ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಮತಾ ಕರೆ ಧ್ವನಿಮುದ್ರಣ ಬಿಡುಗಡೆ ಮಾಡಿದ ಬಿಜೆಪಿ: ‘ಮೃತದೇಹದ ಮೆರವಣಿಗೆ ನಡೆಸಿ’

Last Updated 17 ಏಪ್ರಿಲ್ 2021, 20:04 IST
ಅಕ್ಷರ ಗಾತ್ರ

ಕೋಲ್ಕತ್ತ: ‘ಸೀತಾಲಕುಚಿ ಗೋಲಿಬಾರ್‌ನಲ್ಲಿ ಮೃತಪಟ್ಟವರ ಶವಗಳ ಮೆರವಣಿಗೆ ಮಾಡಬೇಕು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಹೇಳುತ್ತಿರುವ ಆಡಿಯೊ ಕ್ಲಿಪ್‌ ಅನ್ನು ಬಿಜೆಪಿ ಶನಿವಾರ ಬಿಡುಗಡೆ ಮಾಡಿದೆ. ಇದನ್ನು ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ವಿಧಾನಸಭೆಗೆ 5ನೇ ಹಂತದ ಮತದಾನದ ದಿನವೇ ಈ ಆಡಿಯೊ ಕ್ಲಿಪ್‌ ಅನ್ನು ಬಿಡುಗಡೆ ಮಾಡಲಾಗಿದೆ. ಸೀತಾಲಕುಚಿಯ ಟಿಎಂಸಿ ಅಭ್ಯರ್ಥಿ ಜತೆ ಅವರು ಈ ಮಾತುಗಳನ್ನು ಆಡಿದ್ದಾರೆ ಎನ್ನಲಾಗಿದೆ. ಆದರೆ, ‘ಆಡಿಯೊ ಕ್ಲಿಪ್‌ ನಕಲಿ. ಅದು ಮಮತಾ ಬ್ಯಾನರ್ಜಿ ಅವರ ದನಿಯಲ್ಲ’ ಎಂದು ಟಿಎಂಸಿ ಸ್ಪಷ್ಟನೆ ನೀಡಿದೆ. ಇನ್ನೊಂದೆಡೆ, ‘ನನ್ನ ಫೋನ್‌ ಅನ್ನು ಕದ್ದಾಲಿಸಲಾಗುತ್ತಿದೆ. ಇದನ್ನು ಸಿಐಡಿ ತನಿಖೆಗೆ ಒಪ್ಪಿಸುತ್ತೇನೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ಬಿಜೆಪಿ ನಾಯಕರು ನಮ್ಮ ಅಡುಗೆ ಮನೆಯ ಮಾತುಕತೆಯನ್ನೂ ಕದ್ದಾಲಿಸುತ್ತಿದ್ದಾರೆ ಎನಿಸುತ್ತಿದೆ. ಈ ಬಗ್ಗೆ ಸಿಐಡಿ ತನಿಖೆಗೆ ಆದೇಶಿಸುತ್ತೇನೆ. ಇದರಲ್ಲಿ ಯಾರು ಭಾಗಿಯಾಗಿದ್ದಾರೆ ಎಂಬುದು ಗೊತ್ತಿದೆ, ಅವರನ್ನು ಸುಮ್ಮನೆ ಬಿಡುವುದಿಲ್ಲ’ ಎಂದು ಮಮತಾ ಹೇಳಿದ್ದಾರೆ.

ಬಿಜೆಪಿ ದೂರು: ‘ಶವಗಳ ಮೆರವಣಿಗೆ ನಡೆಸಲು ಸೂಚನೆ ನೀಡುವ ಮೂಲಕ ಮಮತಾ ಬ್ಯಾನರ್ಜಿ ಅವರು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದ್ದಾರೆ. ಇದು ಇನ್ನೂ ಮೂರು ಹಂತದ ಮತದಾನದ ಮೇಲೆ ಪ್ರಭಾವ ಬೀರಬಹುದು. ಹೀಗಾಗಿ ಮಮತಾ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಒತ್ತಾಯಿಸಿ ಬಿಜೆಪಿ ನಾಯಕ ಸ್ವಪನ್ ದಾಸ್‌ಗುಪ್ತಾ ಅವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.

ಟಿಎಂಸಿ ದೂರು: ‘ಬಿಜೆಪಿಯು ಟಿಎಂಸಿ ನಾಯಕಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಫೋನ್‌ ಕರೆಯನ್ನು ಕದ್ದಾಲಿಸುತ್ತಿದೆ. ಜತೆಗೆ ಇದನ್ನು ಮತದಾನದ ದಿನ ಬಿಡುಗಡೆ ಮಾಡುವ ಮೂಲಕ, ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ. ಇದು ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ. ಬಿಜೆಪಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದು ಟಿಎಂಸಿಯು ಚುನಾವಣಾ ಆಯೋಗಕ್ಕೆ ಪತ್ರ ಮುಖೇನ ಒತ್ತಾಯಿಸಿದೆ.

***

ಮೃತದೇಹಗಳ ಮೆರವಣಿಗೆ ಮಾಡಿ ಎಂದು ಸೂಚನೆ ನೀಡುವ ಮೂಲಕ ಮಮತಾ ಅವರು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ. ಇಷ್ಟು ಕೀಳುಮಟ್ಟಕ್ಕೆ ಇಳಿದಿದ್ದಾರೆ

-ಅಮಿತ್ ಮಾಳವೀಯ, ಬಿಜೆಪಿ ಐಟಿ ಘಟಕದ ಮುಖ್ಯಸ್ಥ

***

ಸೀತಾಲಕುಚಿಯ ಮೃತದೇಹಗಳನ್ನು ಬಳಸಿಕೊಂಡು ರಾಜಕೀಯ ಲಾಭ ಮಾಡಿಕೊಳ್ಳಲು ದೀದಿ ಯತ್ನಿಸಿದ್ದಾರೆ. ಇದು ಅವರ ಹವ್ಯಾಸ

-ನರೇಂದ್ರ ಮೋದಿ, ಪ್ರಧಾನಿ

***

ಅಭಿವೃದ್ಧಿಯ ವಿಚಾರದಲ್ಲಿ ನಮ್ಮೊಂದಿಗೆ ಸೆಣಸಲಾಗದ ಬಿಜೆಪಿ, ಫೋನ್‌ ಕರೆ ಕದ್ದಾಲಿಕೆ ಮತ್ತು ತಿರುಚಿದ ಆಡಿಯೊ ಕ್ಲಿಪ್‌ ಬಿಡುಗಡೆಯಂತಹ ಕೀಳು ತಂತ್ರ ಅನುಸರಿಸುತ್ತಿದೆ

-ಮಮತಾ ಬ್ಯಾನರ್ಜಿ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT