ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವಾಚ್ಯ ಪದಗಳಿಂದ ಶಾ, ಆದಿತ್ಯನಾಥ್‌ರನ್ನು ಉದ್ಧವ್ ನಿಂದಿಸಿದ್ದರು: ರಾಣೆ

Last Updated 25 ಆಗಸ್ಟ್ 2021, 15:25 IST
ಅಕ್ಷರ ಗಾತ್ರ

ಮುಂಬೈ: ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಬಂಧನಕ್ಕೊಳಗಾದ ಒಂದು ದಿನದ ನಂತರ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ನಾರಾಯಣ ರಾಣೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಮಹಾರಾಷ್ಟ್ರ ಮುಖ್ಯಮಂತ್ರಿ ಅವಾಚ್ಯ ಪದಗಳಿಂದ ನಿಂದಿಸಿದ್ದರು ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಹೇಳಿಕೆ ನೀಡಿದ್ದ ಬಿಜೆಪಿ ಮುಖಂಡ ನಾರಾಯಣ ರಾಣೆ ಅವರನ್ನು ಮಂಗಳವಾರ ಬಂಧಿಸಿದ ಬಳಿಕ ತಡರಾತ್ರಿ ಜಾಮೀನು ನೀಡಲಾಗಿತ್ತು. ಬಿಜೆಪಿಯ ಜನಾಶೀರ್ವಾದ ಯಾತ್ರೆಯಲ್ಲಿ ‘ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕೆನ್ನೆಗೆ ಬಾರಿಸುತ್ತೇನೆ’ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದರು.

ಮಂಗಳವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತಾನಾಡಿದ ರಾಣೆ, 'ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಚಪ್ಪಲಿಯಿಂದ ಹೊಡೆಯಬೇಕು ಎಂದು ಉದ್ಧವ್ ಠಾಕ್ರೆ ಹೇಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ನಾಚಿಕೆಯಿಲ್ಲದವರು ಎಂದು ಕರೆದಿದ್ದರು. ಶಾ ವಿರುದ್ಧ ಉದ್ದೇಶಪೂರ್ವಕವಾಗಿ ಅಸಂಸದೀಯ ಪದಗಳನ್ನು ಬಳಕೆ ಮಾಡುತ್ತಿರುವುದಾಗಿ ಹೇಳಿದ್ದರು. ಇದು ಎಂತಹ ಸುಸಂಸ್ಕೃತ ಭಾಷೆ' ಎಂದು ರಾಣೆ ಪ್ರಶ್ನಿಸಿದರು.

'ನಾನು ಯಾರಿಗೂ ಭಯಪಡುವುದಿಲ್ಲ ಮತ್ತು ನನ್ನ ನಿಲುವಿನಿಂದ ಹಿಂದೆ ಸರಿಯುವುದಿಲ್ಲ. ನನ್ನ ಆಕ್ರೋಶದ ಮಾತುಗಳು ದೇಶದ ಸ್ವಾತಂತ್ರ್ಯ ವರ್ಷವನ್ನು ಮರೆತ ಮಹಾರಾಷ್ಟ್ರ ಮುಖ್ಯಮಂತ್ರಿಗಳ ವಿರುದ್ಧವಾಗಿತ್ತು. ಅವರು ಈಗಾಗಲೇ ಹೇಳಿದ್ದನ್ನು ನಾನು ವರದಿಗಾರರಿಗೆ ಹೇಳಿದ್ದೇನೆ. ಹಾಗಾಗಿ ಅದು ಹೇಗೆ ಅಪರಾಧವಾಗುತ್ತದೆ' ಎಂದು ಪ್ರಶ್ನಿಸಿದರು.

ಸೋಮವಾರ ರಾಣೆ ವಿವಾದಾತ್ಮಕ ಹೇಳಿಕೆಗಳಿಗೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಹಲವಾರು ಜಿಲ್ಲೆಗಳಲ್ಲಿ ಶಿವಸೇನಾ ಕಾರ್ಯಕರ್ತರು ಪೊಲೀಸ್ ದೂರು ಸಲ್ಲಿಸಿದರು. ಈ ದೂರಿನ ಮೇರೆಗೆ ವಿಚಾರಣೆ ನಡೆಸಿದ ಪೊಲೀಸರು, ರಾಣೆ ಅವರನ್ನು ಬಂಧಿಸಿ ನ್ಯಾಯಾಲಕ್ಕೆ ಹಾಜರುಪಡಿಸಿದ್ದರು. ಬಳಿಕ ಜಾಮೀನು ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT