ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಲಿಕಾಪ್ಟರ್‌ ದುರಂತ: ಗ್ರಾಮಸ್ಥರ ನಿಸ್ವಾರ್ಥ ಸೇವೆಗೆ ಸೇನೆಯ ಕೃತಜ್ಞತೆ

Last Updated 18 ಡಿಸೆಂಬರ್ 2021, 21:20 IST
ಅಕ್ಷರ ಗಾತ್ರ

ಚೆನ್ನೈ: ತಮಿಳುನಾಡಿನ ನೀಲಗಿರಿ ಜಿಲ್ಲೆಯ ಕೂನೂರಿನಲ್ಲಿ ಡಿ.8ರಂದು ಸೇನಾ ಹೆಲಿಕಾಪ್ಟರ್‌ ಪತನವಾದ ಸಮಯದಲ್ಲಿ ಹತ್ತಿರದ ನಂಜಪ್ಪಂಚಥಿರಮ್‌ ಗ್ರಾಮದ ಜನರು ರಕ್ಷಣಾ‍ಪಡೆಗಳ ಜೊತೆ ಸೇರಿ ಪ್ರಾಣವನ್ನೂ ಲೆಕ್ಕಿಸದೇ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದರು. ಅವರ ಸಾಹಸಕ್ಕೆ ಈಗ ಎಲ್ಲರಿಂದ ಮಚ್ಚುಗೆ ವ್ಯಕ್ತವಾಗುತ್ತಿದೆ.

ಈ ದುರಂತ ಸಂಭವಿಸಿದಾಗ ಮೊದಲು ಸ್ಥಳಕ್ಕೆ ಬಂದು ಕಾರ್ಯಾಚರಣೆಯಲ್ಲಿ ತೊಡಗಿದ್ದು ಇದೇ ಗ್ರಾಮದ ಜನರು.

ಗ್ರಾಮಸ್ಥರನ್ನು ಭೇಟಿಯಾಗಲು ದಕ್ಷಿಣ ಭಾರತ ಕಮಾಂಡಿಂಗ್‌ ಅಧಿಕಾರಿ ಲೆಫ್ಟಿನೆಂಟ್‌ ಜನರಲ್‌ ಎ. ಅರುಣ್‌ ಅವರೇ ಗ್ರಾಮಕ್ಕೆ ಆಗಮಿಸಿದ್ದರು. ಅವರ ಜೊತೆ ರಾಜ್ಯ ಸರ್ಕಾರದ ಇತರ ಅಧಿಕಾರಿಗಳೂ ಆಗಮಿಸಿ, ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು.

‘ಗ್ರಾಮಸ್ಥರು ತಮ್ಮ ಪ್ರಾಣವನ್ನೂ ಲೆಕ್ಕಿಸಿಲ್ಲ. ದುರಂತ ಸಂಭವಿಸಿದ ಸ್ಥಳಕ್ಕೆ ತೆರಳಿ ಅವರ ಕೈಲಾದ ಕೆಲಸ ಮಾಡಿದ್ದಾರೆ. ಬೆಂಕಿ ಆರಿಸಲು ಮತ್ತು ಸುಟ್ಟು ಕರಕಲಾದ ದೇಹಗಳನ್ನು ಹೆಲಿಕಾಪ್ಟರ್‌ನಿಂದ ಹೊರ ತೆಗೆಯಲು ಪೊಲೀಸರು ಮತ್ತು ಅಗ್ನಿಶಾಮಕ ದಳ ಸಿಬ್ಬಂದಿಗೆಅವರು ಸಹಾಯ ಮಾಡಿದ್ದಾರೆ. ಅವರ ನಿಸ್ವಾರ್ಥ ಸೇವೆಯನ್ನು ಹೊಗಳಲು ನನ್ನ ಬಳಿ ಪದಗಳಿಲ್ಲ’ ಎಂದು ಅರುಣ್‌ ಹೇಳಿದ್ದಾರೆ.

ಹೊದಿಕೆಗಳು ಮತ್ತು ಇತರ ಗೃಹೋಪಯೋಗಿ ವಸ್ತುಗಳಿದ್ದ ಕಿಟ್‌ ಅನ್ನು ಈ ವೇಳೆ ಅವರು ಗ್ರಾಮಸ್ಥರಿಗೆ ವಿತರಿಸಿದ್ದಾರೆ.

‘ಹೆಲಿಕಾಪ್ಟರ್‌ ಪತನವಾದ ವೇಳೆ ನೀವು ನೀಡಿದ ನಿಸ್ವಾರ್ಥ ಸೇವೆಗೆ ಪ್ರತ್ಯುಪಕಾರವಾಗಿ 2022ರ ಡಿ.8ವರೆಗೆ ವೆಲ್ಲಿಂಗ್ಟನ್‌ ಸೇನಾ ಆಸ್ಪತ್ರೆಯಲ್ಲಿ ನಿಮಗೆ ಉಚಿತ ವೈದ್ಯಕೀಯ ತಪಾಸಣೆ ಒದಗಿಸಲಾಗುವುದು. ಪ್ರತಿ ತಿಂಗಳು ನಿಮ್ಮ ಹಳ್ಳಿಗೆ ಒಬ್ಬ ವೈದ್ಯರು ಮತ್ತು ನರ್ಸ್‌ ಅವರನ್ನು ಕಳಿಸಿ ಉಚಿತ ವೈದ್ಯಕೀಯ ತಪಾಸಣೆ ನಡೆಸಲಾಗುವುದು’ ಎಂದಿದ್ದಾರೆ.

ಗ್ರಾಮಸ್ಥರು ‘ಪ್ರಜಾವಾಣಿ’ ಜೊತೆಈ ಕುರಿತು ಮಾತನಾಡಿದ್ದಾರೆ. ‘ಸೇನಾಧಿಕಾರಿ ನಮ್ಮನ್ನು ಭೇಟಿಯಾಗಿದ್ದು ನಮಗೆ ಸಂತೋಷ ತಂದಿದೆ. ಆದರೆ ನಮ್ಮಿಂದ ಯಾರನ್ನೂ ಬದುಕಿಸಲು ಆಗಲಿಲ್ಲ ಎಂಬ ನೋವು ನಮಗೆ ಇದೆ. ಕೆಲವರಾದರೂ ಬದುಕುಳಿಯುತ್ತಾರೆ ಎಂದು ಭಾವಿಸಿದ್ದೆವು. ಆದರೆ ಹಾಗೆ ಆಗಲಿಲ್ಲ’ ಎಂದು ಗ್ರಾಮಸ್ಥ ಸಗಾಯರಾಜ್‌ ಹೇಳಿದ್ದಾರೆ.

‘ನಾವು ಸೇನೆಯಿಂದ ಏನನ್ನೂ ನಿರೀಕ್ಷಿಸಿರಲಿಲ್ಲ. ಸೇನಾಧಿಕಾರಿ ನಮ್ಮ ಹಳ್ಳಿಗೆ ಭೇಟಿ ನೀಡಿ ನಮ್ಮ ಜೊತೆ ಮಾತನಾಡಿದ್ದು ಖುಷಿ ತಂದಿದೆ. ನಾವು ಭಾರತೀಯ ಸೇನೆಯ ಅಭಿಮಾನಿಗಳು. ಸೇನೆ ನೀಡುವ ಸಹಾಯವನ್ನು ನಾವು ಸಂತೋಷದಿಂದ ಸ್ವೀಕರಿಸುತ್ತೇವೆ’ ಎಂದು ಗ್ರಾಮಸ್ಥ ಜಯಶಂಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT