ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4ಜಿಗಿಂತ ಹತ್ತು ಪಟ್ಟು ವೇಗದ 5ಜಿ ಸೇವೆ; ಜುಲೈಗೆ ತರಂಗಾಂತರ ಹರಾಜು

Last Updated 16 ಜೂನ್ 2022, 3:42 IST
ಅಕ್ಷರ ಗಾತ್ರ

ನವದೆಹಲಿ: ಅತ್ಯಂತ ವೇಗದ ಇಂಟರ್ನೆಟ್ ಸೇವೆ ಒದಗಿಸುವ 5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆಗೆ ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಅಲ್ಲದೆ, ನಿರ್ದಿಷ್ಟ ಪ್ರದೇಶಗಳಲ್ಲಿ ಖಾಸಗಿ 5ಜಿ ದೂರಸಂಪರ್ಕ ಜಾಲ ಆರಂಭಿಸಲು ತಂತ್ರಜ್ಞಾನ ಕ್ಷೇತ್ರದ ಬೃಹತ್ ಕಂಪನಿಗಳಿಗೆ ಕೇಂದ್ರ ಸಂಪುಟವು ಸಮ್ಮತಿ ಸೂಚಿಸಿದೆ.

5ಜಿ ತರಂಗಾಂತರಗಳ ಹರಾಜು ಪ್ರಕ್ರಿಯೆಯು ಜುಲೈ 26ರಿಂದ ಶುರುಗಾಗಲಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿರುವ ಮೀಸಲು ಬೆಲೆಗೆ ಹರಾಜು ನಡೆಸಲು ಸಂಪುಟ ಅಸ್ತು ಎಂದಿರುವುದಾಗಿ ಮೂಲಗಳು ಹೇಳಿವೆ. ಮೀಸಲು ಬೆಲೆಯನ್ನು ಶೇಕಡ 39ರಷ್ಟು ಕಡಿಮೆ ಮಾಡಲು ಟ್ರಾಯ್ ಈ ಹಿಂದೆ ಶಿಫಾರಸು ಮಾಡಿತ್ತು.

5ಜಿ ತರಂಗಾಂತರಗಳನ್ನು ಭಾರ್ತಿ ಏರ್‌ಟೆಲ್‌, ರಿಲಯನ್ಸ್ ಜಿಯೊದಂತಹ ದೂರಸಂಪರ್ಕ ಸೇವಾ ಕಂಪನಿಗಳಿಗೆ ಹರಾಜಿನ ಮೂಲಕ ಮಾರಾಟ ಮಾಡಲಾಗುತ್ತದೆ. ತಂತ್ರಜ್ಞಾನ ಕ್ಷೇತ್ರದ ಬೃಹತ್ ಕಂಪನಿಗಳು ಖಾಸಗಿ ದೂರಸಂಪರ್ಕ ಜಾಲ ಸ್ಥಾಪನೆಗೆ 5ಜಿ ತರಂಗಾಂತರಗಳನ್ನು ದೂರಸಂಪರ್ಕ ಸೇವಾ ವಲಯದ ಕಂಪನಿಗಳಿಂದ ಲೀಸ್ ಆಧಾರದಲ್ಲಿ ಪಡೆದುಕೊಳ್ಳಲು ಅವಕಾಶ ಇದೆ.

ಗೂಗಲ್‌ನಂತಹ ಬೃಹತ್ ಕಂಪನಿಗಳು ತರಂಗಾಂತರಗಳನ್ನು ತಮಗೆ ನೇರವಾಗಿ ಹಂಚಿಕೆ ಮಾಡಬೇಕು ಎಂದು ಆಗ್ರಹಿಸುತ್ತಿವೆ. ಆದರೆ, ಇಂತಹ ಕಂಪನಿಗಳಿಗೆ ತರಂಗಾಂತರ ನೇರ ಹಂಚಿಕೆಯಿಂದ ಸರ್ಕಾರಕ್ಕೆ ಆದಾಯ ಖೋತಾ ಆಗುತ್ತದೆ ಎಂದು ದೂರಸಂಪರ್ಕ ವಲಯದ ಕಂಪನಿಗಳು ವಾದಿಸುತ್ತಿವೆ.

5ಜಿ ತರಂಗಾಂತರಗಳನ್ನು 20 ವರ್ಷಗಳ ಅವಧಿಗೆ ಹರಾಜು ಹಾಕಲಾಗುತ್ತದೆ.

ಹರಾಜು ಗೆದ್ದವರು ತರಂಗಾಂತರಕ್ಕೆ ಸಂಬಂಧಿಸಿದ ಹಣವನ್ನು ತಕ್ಷಣಕ್ಕೆ ಪಾವತಿಸಬೇಕಾಗಿಲ್ಲ. ಈ ಮೊತ್ತವನ್ನು ಅವರು 20 ಸಮಾನ ವಾರ್ಷಿಕ ಕಂತುಗಳಲ್ಲಿ, ಪ್ರತಿ ವರ್ಷದ ಆರಂಭದಲ್ಲಿ ಪಾವತಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಕ್ರಮದಿಂದಾಗಿ ದೂರಸಂಪರ್ಕ ವಲಯದ ಉದ್ದಿಮೆಗಳಿಗೆ ಉದ್ಯಮ ನಡೆಸುವ ವೆಚ್ಚ ಕಡಿಮೆ ಆಗುವ ನಿರೀಕ್ಷೆ ಇದೆ ಎಂದೂ ಕೇಂದ್ರ ಹೇಳಿದೆ.

ಹರಾಜು ಗೆದ್ದುಕೊಂಡವರು 10 ವರ್ಷಗಳ ನಂತರದಲ್ಲಿ ತರಂಗಾಂತರವನ್ನು ಸರ್ಕಾರಕ್ಕೆ ಮರಳಿಸಬಹುದು. ಬಾಕಿ ಉಳಿದ ಅವಧಿಗೆ ಅವರು ಹಣ ಪಾವತಿ ಬಾಕಿ ಇರಿಸಿಕೊಂಡಿದ್ದರೆ, ಅದನ್ನು ಕೊಡಬೇಕಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT