ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಂತ ಮಹಾ ಆ‘ಘಾಡಿ’: ಸಿಎಂ ಠಾಕ್ರೆ ಜೊತೆ ಇರಲು ಸಿದ್ದ ಎಂದ ಕಾಂಗ್ರೆಸ್, ಎನ್‌ಸಿಪಿ

ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದಲ್ಲಿ ಉದ್ಭವವಾಗಿರುವ ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಎನ್‌ಸಿಪಿ ಹಾಗೂ ಕಾಂಗ್ರೆಸ್ ನಾಯಕರು ನಾವು ಸಿಎಂ ಉದ್ಧವ್ ಠಾಕ್ರೆ ಜೊತೆ ಇರಲು ಸಿದ್ದ ಎಂದು ತಿಳಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಎನ್‌ಸಿಪಿ ನಾಯಕ ಜಯಂತ್ ಪಾಟೀಲ, ಮಹಾ ವಿಕಾಸ್ ಆಘಾಡಿ ಕೂಟವನ್ನು ರಚಿಸಿರುವುದು ಮಹಾರಾಷ್ಟ್ರ ಅಭಿವೃದ್ಧಿಯ ಉದ್ದೇಶದಿಂದ. ಹೀಗಾಗಿ ನಾವು ಕೊನೆವರೆಗೂ ಠಾಕ್ರೆ ಅವರ ಜೊತೆ ಇರಲು ಬಯಸುತ್ತೇವೆ ಎಂದಿದ್ದಾರೆ.

ಇನ್ನು ಕಾಂಗ್ರೆಸ್ ಅಧ್ಯಕ್ಷ ನಾನಾ ಪಾಟೋಳೆ ಅವರು ಕೂಡ ಈ ಬಗ್ಗೆ ಮಾತನಾಡಿದ್ದು, ರಾಜ್ಯದಲ್ಲಿ ಕೋಮುವಾದಿ ಬಿಜೆಪಿ ಸರ್ಕಾರ ಬರುವುದನ್ನು ತಡೆಗಟ್ಟಲು ನಾವು ಶಿವಸೇನಾದ ಜೊತೆ ಇದ್ದೇವೆ. ಸಿಎಂ ಠಾಕ್ರೆ ಅವರು ಹೆದರುವುದು ಬೇಡ. ಅವರ ಶಾಸಕರನ್ನು ಕರೆ ತರಲಿ. ಅದಾಗ್ಯೂ ಕೂಡ ಶಿವಸೇನಾದವರು ಬೇರೆ ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳುವುದಾದರೇ ನಮ್ಮದೇನು ತಕರಾರು ಇಲ್ಲ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.

ಇನ್ನೊಂದೆಡೆ, ‘ಅಸ್ಸಾಂನ ಗುವಾಹಟಿ ಸೇರಿರುವ ಮಹಾರಾಷ್ಟ್ರದ ಬಂಡಾಯ ಶಾಸಕರು 24 ಗಂಟೆಗಳಲ್ಲಿ ಮುಂಬೈಗೆ ಮರಳಿದರೆ, ಮಹಾ ವಿಕಾಸ ಆಘಾಡಿ(ಎಂವಿಎ) ಸರ್ಕಾರದಿಂದ ಹೊರ ಬರಲು ಶಿವಸೇನಾ ಸಿದ್ಧವಿದೆ’ ಎಂದು ಪಕ್ಷದ ಸಂಸದ ಸಂಜಯ್‌ ರಾವುತ್‌ ಹೇಳಿದ್ದಾರೆ.

ಮಹಾರಾಷ್ಟ್ರ ಶಿವಸೇನೆಯ 37 ಶಾಸಕರು ಹಾಗೂ ಒಂ‌ಭತ್ತು ಮಂದಿ ಪಕ್ಷೇತರ ಶಾಸಕರು ಶಿವಸೇನಾ ಮುಖಂಡ ಏಕನಾಥ ಶಿಂಧೆ ಅವರ ನೇತೃತ್ವದಲ್ಲಿ ಗುವಾಹಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಎದ್ದಿರುವುದು ಮಹಾರಾಷ್ಟ್ರದಲ್ಲಿ ಬಿಕ್ಕಟ್ಟು ಸೃಷ್ಟಿಸಿದೆ. ಶಿವಸೇನಾ ಜೊತೆಗೆ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸೇರಿ ಮಹಾ ಮೈತ್ರಿಯ ಸರ್ಕಾರ ನಡೆಸುತ್ತಿವೆ.

'ನಿಜವಾದ ಶಿವ ಸೈನಿಕರೆಂದು ಹೇಳುತ್ತಿರುವ ನೀವು, ಪಕ್ಷ ತೊರೆಯುವುದಿಲ್ಲ ಎಂದಿರುವಿರಿ. 24 ಗಂಟೆಗಳಲ್ಲಿ ನೀವು ಮುಂಬೈಗೆ ಮರಳಿ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೊಂದಿಗೆ ಚರ್ಚೆ ನಡೆಸುವುದಾದರೆ, ನಿಮ್ಮ ಬೇಡಿಕೆಯನ್ನು ಪರಿಗಣಿಸಲು ಸಿದ್ಧರಿದ್ದೇವೆ. ನಿಮ್ಮ ಬೇಡಿಕೆಗಳಿಗೆ ಸಕಾರಾತ್ಮಕ ಸ್ಪಂದನೆ ಸಿಗಲಿದೆ. ಟ್ವಿಟರ್‌ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಪತ್ರಗಳನ್ನು ಬರೆಯಬೇಡಿ' ಎಂದು ರಾವುತ್‌ ಬಂಡಾಯ ಶಾಸಕರನ್ನು ಉದ್ದೇಶಿಸಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT