ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಂ ಬಾಲಕಿಯ ಒಪ್ಪಿತ ವಿವಾಹಕ್ಕೆ ಪೋಕ್ಸೊ ಅನ್ವಯಿಸದು: ದೆಹಲಿ ಹೈಕೋರ್ಟ್‌

Last Updated 23 ಆಗಸ್ಟ್ 2022, 14:23 IST
ಅಕ್ಷರ ಗಾತ್ರ

ನವದೆಹಲಿ: ಮುಸ್ಲಿಂ ಕಾನೂನು ಪ್ರಕಾರ ವಯಸ್ಕ ಹೆಣ್ಣು ತನ್ನ ಪೋಷಕರ ಒಪ್ಪಿಗೆಯಿಲ್ಲದೆ ಮದುವೆಯಾಗಬಹುದು. ಮದುವೆಯಾದ ಹೆಣ್ಣು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳಾಗಿದ್ದರೂ ತನ್ನ ಪತಿಯೊಂದಿಗೆ ವಾಸಿಸುವ ಹಕ್ಕು ಆಕೆಗೆ ಇದೆ ಎಂದು ದೆಹಲಿ ಹೈಕೋರ್ಟ್ ಹೇಳಿದೆ.

ಮುಸ್ಲಿಂ ಬಾಲಕಿ ಮತ್ತು ಆಕೆಯ ಪತಿಗೆ ರಕ್ಷಣೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಇಂತಹ ಪ್ರಕರಣಗಳಲ್ಲಿ ಮದುವೆಯ ನಂತರ ಆಕೆಯೊಂದಿಗೆ ಪತಿ ಲೈಂಗಿಕ ಕ್ರಿಯೆ ನಡೆಸಿದ್ದರೆ ಅದು ಮಕ್ಕಳ ರಕ್ಷಣಾ ಕಾಯ್ದೆ ವ್ಯಾಪ್ತಿಗೆ ಬಾರದು ಎಂದೂ ನ್ಯಾಯಮೂರ್ತಿ ಜಸ್ಮೀತ್ ಸಿಂಗ್ ಅವರಿದ್ದ ಏಕ ಸದಸ್ಯ ಪೀಠ ಹೇಳಿದೆ.

ಈ ಪ್ರಕರಣವನ್ನು ಪೋಕ್ಸೊ ಕಾಯ್ದೆಯಡಿ ಪರಿಗಣಿಸಲು ಕೋರಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠವು, ಈ ಜೋಡಿ ಪರಸ್ಪರ ಪ್ರೀತಿಸುತ್ತಿದ್ದು, ಮುಸ್ಲಿಂ ವೈಯಕ್ತಿಕ ಕಾನೂನುಗಳ ಪ್ರಕಾರ ವಿವಾಹವಾಗಿ, ದೈಹಿಕ ಸಂಬಂಧ ಹೊಂದಿದೆ ಎಂದು ಹೇಳಿದೆ.

ಬಾಲಕಿ ಗರ್ಭಿಣಿಯಾಗಿದ್ದಾಗ ಆಕೆಯನ್ನು ಪತಿಯಿಂದ ಬೇರ್ಪಡಿಸಿದರೆ ಹುಟ್ಟಲಿರುವ ಮಗು ಮತ್ತು ಆಕೆಗೂ ಹೆಚ್ಚು ಆಘಾತವಾಗಲಿದೆ. ಇಲ್ಲಿ ಅರ್ಜಿದಾರರಿಗೆ ರಕ್ಷಣೆ ನೀಡಿ, ಅವರ ಹಿತಕಾಯುವುದು ಸರ್ಕಾರದ ಗುರಿಯಾಗಬೇಕು. ಬಾಲಕಿ ಒಪ್ಪಿತ ಮದುವೆಯಾಗಿದ್ದರೆ ಮತ್ತು ಆಕೆ ಸಂತೋಷವಾಗಿದ್ದರೆ, ಅವರ ವೈಯಕ್ತಿಕ ಬದುಕಿನಲ್ಲಿ ಪ್ರವೇಶಿಸಲು ಮತ್ತು ದಂಪತಿ ಬೇರ್ಪಡಿಸಲು ಯಾರಿಗೂ ಅವಕಾಶವಿಲ್ಲ. ಒಂದು ವೇಳೆ ಇದಕ್ಕೆ ಆಸ್ಪದ ನೀಡಿದರೆ, ವೈಯಕ್ತಿಕ ಬದುಕನ್ನು ಕಸಿದುಕೊಂಡಂತೆ ಎಂದು ಪೀಠ ಅಭಿಪ್ರಾಯಪಟ್ಟಿದೆ.

ಬಾಲಕಿ (15 ವರ್ಷ, 5 ತಿಂಗಳು) ಮಾರ್ಚ್ 11ರಂದು ಬಿಹಾರದಲ್ಲಿ ತನ್ನ ಪ್ರೇಮಿ ಜತೆ ವಿವಾಹವಾಗಿದ್ದಳು. ‘ಪೋಷಕರು ನಿರಂತರ ಹಲ್ಲೆ ನಡೆಸುತ್ತಿದ್ದರು. ಇದರಿಂದ ಬೇಸತ್ತು, ತನ್ನ ಸ್ನೇಹಿತನೊಂದಿಗೆ ಓಡಿ ಹೋಗಿ ಮದುವೆಯಾಗಿರುವೆ’ ಎಂದು ಹೇಳಿರುವ ಬಾಲಕಿ, ರಕ್ಷಣೆ ಕೋರಿದ್ದಳು.

ಆಕೆಯ ಪೋಷಕರು ಈ ಮದುವೆ ವಿರೋಧಿಸಿ, ಬಾಲಕಿ ವರಿಸಿರುವ ವ್ಯಕ್ತಿ ವಿರುದ್ಧ ಅಪಹರಣ ಮತ್ತು ಅತ್ಯಾಚಾರ ಆರೋಪ ಮಾಡಿ, ಪೋಕ್ಸೊ ಕಾಯ್ದೆಯಡಿ ದ್ವಾರಕಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT