ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಗಾಲ್ಯಾಂಡ್‌: ಪ್ರಧಾನಿ ಕೈಗೊಂಡ ಕ್ರಮಗಳು ಫಲ ನೀಡಲಿವೆ– ಅಮಿತ್ ಶಾ

ನಡೆಯುತ್ತಿದೆ ನಾಗಾ ಶಾಂತಿ ಮಾತುಕತೆ * ಚುನಾವಣೆ ಬಳಿಕ ಎಲ್ಲ ಸಮಸ್ಯೆಗಳು ಪರಿಹಾರ
Last Updated 21 ಫೆಬ್ರುವರಿ 2023, 12:55 IST
ಅಕ್ಷರ ಗಾತ್ರ

ತುಯೆನ್‌ಸಾಂಗ್ (ನಾಗಾಲ್ಯಾಂಡ್‌): ‘ನಾಗಾ ಶಾಂತಿ ಮಾತುಕತೆ ನಡೆಯುತ್ತಿದ್ದು, ಈಶಾನ್ಯ ರಾಜ್ಯದಲ್ಲಿ ಶಾಶ್ವತವಾಗಿ ಶಾಂತಿ ನೆಲೆಸುವಂತೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಕ್ರಮಗಳು ಫಲಪ್ರದವಾಗಲಿವೆ’ ಎಂದು ಗೃಹ ಸಚಿವ ಅಮಿತ್‌ ಶಾ ಮಂಗಳವಾರ ತಿಳಿಸಿದರು.

ತುಯೆನ್‌ಸಾಂಗ್‌ನಲ್ಲಿ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಪೂರ್ವ ನಾಗಾಲ್ಯಾಂಡಿನ ಅಭಿವೃದ್ಧಿ ಮತ್ತು ಜನರ ಹಕ್ಕುಗಳ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಸಮಸ್ಯೆಗಳಿವೆ. ಅವುಗಳನ್ನು ವಿಧಾನಸಭಾ ಚುನಾವಣೆ ಬಳಿಕ ಪರಿಹರಿಸಲಾಗುವುದು ಎಂದು ಹೇಳಿದರು.

‘2014ಕ್ಕೂ ಮುನ್ನ ನಾಗಾಲ್ಯಾಂಡ್‌ನಲ್ಲಿ ದಂಗೆಯ ವಾತಾವರಣ ಇತ್ತು. ನಾವು ಇಲ್ಲಿ ಶಾಂತಿ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆವು. ನಾಗಾ ಸಂಸ್ಕೃತಿ, ಭಾಷೆ, ಸಂಪ್ರದಾಯದ ಸಂರಕ್ಷಣೆಯೊಂದಿಗೆ ರಾಜ್ಯದಲ್ಲಿ ಶಾಶ್ವತ ಶಾಂತಿ ಸ್ಥಾಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೈಗೊಂಡಿರುವ ಕ್ರಮಗಳು ಫಲ ನೀಡಲಿವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿನ ಆದಿವಾಸಿಗಳ ಪ್ರಮುಖ ಸಂಘಟನೆಯಾಗಿರುವ ‘ಈಸ್ಟರ್ನ್‌ ನಾಗಾಲ್ಯಾಂಡ್‌ ಪೀಪಲ್ಸ್‌ ಆರ್ಗನೈಸೇಷನ್‌’ (ಇಎನ್‌ಪಿಒ) ‘ಫ್ರಂಟಿಯರ್‌ ನಾಗಾಲ್ಯಾಂಡ್‌’ ಪ್ರತ್ಯೇಕ ರಾಜ್ಯ ರಚನೆ ಬೇಡಿಕೆಯನ್ನಿಟ್ಟು, ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದೆ.

‘ಗೃಹ ಸಚಿವಾಲಯವು ಈ ಸಂಬಂಧ ಇಎನ್‌ಪಿಒ ಜತೆ ಮಾತುಕತೆ ನಡೆಸಿದ್ದು ಒಪ್ಪಂದ ಏರ್ಪಟ್ಟಿದೆ. ಆದರೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಅದನ್ನು ಕಾರ್ಯಗತಗೊಳಿಸಲು ಸಾಧ್ಯವಾಗಿಲ್ಲ’ ಎಂದು ಅಮಿತ್ ಶಾ ಇದೇ ವೇಳೆ ತಿಳಿಸಿದರು.

‘ಚುನಾವಣೆ ಬಳಿಕ ಒಪ್ಪಂದ ಜಾರಿಯಾಗಲಿದೆ. ಆ ಮೂಲಕ ಪೂರ್ವ ನಾಗಾಲ್ಯಾಂಡಿನ ಜನರ ಎಲ್ಲ ಸಮಸ್ಯೆಗಳು ಪರಿಹಾರವಾಗಲಿವೆ. ಅಲ್ಲದೆ ಈ ಪ್ರದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯೂ ಆಗಲಿದೆ ಮತ್ತು ಇಲ್ಲಿನ ಜನರಿಗೆ ತಮ್ಮ ಹಕ್ಕುಗಳೂ ದೊರೆಯಲಿವೆ’ ಎಂದು ಅವರು ಹೇಳಿದರು.

‘ಈಶಾನ್ಯ ಭಾಗದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಕೇಂದ್ರದ ಬಿಜೆಪಿ ಸರ್ಕಾರ ಒಂಬತ್ತು ವರ್ಷಗಳಲ್ಲಿ ಹಲವು ಕ್ರಮಗಳನ್ನು ತೆಗೆದುಕೊಂಡಿದೆ’ ಎಂದು ಅವರು ಪ್ರತಿಪಾದಿಸಿದರು. ಈ ಅವಧಿಯಲ್ಲಿ ಈಶಾನ್ಯ ಭಾಗದಲ್ಲಿ ಹಿಂಸಾತ್ಮಕ ಘಟನೆಗಳಲ್ಲಿ ಶೇಕಡಾ 70ರಷ್ಟು ಕುಸಿತವಾಗಿದೆ ಎಂದು ಅವರು ತಿಳಿಸಿದರು.

ಅಲ್ಲದೆ ಈ ಭಾಗದಲ್ಲಿ ಭದ್ರತಾ ಪಡೆಗಳ ಸಿಬ್ಬಂದಿಯ ಸಾವಿನ ಪ್ರಮಾಣ ಶೇ 60ರಷ್ಟು ಹಾಗೂ ನಾಗರಿಕರ ಸಾವಿನ ಪ್ರಮಾಣ ಶೇ 83ರಷ್ಟು ಕಡಿಮೆಯಾಗಿದೆ ಎಂದು ಅವರು ಅಂಕಿ ಅಂಶಗಳ ಸಹಿತ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT