ಮಂಗಳವಾರ, ಮಾರ್ಚ್ 21, 2023
20 °C

ಯುವತಿ ಆಕರ್ಷಿಸಲು ಪಿಸ್ತೂಲು ಖರೀದಿಸಿ; ಪೊಲೀಸರ ಅತಿಥಿಯಾದ ರೋಮಿಯೊ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಧಿಮಾಪುರ: ಸಾಮಾನ್ಯವಾಗಿ ಹದಿಹರೆಯದ ಯುವಕರು ಗುಲಾಬಿ ಹೂ ಅಥವಾ ಚಾಕೊಲೇಟ್‌ ನೀಡಿ ಯುವತಿಯರನ್ನು ಸೆಳೆಯುವ ಪ್ರಯತ್ನ ಮಾಡುತ್ತಾರೆ. ಆದರೆ ಇಲ್ಲೊಬ್ಬ ರೋಮಿಯೊ ಯುವತಿ ಸೆಳೆಯುವ ಸಲುವಾಗಿ ಪಿಸ್ತೂಲು ಖರೀದಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ಹೌದು, ನಾಗಾಲ್ಯಾಂಡ್‌ ರಾಜ್ಯದ ಧಿಮಾಪುರ ನಗರದಲ್ಲಿ ಈ ಘಟನೆ ನಡೆದಿದೆ. ಪೊಲೀಸರು ಬಂಧಿಸಿದ ಯುವಕನನ್ನು ಟೊರಿನ್‌ (25 ವರ್ಷ) ಎಂದು ಗುರುತಿಸಲಾಗಿದೆ.

ಘಟನೆ ಹಿನ್ನೆಲೆ...

ಧಿಮಾಪುರದ ಪಡುಂಪುಖುರಿ ಬಡಾವಣೆಯಲ್ಲಿ ಟೊರಿನ್‌ ವಾಸವಾಗಿದ್ದಾನೆ. ಅದೇ ಬಡಾವಣೆಯ ಯುವತಿಯೊಬ್ಬರ ಮೇಲೆ ಟೊರಿನ್‌ಗೆ ಮನಸ್ಸಾಗಿದೆ. ಹೇಗಾದರೂ ಮಾಡಿ ಆ ಯುವತಿಯನ್ನು ಆಕರ್ಷಿಸಬೇಕು ಎಂದು ನಿಶ್ಚಯಿಸಿ ಪಿಸ್ತೂಲ್‌ ಖರೀದಿಸಲು ಮುಂದಾಗಿದ್ದಾನೆ. 

ತನ್ನ ಗೆಳೆಯನ ಮೂಲಕ ಅಕ್ರಮವಾಗಿ 22 ಕ್ಯಾಲಿಬರ್‌ ಪಿಸ್ತೂಲ್‌ ಖರೀದಿಸಿದ್ದಾನೆ. ದುರದೃಷ್ಟವಶಾತ್‌, ಟೊರಿನ್‌ ಪಿಸ್ತೂಲ್‌ ಖರೀದಿಸಿದ ವಿಷಯ ಆ ಯುವತಿಗೆ ತಿಳಿಯಲೇ ಇಲ್ಲ. ಬದಲಿಗೆ ಸ್ಥಳೀಯರಿಗೆ ಗೊತ್ತಾಯಿತು.

ಕೂಡಲೇ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಟೊರಿನ್‌ನನ್ನು ಬಂಧಿಸಿದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನಮ್ಮ ಬಡಾವಣೆಯಲ್ಲಿರುವ ಯುವತಿಯನ್ನು ಆಕರ್ಷಿಸಲು ಪಿಸ್ತೂಲು ಖರೀದಿಸಿದೆ ಎಂದು ಟೊರಿನ್‌ ಬಾಯ್ಬಿಟ್ಟಿದ್ದಾನೆ.

ಅವನ ಹೇಳಿಕೆಯಿಂದಾಗಿ ಪೊಲೀಸರು ಕೂಡ ನಿರಾಳರಾದರು. ಯಾಕೆಂದರೆ ಆರಂಭದಲ್ಲಿ ಟೊರಿನ್‌ನನ್ನು ಪೊಲೀಸರು ತೀವ್ರವಾದಿ ಎಂದು ಶಂಕಿಸಿದ್ದರಂತೆ!

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು