ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ಮೋದಿಗೆ ನೆರವಾದ ಪಟೇಲ್‌ ವರ್ಚಸ್ಸು: ಶಶಿ ತರೂರ್‌

ಗುಜರಾತ್‌ ಮೂಲದ ಮಹಾತ್ಮರ ಜತೆ ಸಮೀಕರಣ ಯತ್ನ: ಹೊಸ ಪುಸ್ತಕದಲ್ಲಿ ಶಶಿ ತರೂರ್‌ ಪ್ರತಿಪಾದನೆ
Last Updated 7 ನವೆಂಬರ್ 2021, 20:13 IST
ಅಕ್ಷರ ಗಾತ್ರ

ನವದೆಹಲಿ: ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ ರಾಷ್ಟ್ರೀಯ ಮಟ್ಟದ ವರ್ಚಸ್ಸು ಮತ್ತು ಅವರ ಗುಜರಾತ್‌ ಮೂಲವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆರವಾಗಿದೆ. ‘ಮೋದಿ ಅವರು ಈ ಕಾಲದ ಪಟೇಲ್‌’ ಎಂಬ ಸಂದೇಶವನ್ನು ಒಪ್ಪುವ ಗುಜರಾತಿಗಳ ಸಂಖ್ಯೆ ಗಣನೀಯವಾಗಿ ಇದೆ ಎಂದು ಕಾಂಗ್ರೆಸ್‌ ಸಂಸದ ಮತ್ತು ಲೇಖಕ ಶಶಿ ತರೂರ್‌ ಪ್ರತಿಪಾದಿಸಿದ್ದಾರೆ.

ಮೋದಿ ಅವರದ್ದು ಅತ್ಯಂತ ಜಾಣ್ಮೆಯ ರಾಜಕೀಯ ಲೆಕ್ಕಾಚಾರ. ಗುಜರಾತ್‌ ಮೂಲದ ಮಹಾ ವ್ಯಕ್ತಿಗಳಾದ ಮಹಾತ್ಮ ಗಾಂಧಿ ಮತ್ತು ಪಟೇಲ್‌ ಅವರ ಸಾಲಿನಲ್ಲಿ ತಮ್ಮನ್ನೂ ನಿಲ್ಲಿಸಿಕೊಂಡು, ಅವರ ಗುಣಗಳು ತಮ್ಮಲ್ಲೂ ಇವೆ ಎಂದು ಮೋದಿ ಬಿಂಬಿಸಿದ್ದಾರೆ.ಈ ಪ್ರಕ್ರಿಯೆ ಬಹಳ ಹಿಂದೆಯೇ ಆರಂಭವಾಗಿತ್ತು. ಭಾರತದ ಅತ್ಯಂತ ಗೌರವಾನ್ವಿತ ನಾಯಕರಲ್ಲಿ ಒಬ್ಬರಾದ ಪಟೇಲ್‌ ಅವರ ಪರಂಪರೆ ತಮ್ಮದು ಎಂಬ ಹಕ್ಕು ಮಂಡನೆಯನ್ನು ಮೋದಿ ಅವರು ಅತ್ಯಂತ ದೃಢವಾಗಿ 2014ರ ಲೋಕಸಭಾ ಚುನಾವಣೆಗೂ ಮೊದಲೇ ಮಾಡಿದ್ದರು ಎಂದು ತರೂರ್‌ ವಿವರಿಸಿದ್ದಾರೆ.

‘ಪ್ರೈಡ್‌, ಪ್ರಿಜುಡಿಸ್‌ ಎಂಡ್‌ ಪಂಡಿಟ್ರಿ– ದಿ ಎಸೆನ್‌ಷಿಯಲ್‌ ಶಶಿ ತರೂರ್‌’ ಎಂಬ ಪುಸ್ತಕದಲ್ಲಿ ಅವರು ಈ ಪ್ರತಿಪಾದನೆ ಮಾಡಿದ್ದಾರೆ. ಅವರು ಈಗಾಗಲೇ ಪ್ರಕಟಿಸಿರುವ ಕೆಲವು ಲೇಖನ ಮತ್ತು ಕವಿತೆಗಳು ಈ ಪುಸ್ತಕದಲ್ಲಿ ಇವೆ. ಈ ಪುಸ್ತಕಕ್ಕಾಗಿಯೇ ಕೆಲವು ಲೇಖನಗಳನ್ನು ಅವರು ಬರೆದಿದ್ದಾರೆ.

ತಾವು ವಿಶಿಷ್ಟ ಪರಂಪರೆಯ ಭಾಗ ಎಂದು ಗುರುತಿಸಿಕೊಳ್ಳುವ ಹಂಬಲ ಮೋದಿ ಅವರಲ್ಲಿ ತೀವ್ರವಾಗಿತ್ತು. ಅದಕ್ಕಾಗಿಯೇ, ಪಟೇಲ್‌ ಪ್ರತಿಮೆ ಸ್ಥಾಪನೆಗೆ ನೇಗಿಲಿನ ಕಬ್ಬಿಣವನ್ನು ದೇಣಿಗೆಯಾಗಿ ನೀಡುವಂತೆ
ದೇಶದ ರೈತರನ್ನು ಮೋದಿ ಕೋರಿದ್ದರು. ಗಾಂಧಿವಾದಿ ಮತ್ತು ಸರಳ ವ್ಯಕ್ತಿಯಾಗಿದ್ದ ಪಟೇಲರ ಸ್ಮಾರಕ ಎನ್ನುವುದಕ್ಕಿಂತಲೂ ಅದನ್ನು ನಿರ್ಮಿಸಿದ ವ್ಯಕ್ತಿಯ ಮಹತ್ವಾಕಾಂಕ್ಷೆಯನ್ನೇ ಈ ಪ್ರತಿಮೆ ಬಿಂಬಿಸುತ್ತಿದೆ. ತಮ್ಮ ಮಹತ್ವಾಕಾಂಕ್ಷೆಗೆ ಭಾರತದ ಸಾಮರ್ಥ್ಯವು ಸಾಲುವುದಿಲ್ಲ ಎಂದಾದಾಗ ಪ್ರತಿಮೆಯನ್ನು ಎರಕ ಹೊಯ್ಯಲು ಮೋದಿ ಅವರು ಚೀನಾದ ಕಂಪನಿಯನ್ನು ಬಳಸಿಕೊಂಡರು ಎಂದು ತರೂರ್‌ ಬರೆದಿದ್ದಾರೆ.

ಮೋದಿ ಅವರ ಉದ್ದೇಶಗಳು ಅತ್ಯಂತ ಸ್ಪಷ್ಟವಿದ್ದವು. ಗುಜರಾತ್‌ ಮುಖ್ಯಮಂತ್ರಿಯಾಗಿದ್ದಾಗ 2002ರಲ್ಲಿ ನಡೆದ ಕೋಮು ಹಿಂಸಾಚಾರವು ಅವರ ವರ್ಚಸ್ಸಿಗೆ ಮಸಿ ಬಳಿದಿತ್ತು. ಪಟೇಲ್‌ ಅವರ ಜತೆಗೆ ಗುರುತಿಸಿಕೊಳ್ಳುವ ಮೂಲಕ ತಮ್ಮ ವರ್ಚಸ್ಸು ವೃದ್ಧಿಗೆ ಮೋದಿ ಯತ್ನಿಸಿದರು. ಪಟೇಲ್‌ ಅವರಂತೆ ಕಠಿಣ ನಿರ್ಧಾರಗಳ, ಗಟ್ಟಿ ಮನುಷ್ಯ ಎಂದು ತಮ್ಮನ್ನು ಬಿಂಬಿಸಿಕೊಂಡರು ಎಂದು ತರೂರ್‌ ವಿಶ್ಲೇಷಿಸಿದ್ದಾರೆ.

ಆಧುನಿಕ ಭಾರತದ ಇತಿಹಾಸದ ಅತ್ಯಂತ ಮುಖ್ಯ ವ್ಯಕ್ತಿಗಳು, ಅಂತರರಾಷ್ಟ್ರೀಯ ಸಂಬಂಧ ಮತ್ತು ರಾಜತಾಂತ್ರಿಕತೆ, ಧರ್ಮಕ್ಕೆ ಸಂಬಂಧಿಸಿದ ವಿಚಾರಗಳು ಸೇರಿ ಹಲವು ವಿಷಯಗಳ ಬಗ್ಗೆ ಈ ಪುಸ್ತಕದಲ್ಲಿ ಲೇಖನಗಳು ಇವೆ.

ವಾಜಪೇಯಿ ಉಲ್ಲೇಖ

ಜವಾಹರಲಾಲ್‌ ನೆಹರೂ ಅವರ ಕೊಡುಗೆಗಳ ಬಗೆಗಿನ ಲೇಖನದಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಉಲ್ಲೇಖ ಇದೆ. ನೆಹರೂ ಮರಣದ ಬಳಿಕ ವಾಜಪೇಯಿ ಅವರ ನುಡಿನಮನವನ್ನು ತರೂರ್‌ ನೆನಪಿಸಿಕೊಂಡಿದ್ದಾರೆ.

‘ವಾಜಪೇಯಿ ಅವರ ಮಾತುಗಳು ಔಪಚಾರಿಕತೆಯಷ್ಟೇ ಆಗಿರಲಿಲ್ಲ. ನೆಹರೂ ಅವರ ಆದರ್ಶಗಳಿಗೆ ದೇಶವು ತನ್ನನ್ನು ಮರು ಸಮರ್ಪಣೆ ಮಾಡಿಕೊಳ್ಳಬೇಕು ಎಂದು ಅವರು ಕರೆ ಕೊಟ್ಟಿದ್ದರು. ಒಗ್ಗಟ್ಟು, ಶಿಸ್ತು ಮತ್ತು ಆತ್ಮವಿಶ್ವಾಸದ ಮೂಲಕ ಈ ದೇಶವನ್ನು ನಾವು ಸಮೃದ್ಧಗೊಳಿಸಬೇಕು’ ಎಂದು ವಾಜಪೇಯಿ ಹೇಳಿದ್ದರು ಎಂಬುದನ್ನು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ‘ನಾಯಕ ಹೋಗಿದ್ದಾನೆ, ಅನುಯಾಯಿಗಳು ಇದ್ದಾರೆ. ಸೂರ್ಯಾಸ್ತವಾಗಿದೆ, ಆದರೆ, ತಾರೆಗಳ ನೆರಳಿನಲ್ಲಿ ನಾವು ನಮ್ಮ ದಾರಿ ಕಂಡುಕೊಳ್ಳಬೇಕಿದೆ. ಇದು ಕಷ್ಟಕರ ಸಂದರ್ಭ. ಆ ಮಹಾ ವ್ಯಕ್ತಿಯ ಗುರಿಗಳ ಈಡೇರಿಕೆಗೆ ನಾವು ಬದ್ಧರಾಗಬೇಕಿದೆ’ ಎಂದು ವಾಜಪೇಯಿ ಹೇಳಿದ್ದರು ಎಂಬುದನ್ನು ತರೂರ್‌ ನೆನಪಿಸಿಕೊಂಡಿದ್ದಾರೆ.

ಮೋದಿ ಅವರಿಂದ ಇಂತಹ ಮಾತು ನಿರೀಕ್ಷಿಸಲು ಸಾಧ್ಯವಿಲ್ಲ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿರೋಧಾಭಾಸ

ಪಟೇಲ್‌ ಅವರ ಜತೆಗೆ ಮೋದಿ ಅವರು ತಮ್ಮನ್ನು ಹೋಲಿಸಿಕೊಳ್ಳುವಲ್ಲಿ ಒಂದು ವಿರೋಧಾಭಾಸವೂ ಇದೆ. ಮೋದಿ ಅವರು ತಮ್ಮನ್ನು ಹಿಂದೂ ರಾಷ್ಟ್ರೀಯವಾದಿ ಎಂದು ಘೋಷಿಸಿಕೊಂಡಿದ್ದಾರೆ. ಆದರೆ, ಪಟೇಲ್‌ ಅವರು ತಮ್ಮ ರಾಷ್ಟ್ರೀಯವಾದಕ್ಕೆ ಧರ್ಮದ ಹಣೆಪಟ್ಟಿ ಹಚ್ಚಿದವರಲ್ಲ. ಧರ್ಮ ಅಥವಾ ಜಾತಿಯನ್ನು ಮೀರಿ ಎಲ್ಲರಿಗೂ ಸಮಾನ ಹಕ್ಕುಗಳಿರಬೇಕು ಎಂದು ಪಟೇಲ್‌ ನಂಬಿದ್ದರು ಎಂದು ತರೂರ್‌ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT