಂಕರ್‌, ಚೆನ್ನೈ, ಹೈದರಾಬಾದ್‌, ಬೆಂಗಳೂರು, ಸೂರತ್‌ ಹಾಗೂ ಕೇರಳದಲ್ಲಿ ದಿನಗೂಲಿಯಾಗಿ ಕೆಲಸ ಮಾಡಿದ್ದಾನೆ ಎಂದು ಕಲ್ಲಿಕೋಟೆಯ ಉಸ್ತುವಾರಿ ಇನ್‌ಸ್ಪೆಕ್ಟರ್‌ ಜಗನ್ನಾಥ್‌ ಮಲ್ಲಿಕ್‌ ಮಾಹಿತಿ ನೀಡಿದ್ದಾರೆ.

ಬಿಸ್ವಾಲ್‌ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ ಎಂದಿರುವ ಮಲ್ಲಿಕ್‌, ಬೇರೆ ಠಾಣೆಗಳಲ್ಲಿ ಈತನ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳನ್ನೂ ಪರಿಶೀಲಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT