ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2 ಕೋಟಿ ಜನರ ಉಸಿರಾಟಕ್ಕಾಗಿ ಹೋರಾಡಿದ್ದು ನಾನು ಮಾಡಿದ ಅಪರಾಧವಾಗಿದೆ: ಕೇಜ್ರಿವಾಲ್

ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್‌ನ ಎರಡನೇ ಅಲೆಯು ಉತ್ತುಂಗದಲ್ಲಿದ್ದಾಗ ಅಗತ್ಯಕ್ಕಿಂತ ನಾಲ್ಕು ಪಟ್ಟು ಹೆಚ್ಚು ಆಮ್ಲಜನಕಕ್ಕೆ ದೆಹಲಿ ಸರ್ಕಾರ ಬೇಡಿಕೆ ಇಟ್ಟಿತ್ತು ಎಂದು ಸುಪ್ರೀಂ ಕೋರ್ಟ್‌ನ ಸಮಿತಿಯು ವರದಿ ನೀಡಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 'ರಾಷ್ಟ್ರ ರಾಜಧಾನಿಯಲ್ಲಿ ಆಮ್ಲಜನಕದ ಕೊರತೆಯಿಂದಾಗಿ ಪ್ರೀತಿಪಾತ್ರರನ್ನು ಕಳೆದುಕೊಂಡ ಜನರನ್ನು 'ಸುಳ್ಳುಗಾರರು' ಎಂಬಂತೆ ಬಿಂಬಿಸಬಾರದು' ಎಂದು ಹೇಳಿದ್ದಾರೆ.

ಈ ಬಗ್ಗೆ ಶುಕ್ರವಾರ ಟ್ವೀಟ್‌ ಮಾಡಿರುವ ಅವರು, 'ನನ್ನ ಅಪರಾಧವೆಂದರೆ ನಾನು ದೆಹಲಿಯ 2 ಕೋಟಿ ಜನರ ಉಸಿರಾಟಕ್ಕಾಗಿ ಹೋರಾಡಿದೆ' ಎಂದು ತಿಳಿಸಿದ್ದಾರೆ.

'ನೀವು ಚುನಾವಣಾ ರ‌್ಯಾಲಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ, ನಾನು ರಾತ್ರಿಯಿಡೀ ಆಮ್ಲಜನಕದ ವ್ಯವಸ್ಥೆ ಮಾಡುವ ಕೆಲಸ ಮಾಡುತ್ತಿದ್ದೆ. ಜನರಿಗೆ ಆಮ್ಲಜನಕದ ವ್ಯವಸ್ಥೆ ಮಾಡಲು ನಾನು ಹೋರಾಡಿದೆ' ಎಂದು ಬಿಜೆಪಿ ನಾಯಕರನ್ನು ಉದ್ದೇಶಿಸಿ ಕೇಜ್ರಿವಾಲ್‌ ಟ್ವೀಟ್‌ ಮಾಡಿದ್ದಾರೆ.

'ಆಮ್ಲಜನಕದ ಕೊರತೆಯಿಂದ ಜನರು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡಿದ್ದಾರೆ. ದಯವಿಟ್ಟು ಅವರನ್ನು ಸುಳ್ಳುಗಾರರು ಎಂದು ಕರೆಯಬೇಡಿ. ಅವರು ತುಂಬಾ ನೋವಿನಲ್ಲಿದ್ದಾರೆ" ಎಂದು ಕೇಜ್ರಿವಾಲ್ ಹೇಳಿದ್ದಾರೆ.

ರಾಷ್ಟ್ರ ರಾಜಧಾನಿಯಲ್ಲಿನ ಬೆಡ್‌ಗಳಿಗೆ ಬಳಕೆಯಾಗುವ ಆಮ್ಲಜನಕ ಸಾಮರ್ಥ್ಯವು 289 ಮೆಟ್ರಿಕ್ ಟನ್‌ ಇದೆ. ಆದರೆ, ಅಗತ್ಯವಿರುವುದಕ್ಕಿಂತ ನಾಲ್ಕು ಪಟ್ಟು ಅಂದರೆ 1,140 ಮೆಟ್ರಿಕ್ ಟನ್‌ ಆಮ್ಲಜನಕಕ್ಕೆ ದೆಹಲಿ ಸರ್ಕಾರವು ಬೇಡಿಕೆ ಇಟ್ಟಿತ್ತು ಎಂದು ಲೆಕ್ಕಪರಿಶೋಧನಾ ಸಮಿತಿ ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದೆ.

ಏಮ್ಸ್ ನಿರ್ದೇಶಕ ರಣದೀಪ್‌ ಗುಲೇರಿಯಾ ನೇತೃತ್ವದ ಐವರ ಸದಸ್ಯರ ಲೆಕ್ಕಪರಿಶೋಧನಾ ಸಮಿತಿಯನ್ನು ಸುಪ್ರೀಂ ಕೋರ್ಟ್‌ ರಚಿಸಿತ್ತು. ಆಮ್ಲಜನಕ ಬೇಡಿಕೆ ವಿಚಾರದಲ್ಲಿ ದೆಹಲಿ ಸರ್ಕಾರವು 'ಉತ್ಪ್ರೇಕ್ಷೆ' ಮಾಡಿದೆ ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT