ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಕಾಯ್ದೆ ರದ್ದು: ಮಣಿದ ಮೋದಿ, ರೈತರ ಜಯ

ರೈತರ ಒಂದು ವರ್ಷದ ಪ್ರತಿಭಟನೆಗೆ ಗೆಲುವು: ಕಾಯ್ದೆ ಹಿಂಪಡೆಯುವ ಭರವಸೆ ಸಿಕ್ಕರೂ ಹೋರಾಟ ನಿಲ್ಲಿಸದಿರಲು ನಿರ್ಧಾರ
Last Updated 19 ನವೆಂಬರ್ 2021, 22:54 IST
ಅಕ್ಷರ ಗಾತ್ರ

ಬಸವಣ್ಣನರಂತೆ ಗುರು ನಾನಕ್‌ ಅವರೂ ಕಾಯಕವೇ ಕೈಲಾಸ (ಕೀರತ್ ಕರೋ) ಎಂದು ಬೋಧಿಸಿದ್ದರು. ಕಾಯಕಜೀವಿಗಳ ಪ್ರತಿಭಟನೆಯ ಮುಂದೆ ಅಹಂಕಾರಿ ಪ್ರಭುತ್ವ ನಾನಕ್‌ ಜಯಂತಿಯಂದು ಶಿರ ಬಾಗಿಸಿದೆ. ಉತ್ತರಪ್ರದೇಶದ ಚುನಾವಣೆಯ ಸೋಲಿನ ಭಯದ ನಡುವೆಯಾದರೂ ಸರಿ, ಜನತಂತ್ರ ಮತ್ತೊಮ್ಮೆ ತಲೆ ಎತ್ತಿದೆ.

ಸೋಲಲು ಒಲ್ಲದ ರೈತರ ದೃಢಸಂಕಲ್ಪದ ಮುಂದೆ ಆಳುವವರ ಹಂಚಿಕೆಗಳು ಹುನ್ನಾರಗಳು ಸದ್ಯಕ್ಕಾದರೂ ಹರಿದುಬಿದ್ದಿವೆ.

ಉಗುಳಿದ್ದನ್ನು ಪುನಃ ನುಂಗಬೇಕಿರುವ ಶೋಚನೀಯ ಸಮಯ. ಚುನಾವಣೆ ಸೋಲಿನ ಅಳುಕು, ಅಧಿಕಾರದ ಗದ್ದುಗೆಯ ಮೋಹ ಏನನ್ನು ಬೇಕಾದರೂ ಮಾಡಿಸೀತು ಎಂಬುದಕ್ಕೆ ಇದೊಂದು ಹೊಳಪಿನ ಉದಾಹರಣೆ. ಚುನಾವಣೆ ಗೆಲ್ಲಲಾದರೂ ಸರಿ, ಮಾಡಿದ ತಪ್ಪನ್ನು ತಿದ್ದಿಕೊಳ್ಳುವ ವಿವೇಕ ಶ್ಲಾಘನೀಯ ಸಂಗತಿ. ಒಂದು ಹೊಸ ಆರಂಭದ ವಚನ ನೀಡಿದ್ದಾರೆ. ಅದನ್ನು ಮುರಿಯದೆ ಅಕ್ಷರಶಃ ನಡೆಸಿಕೊಡುವುದು ಅವರದೇ ಹೊಣೆಗಾರಿಕೆ.

ಪ್ರಧಾನಿಯವರು ಈ ಸಲ ಪ್ರತಿಭಟನನಿರತ ರೈತರನ್ನು ರೈತರೆಂದು ಕರೆದಿರುವುದು ಒಳ್ಳೆಯ ಬೆಳವಣಿಗೆ.

ವಿಶ್ವದ ಅತಿ ದೊಡ್ಡದೆಂಬ ದಾಖಲೆ ನಿಲ್ಲಿಸಿರುವ ಬೃಹತ್ ರೈತ ಆಂದೋಲನಕ್ಕೆ ವರ್ಷ ತುಂಬುವ ಹೊತ್ತಿನಲ್ಲಿ ಮೂರು ಕೃಷಿ ಕಾಯ್ದೆಗಳನ್ನು ರದ್ದು ಮಾಡುವ ವಚನ ನೀಡಿದ್ದಾರೆ ಪ್ರಧಾನಿ.

ಇದೀಗ ಉತ್ತರ ಪ್ರದೇಶದಂತಹ ದೈತ್ಯ ರಾಜ್ಯವೂ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳು ಕದ ಬಡಿದಿರುವ ಹೊತ್ತಿನಲ್ಲಿ ರೈತ ಸಮುದಾಯವನ್ನು ಸಿಡಿದೆಬ್ಬಿಸಿದ್ದ ಮೂರು ‘ಕರಾಳ’ ಕೃಷಿ ಕಾಯಿದೆಗಳನ್ನು ರದ್ದು ಮಾಡಲು ಮುಂದಾಗಿದ್ದಾರೆ.

ಮೋದಿಯವರ ಸದರಿ ಮನಃಪರಿವರ್ತನೆಯ ಹಿಂದೆ 2024ರ ಲೋಕಸಭಾ ಚುನಾವಣೆಯ ನಿಚ್ಚಳ ಗೆಲುವಿನ ಲೆಕ್ಕಾಚಾರವನ್ನು ಕಾಣಬಹುದಾಗಿದೆ.

ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್, ಗೋವಾ ಹಾಗೂ ಮಣಿಪುರದ ವಿಧಾನಸಭೆ ಚುನಾವಣೆಗಳು ಸಮೀಪಿಸಿವೆ. ಬಿಜೆಪಿಗೆ ಮತ್ತು ಪ್ರಧಾನಿಗೆ ಗೆಲುವು ಮುಖ್ಯ. ನಾಲ್ಕರಲ್ಲಿ ಬಿಜೆಪಿಯೇ ಅಧಿಕಾರ ಹಿಡಿದಿದೆ. ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬಿನ ಫಲಿತಾಂಶಗಳು 2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗಳಲ್ಲಿ ಬಿಜೆಪಿಯ ಹಣೆಬರೆಹಕ್ಕೆ ನಿರ್ಣಾಯಕ ಎನಿಸಲಿವೆ. 2024ರಲ್ಲಿ ಮೋದಿಯವರು ಪುನಃ ಪ್ರಧಾನಿ ಆಗಬೇಕಿದ್ದರೆ ಇದೀಗ ಉತ್ತರಪ್ರದೇಶದ ವಿಧಾನಸಭಾ ಚುನಾವಣೆಗಳನ್ನು ಯೋಗಿ ಆದಿತ್ಯನಾಥ ಅವರು ಮತ್ತೊಮ್ಮೆ ಗೆಲ್ಲಲೇಬೇಕಿದೆ.

ಉತ್ತರಪ್ರದೇಶ, ಉತ್ತರಾಖಂಡ ಹಾಗೂ ಪಂಜಾಬಿನ ಒಟ್ಟು ಲೋಕಸಭಾ ಸೀಟುಗಳ ಸಂಖ್ಯೆ 98. ಗೋವಾ ಮಣಿಪುರದಲ್ಲಿ ಕೇವಲ ನಾಲ್ಕು.

42 ಲೋಕಸಭಾ ಸ್ಥಾನಗಳನ್ನು ಹೊಂದಿದ್ದ ಬಂಗಾಳವನ್ನು ಗೆಲ್ಲುವ ಮಹದಾಸೆ ಈಡೇರದೆ ಹೋಯಿತು. ಬಂಗಾಳದಲ್ಲಿ ಗೆದ್ದಿದ್ದರೆ, ಅದು ಉತ್ತರಪ್ರದೇಶದ ವಿಧಾನಸಭಾ ಚುನಾವಣೆ ಗೆಲುವಿಗೆ ಪೂರಕವಾಗುತ್ತಿತ್ತು.

2024ರ ಲೋಕಸಭಾ ಚುನಾವಣೆಯ ಫೈನಲ್ಸ್‌ಗೆ ಉತ್ತರಪ್ರದೇಶದ ಹಾಲಿ ವಿಧಾನಸಭಾ ಚುನಾವಣೆಯೇ ಸೆಮಿಫೈನಲ್ಸ್. ಲೋಕಸಭೆಯ 80 ಸ್ಥಾನಗಳಿಗೆ ಪ್ರತಿನಿಧಿಗಳನ್ನು ಕಳುಹಿಸಿಕೊಡುವ ವಿಶಾಲ ಸೀಮೆಯಿದು.

2014ರ ಲೋಕಸಭಾ ಚುನಾವಣೆಗಳಲ್ಲಿ ಉತ್ತರಪ್ರದೇಶವನ್ನು ಮೋಶಾ (ಮೋದಿ, ಅಮಿತ್‌ ಶಾ) ಜೋಡಿ ಗುಡಿಸಿ ಹಾಕಿ ಕೇಂದ್ರ ಸರ್ಕಾರವನ್ನು ತನ್ನ ಉಡಿಗೆ ಹಾಕಿಕೊಂಡಿತ್ತು. ಆದರೆ ಈ ಜೋಡಿಯ ಪ್ರಚಂಡ ಸಾಮರ್ಥ್ಯ ಮತ್ತೊಮ್ಮೆ ಸಂಶಯಾತೀತವಾಗಿ ಸಾಬೀತಾಗಿದ್ದು 2017ರ ಉತ್ತರಪ್ರದೇಶ ವಿಧಾನಸಭಾ ಚುನಾವಣೆಗಳಲ್ಲಿ ಸಾಧಿಸಿದ ಅಸಾಧಾರಣ ಗೆಲುವಿನಿಂದ. ಈ ಗೆಲುವೇ 2019ರ ಲೋಕಸಭಾ ಚುನಾವಣೆ
ಗಳ ಗೆಲುವಿಗೆ ಸೋಪಾನವಾಯಿತು. 2024ರಲ್ಲಿ ಮೋದಿಯವರು ಸತತ ಮೂರನೆಯ ಸಲ ಗೆದ್ದು ಪ್ರಧಾನಿ ಪಟ್ಟದಲ್ಲಿ ಕೂರಬೇಕಿದ್ದರೆ 2022ರಲ್ಲಿ ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಜಯಭೇರಿ ಬಾರಿಸುವುದು ನಿರ್ಣಾಯಕ.

ಈ ಕಠೋರ ವಾಸ್ತವದ ನಡುವೆ ರೈತ ಪ್ರತಿಭಟನೆಯ ಕಾರಣ ಪಶ್ಚಿಮ ಮತ್ತು ಪೂರ್ವ ಉತ್ತರಪ್ರದೇಶ ಸೀಮೆಗಳು ಬಿಜೆಪಿಯ ಕಾಲ ಕೆಳಗಿನ ನೆಲವನ್ನು ಅಲುಗಿಸಿವೆ. ಚುನಾವಣೆಯಲ್ಲಿ ಸೋಲುವ ಭಯವನ್ನು ಹುಟ್ಟಿಸಿವೆ.

ದೆಹಲಿಯ ಗಡಿಗಳಿಗೆ ಲಗ್ಗೆ ಹಾಕಿದ್ದ ರೈತ ಚಳವಳಿಯ ಕತೆ ಇನ್ನೇನು ಮುಗಿದೇ ಹೋಯಿತೆಂದು ಒಂದೊಮ್ಮೆ ಗಹಗಹಿಸಿತ್ತು ಪ್ರಭುತ್ವ. ಆದರೆ ಕುತಂತ್ರ ಷಡ್ಯಂತ್ರ ದಮನ ದೌರ್ಜನ್ಯಗಳ ಬೂದಿಯಿಂದ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಹುಟ್ಟಿ ಹರವಿದ ರೈತ ಚಳವಳಿಗೆ ಗೆಲುವು ದಕ್ಕಿದೆ. ರೈತನ ಹಾದಿಗೆ ಮುಳ್ಳು ಹಾಸಿ ಕಂದಕಗಳನ್ನು ತೋಡಿದ್ದರು ಆಳುವವರು. ಅವೇ ಮುಳ್ಳುಗಳ ಪಕ್ಕದಲ್ಲಿ ಮಣ್ಣು ಚೆಲ್ಲಿ ಹೂವಿನ ಗಿಡಗಳ ನೆಟ್ಟಿದ್ದ ರೈತ.

ಎಲುಬು ಕೊರೆವ ಚಳಿ, ರಕ್ತ ಸುಡುವ ಬಿಸಿಲು, ಸುರಿದ ಮಳೆ, ಕವಿದು ಉಸಿರುಗಟ್ಟಿಸಿದ ಮಲಿನ ಗಾಳಿಗೆ, ತಮ್ಮ ಹೆಸರಿಗೆ ಮಸಿ ಬಳಿಯುವ ಅಪಪ್ರಚಾರದ ಜಂಝಾವಾತಕ್ಕೆ ಆಳುಕದೆ ದೆಹಲಿಯ ಗಡಿಗಳಲ್ಲಿ ಮೈಲುಗಳುದ್ದದ ವಿಸ್ತಾರದಲ್ಲಿ ಆಕಾಶವನ್ನೇ ಹೊದ್ದು ಉದ್ದಕ್ಕೆ ಬೀಡುಬಿಟ್ಟಿದ್ದವರು ಅಪ್ಪಟ ಒಕ್ಕಲು ಮಕ್ಕಳು ಮತ್ತು ಕೃಷಿ ಕಾರ್ಮಿಕರು. ಏಳು ನೂರಕ್ಕೂ ಹೆಚ್ಚು ಮಂದಿ ಪ್ರತಿಭಟನೆಯಲ್ಲೇ ಪ್ರಾಣ ತೆತ್ತಿದ್ದಾರೆ. ಅವರ ಮೇಲೆ ಪಾಶವೀ ಬಲಪ್ರಯೋಗ ನಡೆಯಿತು.

ಇವರನ್ನು ಖಲಿಸ್ತಾನಿಗಳು, ಭಯೋತ್ಪಾದಕರು, ದೇಶದ್ರೋಹಿಗಳು, ಪರೋಪಜೀವಿ, ಆಂದೋಲನಜೀವಿ ಎಂದೆಲ್ಲ ಕರೆಯಲಾಯಿತು. ಹರಿಯಾಣದ ಐಎಎಸ್ ಅಧಿಕಾರಿ ರೈತರ ಬುರುಡೆ ಬಿಚ್ಚುವಂತೆ ನೀಡಿದ ಮೌಖಿಕ ಆದೇಶವನ್ನು ಅಕ್ಷರಶಃ ಪಾಲಿಸಲಾಯಿತು.

ಜಿಲ್ಲೆ ಜಿಲ್ಲೆಗಳಲ್ಲಿ ರೈತರ ವಿರುದ್ಧ ಹಿಂಸಾಚಾರಕ್ಕೆ ಇಳಿಯುವಂತೆ ಖುದ್ದು ಹರಿಯಾಣದ ಮುಖ್ಯಮಂತ್ರಿ ಮನೋಹರಲಾಲ್ ಖಟ್ಟರ್ ಅವರೇ ತಮ್ಮ ಪಕ್ಷದ ಕಾರ್ಯಕರ್ತರನ್ನು ಎತ್ತಿಕಟ್ಟಿದ್ದರು. ದೇಶ್ ಕೇ ಗದ್ದಾರೋಂ ಕೋ ಗೋಲೀ ಮಾರೋ ಸಾಲೋಂ ಕೋ(ದೇಶದ್ರೋಹಿಗಳಿಗೆ ಗುಂಡಿಟ್ಟು ಕೊಲ್ಲಿ) ಎಂದು ಅಬ್ಬರಿಸಿ ದಾಳಿ ನಡೆಸಿ ರೈತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಆಳುವ ಪಕ್ಷದ ಸಮರ್ಥಕರಿಂದ ನಡೆಯಿತು.

ಇತ್ತೀಚೆಗೆ, ಕೇಂದ್ರ ಸಚಿವರೊಬ್ಬರ ಮಗನು ಕುಳಿತಿದ್ದ ವಾಹನವೂ ಸೇರಿದಂತೆ ಮಂತ್ರಿಯ ಬೆಂಬಲಿಗರ ಕಾರುಗಳನ್ನು ಪ್ರದರ್ಶನ ನಿರತ ರೈತರ ಮೇಲೆ ಹರಿಸಿಉತ್ತರಪ್ರದೇಶದ ಲಖಿಂಪುರ ಖೇರಿಯಲ್ಲಿ ಎಂಟು ಮಂದಿ ಬಲಿ ಪಡೆಯಲಾಯಿತು. ಆಳುವವರು ರೈತರ ವಿರುದ್ಧ ಹೊತ್ತಿಸಿದ ದ್ವೇಷದ ಕಿಚ್ಚಿಗೆ ಇದೊಂದು ಸಣ್ಣ ನಿದರ್ಶನ.

ಮೊದಲ ಬಾರಿಗೆ ದೇಶವಾಸಿಗಳಿಂದ ಮೋದಿ ಕ್ಷಮೆ ಯಾಚಿಸಿದ್ದಾರೆ. ತೆಗೆದುಕೊಂಡ ತೀರ್ಮಾನದಿಂದ ಹಿಂದೆ ಸರಿದಿರುವುದು ಇದು ಎರಡನೆಯ ಬಾರಿ. ‘ಸೂಟುಬೂಟಿನ ಸಿರಿವಂತರ ಸರ್ಕಾರ’ ಎಂಬ ಚುಚ್ಚುಮಾತಿಗೆ ಬೆಚ್ಚಿ ಅವರು ಕೈಬಿಟ್ಟ ಮತ್ತೊಂದು ರೈತ ವಿರೋಧಿ ನಡೆ ಭೂಸ್ವಾಧೀನ ಕಾಯಿದೆಯ ತಿದ್ದುಪಡಿ ಸುಗ್ರೀವಾಜ್ಞೆ. 2015ರ ಬಿಹಾರ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಈ ಸುಗ್ರೀವಾಜ್ಞೆಯನ್ನು ಸಂಸತ್ತಿನಲ್ಲೇ ವಾಯಿದೆ ಮೀರಲು ಬಿಟ್ಟು ನಿಷ್ಫಲಗೊಳಿಸಲಾಗಿತ್ತು. ಸರ್ಕಾರಿ ಯೋಜನೆಗಳಿಗೆ ಭೂಸ್ವಾಧೀನ ಮಾಡಿಕೊಳ್ಳುವಾಗ ಸಾಮಾಜಿಕ ಸಾಧಕ ಬಾಧಕಗಳನ್ನು ಬದಿಗೆ ಸರಿಸುವ ಮತ್ತು ಖಾಸಗಿ-ಸರ್ಕಾರಿ ಒಡೆತನದ ಯೋಜನೆಗಳಿಗೆ ಜಮೀನು ಸ್ವಾಧೀನ ಮಾಡಿಕೊಳ್ಳುವಾಗ ಆ ಜಮೀನಿನ ಶೇ 70ರಷ್ಟು ಒಡೆಯರ ಒಪ್ಪಿಗೆ ಹಾಗೂ ಖಾಸಗಿ ಯೋಜನೆಗಳಿಗೆ ಸಂಬಂಧಿಸಿದಂತೆ ಶೇ 80ರಷ್ಟು ಒಡೆಯರ ಒಪ್ಪಿಗೆ ಕಡ್ಡಾಯವಲ್ಲ ಎಂಬುದು ಈ ಸುಗ್ರೀವಾಜ್ಞೆಯ ತಿರುಳಾಗಿತ್ತು.

ಒಕ್ಕಲು ಮಕ್ಕಳ ಬದುಕುಗಳು ವ್ಯಥೆಯ ಕತ್ತಲಲ್ಲಿ ಮುಳುಗಿವೆ. ಈ ಕಾನೂನುಗಳು ರದ್ದಾದ ನಂತರವೂ ಕೊನೆಗೊಳ್ಳದಷ್ಟು ಅಗಾಧ ಕೃಷಿ ಬಿಕ್ಕಟ್ಟು ಇದೆ. ಕಳೆದ ಎರಡು ದಶಕಗಳಲ್ಲಿ ದೇಶದ ಹೊಲಗದ್ದೆಗಳು ತೋಟ ತುಡಿಕೆಗಳ ಮಣ್ಣಿನಲ್ಲಿ ಲಕ್ಷಾಂತರ ರೈತರ ಆತ್ಮಹತ್ಯೆಯ ರಕ್ತ ಬೆರೆತಿದೆ. ಈ ಮಣ್ಣಿಗೆ ಮತ್ತಷ್ಟು ಇನ್ನಷ್ಟು ರೈತರ ರಕ್ತವನ್ನು ಬೆರೆಸಬಾರದು.

ಕೃಷಿ ಕಾಯ್ದೆಗಳನ್ನು ಹಿಂಪಡೆಯುತ್ತೇವೆ: ಮೋದಿ

ನವದೆಹಲಿ: ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಘೋಷಿಸಿದ್ದಾರೆ. ಸದುದ್ದೇಶದ ಈ ಕಾಯ್ದೆಗಳ ಪ್ರಯೋಜನವನ್ನು ರೈತರಿಗೆ ‌ಮನದಟ್ಟು ಮಾಡಲು ಸಾಧ್ಯವಾಗದ್ದಕ್ಕೆ ಅವರು ದೇಶದ ಜನರ ಕ್ಷಮೆಯನ್ನೂ ಕೇಳಿದರು.

‘ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮೂರು ಕಾಯ್ದೆಗಳನ್ನು ಹಿಂದಕ್ಕೆ ಪಡೆಯಲು ನಿರ್ಧರಿಸಿದ್ದೇವೆ. ಸಂಸತ್ತಿನ ಈ ತಿಂಗಳ ಕೊನೆಯಲ್ಲಿ ಆರಂಭವಾಗಲಿರುವ ಚಳಿಗಾಲದ ಅಧಿವೇಶನದಲ್ಲಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಿದ್ದೇವೆ’ ಎಂದು ಸುದ್ದಿವಾಹಿನಿಗಳಲ್ಲಿ ಪ್ರಸಾರವಾದ ಭಾಷಣದಲ್ಲಿ ಮೋದಿ ಹೇಳಿದರು.

ರೈತರ ಪ್ರತಿಭಟನೆಯು ಒಂದು ವರ್ಷ ಪೂರೈಸಲು ಒಂದು ವಾರವಷ್ಟೇ ಬಾಕಿ ಇರುವ ಸಂದರ್ಭದಲ್ಲಿ ಪ್ರಧಾನಿಯವರು ಈ ಘೋಷಣೆ ಮಾಡಿದರು.‘ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಎಲ್ಲ ರೈತರು ಮನೆಗೆ, ನಿಮ್ಮ ಪ್ರೀತಿಪಾತ್ರರ ಬಳಿಗೆ, ನಿಮ್ಮ ಹೊಲಗಳಿಗೆ, ಕುಟುಂಬಕ್ಕೆ ಹಿಂದಿರುಗಬೇಕು ಎಂದು ಮನವಿ ಮಾಡುತ್ತೇನೆ’ ಎಂದರು.

ಬೆಂಬಲ ಬೆಲೆ ಸಮಿತಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವ ವ್ಯವಸ್ಥೆಯನ್ನು ಇನ್ನಷ್ಟು ಪರಿಣಾಮಕಾರಿ ಮತ್ತು ಪಾರದರ್ಶಕ ಆಗಿಸುವುದಕ್ಕಾಗಿ ಸಮಿತಿಯೊಂದನ್ನು ರಚಿಸಲಾಗುವುದು ಎಂದು ಪ್ರಧಾನಿ ತಿಳಿಸಿದ್ದಾರೆ. ಸಮಿತಿಯಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳ ಪ್ರತಿನಿಧಿಗಳು, ರೈತರು, ಕೃಷಿ ವಿಜ್ಞಾನಿಗಳು ಮತ್ತು ಕೃಷಿ ಅರ್ಥಶಾಸ್ತ್ರಜ್ಞರು ಇರಲಿದ್ದಾರೆ ಎಂದೂ ಅವರು ಹೇಳಿದ್ದಾರೆ. ಎಂಎಸ್‌ಪಿಗೆ ಕಾನೂನಿನ ಖಾತರಿ ಬೇಕು ಎಂಬುದು ಪ್ರತಿಭಟನೆ ನಡೆಸುತ್ತಿರುವ ರೈತರ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿದೆ.

***

ದೇಶದ ಅನ್ನದಾತರು ಸತ್ಯಾಗ್ರಹದ ಮೂಲಕ ದುರಹಂಕಾರವನ್ನು ಮಣಿಸಿದ್ದಾರೆ. ಅನ್ಯಾಯದ ವಿರುದ್ಧದ ಈ ಜಯಕ್ಕೆ ಅಭಿನಂದನೆಗಳು. ಜೈ ಹಿಂದ್, ಜೈ ಹಿಂದ್‌ನ ಕಿಸಾನ್‌

-ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

***

ಕೃಷಿ ಕಾಯ್ದೆಗಳಿಗೆ ಸಂಬಂಧಿಸಿದಂತೆ, ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿರುವ ಘೋಷಣೆಯು ಸ್ವಾಗತಾರ್ಹ ಮತ್ತು ಮುತ್ಸದ್ದಿತನದ ನಡೆ. ನಮ್ಮ ಸರ್ಕಾರ ಸದಾ ರೈತರ ಸೇವೆಯಲ್ಲಿರಲಿದೆ

-ಅಮಿತ್ ಶಾ, ಕೇಂದ್ರ ಗೃಹ ಸಚಿವ

***

ನಾವು ತಕ್ಷಣವೇ ಪ್ರತಿಭಟನೆ ಹಿಂಪಡೆಯುವುದಿಲ್ಲ. ಸಂಸತ್ತಿನಲ್ಲಿ ಈ ಕಾಯ್ದೆಗಳನ್ನು ರದ್ದುಪಡಿಸುವವರೆಗೂ ಕಾಯುತ್ತೇವೆ. ಕನಿಷ್ಠ ಬೆಂಬಲ ಬೆಲೆ ಜತೆಗೆ ಬೇರೆ ಸಮಸ್ಯೆಗಳ ಬಗ್ಗೆಯೂ ಸರ್ಕಾರವು ರೈತರ ಜತೆ ಮಾತನಾಡಬೇಕು

-ರಾಕೇಶ್ ಟಿಕಾಯತ್, ಭಾರತೀಯ ಕಿಸಾನ್ ಯೂನಿಯನ್ ನಾಯಕ

***

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT