ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾನ್ಮಾರ್‌ನಲ್ಲಿ ಪ್ರತಿಭಟನೆ ಬೆಂಬಲಿಸುವ ಗಣ್ಯರಿಗೆ ಕಠಿಣ ಕ್ರಮದ ಬೆದರಿಕೆ

ಸೇನಾ ನಿಯಂತ್ರಿತ ಪತ್ರಿಕೆಯಲ್ಲಿ ಪ್ರತಿಭಟನೆ ಬೆಂಬಲಿಸುತ್ತಿರುವ ಸೆಲೆಬ್ರಿಟಿಗಳ ಹೆಸರು ಪ್ರಕಟ
Last Updated 6 ಏಪ್ರಿಲ್ 2021, 5:49 IST
ಅಕ್ಷರ ಗಾತ್ರ

ಯಾಂಗೂನ್: ಮ್ಯಾನ್ಮಾರ್‌ನಲ್ಲಿ ತಮ್ಮ ಆಡಳಿತದ ವಿರುದ್ಧ ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯನ್ನು ಬೆಂಬಲಿಸುತ್ತಿರುವ ಗಣ್ಯರ ವಿರುದ್ಧ ಪ್ರಕರಣ ದಾಖಲಿಸಲು ಮಿಲಿಟರಿ ಆಡಳಿತ ಮುಂದಾಗಿದ್ದು, ಕೆಲವರ ಹೆಸರನ್ನು ಫೋಟೊ ಸಹಿತ ಪತ್ರಿಕೆಯಲ್ಲಿ ಪ್ರಕಟಿಸಿ, ಎಚ್ಚರಿಕೆಯನ್ನೂ ರವಾನಿಸಿದೆ.

ಮಿಲಿಟರಿ ದಂಗೆ ವಿರುದ್ಧ ಫೆ.1ರಿಂದ ರಾಷ್ಟ್ರವ್ಯಾಪಿ ನಾಗರಿಕರು ನಡೆಸುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಭದ್ರತಾಪಡೆಗಳು ಪ್ರತಿಭಟನಾಕಾರರ ಮೇಲೆ ಹಿಂಸಾಚಾರ ನಡೆಸುತ್ತಿವೆ. ಈ ಕ್ರಮದ ಮುಂದುವರಿದ ಭಾಗವಾಗಿ ಸೇನಾಡಳಿತವು ಪ್ರತಿಭಟನೆ ಬೆಂಬಲಿಸುತ್ತಿರುವ ಗಣ್ಯರ ಮೇಲೂ ಪ್ರಹಾರ ನಡೆಸಲು ಮುಂದಾಗಿದೆ.

ಗ್ಲೋಬಲ್ ನ್ಯೂ ಲೈಟ್ ಆಫ್ ಮ್ಯಾನ್ಮಾರ್ ಪತ್ರಿಕೆಯಲ್ಲಿ ಭಾನುವಾರ ಮತ್ತು ಸೋಮವಾರ ಪ್ರಕಟವಾದ ಗಣ್ಯರ ಪಟ್ಟಿಗಳಲ್ಲಿ ನಟರು, ಸಂಗೀತಗಾರರು ಮತ್ತು ಸಾಮಾಜಿಕ ಮಾಧ್ಯಮದ ಪ್ರಭಾವಿಗಳ ಹೆಸರಿದೆ. ಈ ಪಟ್ಟಿಯಲ್ಲಿರುವರ ವಿರುದ್ಧ ‘ರಾಜ್ಯ ಸ್ಥಿರತೆಗೆ ಧಕ್ಕೆ ತರುವ ಸುದ್ದಿಗಳನ್ನು ಹಂಚಲಾಗುತ್ತಿದೆ‘ ಎಂಬ ದಂಡ ಸಂಹಿತೆ ಸೆಕ್ಷನ್ 505 (ಎ) ಅನ್ನು ಉಲ್ಲಂಘಿಸಿದ ಆರೋಪ ಹೊರಿಸಲಾಗಿದೆ. ಈ ಅಪರಾಧಕ್ಕೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡವಿದೆ. ಪತ್ರಿಕೆಯಲ್ಲಿ 20 ಗಣ್ಯರ ಪಟ್ಟಿಯ ಜತೆಗೆ, ಅವರ ಫೋಟೊಗಳು ಮತ್ತು ಪ್ರತಿಯೊಬ್ಬರ ಫೇಸ್‌ಬುಕ್‌ ಪೇಜ್‌ಗಳನ್ನೂ ಪ್ರಕಟಿಸಲಾಗಿದೆ.

ಕಳೆದ ಫೆಬ್ರವರಿಯಲ್ಲಿ ಹಲವು ನಟರು ಮತ್ತು ನಿರ್ದೇಶಕರ ವಿರುದ್ಧ ಇದೇ ರೀತಿ ಆರೋಪ ಹೊರಿಸಲಾಗಿತ್ತು. ಆದರೆ ಕಳೆದ ವಾರ ಸೇನಾ ನಿಯಂತ್ರಿತ ಮೈವಾಡ್ಡಿ ಟಿವಿಯು ‘ಗಣ್ಯರ ಪಟ್ಟಿ‘ಯನ್ನು ಪ್ರಸಾರ ಮಾಡಿದ ನಂತರ, ಪ್ರಖ್ಯಾತ ವ್ಯಕ್ತಿಗಳ ವಿರುದ್ಧದ ಮಿಲಿಟರಿ ಆಡಳಿತದ ಅಭಿಯಾನ ಚುರುಕು ಪಡೆಯಿತು. ಆರೋಪ ಎದುರಿಸುತ್ತಿರುವ ಗಣ್ಯರ ಪಟ್ಟಿಯಲ್ಲಿ ಸುಮಾರು 60 ಮಂದಿಯ ಹೆಸರಿದೆ.

ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವ ಸರ್ಕಾರವನ್ನು ಮರಳಿ ಸ್ಥಾಪಿಸಬೇಕೆಂಬ ಹಿನ್ನೆಲೆಯಲ್ಲಿ ಮಿಲಿಟರಿ ಆಡಳಿದ ವಿರುದ್ಧ ನಾಗರಿಕರು ಫೆ.1ರಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ಹತ್ತಿಕ್ಕಲು ಮಿಲಿಟರಿ ಆಡಳಿತ ಪ್ರತಿಭಟನಾಕಾರರ ವಿರುದ್ಧ ದೌರ್ಜನ್ಯ, ಹಿಂಸಾಚಾರ ನಡೆಸುತ್ತಿದೆ. ಸೇನಾ ಆಡಳಿತದ ಈ ಕೃತ್ಯಕ್ಕೆ ಇಲ್ಲಿವರೆಗೆ ಸುಮಾರು 47 ಮಕ್ಕಳು ಸೇರಿದಂತೆ 570 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸಂಸ್ಥೆಯೊಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT