ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಶಾ, ಪೂಜಾ ಶಂಕಾಸ್ಪದ ಸಾವು ಪ್ರಕರಣ ಕೆದಕಿದ ಕೇಂದ್ರ ಸಚಿವ ನಾರಾಯಣ ರಾಣೆ

Last Updated 26 ಆಗಸ್ಟ್ 2021, 12:34 IST
ಅಕ್ಷರ ಗಾತ್ರ

ಮುಂಬೈ: ‘ಟಿಕ್‌ಟಾಕ್‌ ಸ್ಟಾರ್‌ ಪೂಜಾ ಚವಾಣ್‌, ಟ್ಯಾಲೆಂಟ್‌ ಮ್ಯಾನೇಜರ್‌ ದಿಶಾ ಸಾಲಿಯಾನ್ ಅವರ ಶಂಕಾಸ್ಪದ ಸಾವಿಗೆ ಕಾರಣರಾರು'ಎಂದು ಕೇಂದ್ರ ಸಚಿವ ನಾರಾಯಣ ರಾಣೆ ಪ್ರಶ್ನಿಸಿದ್ದು, ಈ ಮೂಲಕ ರಾಜಕೀಯ ವಿವಾದವನ್ನು ಕೆದಕಿದ್ದಾರೆ.

ದಿಶಾ ಸಾಲಿಯಾನ್ ಅವರು ಅಲ್ಪಕಾಲ ಬಾಲಿವುಡ್ ನಟ ಸುಶಾಂತ್‌ ಸಿಂಗ್ ರಾಜ್‌ಪೂತ್‌ ಜೊತೆಗೂ ಕಾರ್ಯನಿರ್ವಹಿಸಿದ್ದು, ಸುಮಾರು ಒಂದು ವರ್ಷದ ಹಿಂದೆ ಶಂಕಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು.

ಯಾರ ಹೆಸರನ್ನು ಉಲ್ಲೇಖಿಸದ ರಾಣೆ, ‘ದಿಶಾ ಸಾಲಿಯಾನ್‌ ಸತ್ತಿದ್ದು ಹೇಗೆ? ಅಪರಾಧ ಕೃತ್ಯ ನಡೆದಾಗ ಆ ಸ್ಥಳದಲ್ಲಿ ಯಾರಿದ್ದರು. ಯಾವ ಸಚಿವ ಇದ್ದರು? ಪೊಲೀಸರು ಏಕೆ ಕಾರಣ ಬಹಿರಂಗಪಡಿಸಿಲ್ಲ? ಪೂಜಾ ಚವಾಣ್‌ಗೆ ಏನಾಯಿತು? ಎಂದು ಪ್ರಶ್ನಿಸಿದರು. ‘ಈ ಎರಡು ಸಾವಿಗೆ ಕಾರಣರಾದವರ ಬಂಧನದವರೆಗೆ ನಾನು ಸುಮ್ಮನಿರುವುದಿಲ್ಲ’ ಎಂದು ಎಚ್ಚರಿಸಿದರು.

‘ಅಗತ್ಯವಿದ್ದರೆ ನಾನು ಕೋರ್ಟ್‌ಗೂ ಹೋಗುತ್ತೇನೆ. ನೋಡೋಣ ಅವರನ್ನು ಯಾರು ರಕ್ಷಿಸುತ್ತಾರೆ’ ಎಂದು ಹೇಳಿದರು.

ದಿಶಾ ಅವರು 2020ರ ಸೆಪ್ಟೆಂಬರ್‌ 8ರಂದು ಮಲ್‌ನಾಡ್‌ನ ಗ್ಯಾಲಕ್ಸಿ ರೀಜೆಂಟ್‌ ಕಟ್ಟಡದ 14ನೇ ಮಹಡಿಯಿಂದ ಜಿಗಿದು ಆ್ಮಹತ್ಯೆ ಮಾಡಿಕೊಂಡಿದ್ದರು. ಸುಶಾಂತ್‌ ಸಾವಿಗೆ ಕೆಲವೇ ದಿನ ಈ ಘಟನೆ ನಡೆದಿತ್ತು. ಪೂಜಾ ಚವಾಣ್‌ ಅವರು ಪುಣೆಯ ಹೆವೆನ್‌ ಪಾರ್ಕ್‌ ಕಟ್ಟಡದಿಂದ ಜಿಗಿದು 2021ರ ಆಗಸ್ಟ್ 7ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕೃತ್ಯದ ಜೊತೆಗೆ ರಾಜ್ಯ ಅರಣ್ಯ ಸಚಿವ, ಶಿವಸೇನೆ ಮುಖಂಡ ಸಂಜಯ್‌ ರಾಥೋಡ್‌ ಹೆಸರು ತಳಕುಹಾಕಿಕೊಂಡಿದ್ದು, ಬಳಿಕ ರಾಜೀನಾಮೆ ನೀಡಿದ್ದರು.

ಆರೋಗ್ಯ ತಪಾಸಣೆಗೆ ಒಳಗಾದ ರಾಣೆ

ಕೇಂದ್ರ ಸಚಿವ ನಾರಾಯಣ ರಾಣೆ ಅವರು ಗುರುವಾರ ಇಲ್ಲಿನ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಆರೋಗ್ಯ ತಪಾಸಣೆಗೆ ಒಳಗಾದರು. ಮಧುಮೇಹದಿಂದ ಬಳಲುತ್ತಿರುವ ರಾಣೆ ಅವರು ಲೀಲಾವತಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧದ ವಿವಾದಾಸ್ಪದ ಹೇಳಿಕೆಗೆ ಪೊಲೀಸರು ಇವರನ್ನು ಬಂಧಿಸಿದ್ದರು. ಬಳಿಕ ಜಾಮೀನು ಮೇಲೆ ಬಿಡುಗಡೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT