ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸಿಎಂ ವಿರುದ್ಧ ಟೀಕೆ: ನಾರಾಯಣ ರಾಣೆ ಬಂಧನಕ್ಕೆ ನಾಸಿಕ್ ಕಮೀಷನರ್ ಆದೇಶ

Last Updated 24 ಆಗಸ್ಟ್ 2021, 9:17 IST
ಅಕ್ಷರ ಗಾತ್ರ

ನಾಸಿಕ್: ಕೇಂದ್ರ ಸಚಿವ ನಾರಾಯಣ ರಾಣೆ ಅವರನ್ನು ಕೂಡಲೇ ಬಂಧಿಸುವಂತೆ ನಾಸಿಕ್‌ನ ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಆದೇಶಿಸಿದ್ಧಾರೆ. ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಎಫ್ಐಆರ್ ದಾಖಲಾದ ಬೆನ್ನಲ್ಲೇ ಬಂಧನಕ್ಕೆ ಆದೇಶಿಸಲಾಗಿದೆ.

ನಾರಾಯಣ ರಾಣೆ ಅವರು ಜನಾಶೀರ್ವಾದ ಯಾತ್ರೆ ನಡೆಸುತ್ತಿರುವ ರತ್ನಗಿರಿ ಜಿಲ್ಲೆಗೆ ಹೊರಟಿರುವ ನಾಸಿಕ್‌ನ ಪೊಲೀಸ್ ತಂಡ ಈ ಮಾಹಿತಿ ನೀಡಿದೆ.

ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು, ಆಗಸ್ಟ್ 15ರಂದು ರಾಜ್ಯದ ಜನರನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಸ್ವಾತಂತ್ರ್ಯದ ವರ್ಷವನ್ನು ಮರೆತಿದ್ದಾರೆ ಎಂದು ಅವರು ಟೀಕಿಸಿದ್ದರು. ಆ ದಿನದ ಭಾಷಣದ ಸಮಯದಲ್ಲಿ ಠಾಕ್ರೆ ತನ್ನ ಸಹಾಯಕರನ್ನು ಕೇಳಿ ಸ್ವಾತಂತ್ರ್ಯದ ವರ್ಷವನ್ನು ತಿಳಿದುಕೊಂಡರು ಎಂದು ದೂರಿದ್ದರು.

‘ಮುಖ್ಯಮಂತ್ರಿಗೆ ಸ್ವಾತಂತ್ರ್ಯದ ವರ್ಷ ಗೊತ್ತಿಲ್ಲದಿರುವುದು ನಾಚಿಕೆಗೇಡು.ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಭಾಷಣದ ವೇಳೆಸ್ವಾತಂತ್ರ್ಯದ ವರ್ಷಗಳ ಎಣಿಕೆಯ ಬಗ್ಗೆ ವಿಚಾರಿಸಲು ಹಿಂದಕ್ಕೆ ವಾಲಿದರು. ತನ್ನ ಸಹಾಯಕರ ಬಳಿ ಸ್ವಾತಂತ್ರ್ಯ ಬಂದು ಎಷ್ಟು ವರ್ಷ ಕಳೆದಿದೆ ಎಂಬ ಬಗ್ಗೆ ಉದ್ಧವ್ ಠಾಕ್ರೆ ವಿಚಾರಿಸಿದ್ದಾರೆ. ನಾನೇನಾದರೂ ಅಲ್ಲಿ ಇದ್ದಿದ್ದರೆ, ಅವರ ಕಪಾಳಕ್ಕೆ ಬಾರಿಸುತ್ತಿದ್ದೆ’ ಎಂದು ರಾಯಗಡದಲ್ಲಿ ಸೋಮವಾರನಡೆದ ಜನಾಶೀರ್ವಾದ ಯಾತ್ರೆ ವೇಳೆ ನಾರಾಯಣ ರಾಣೆ ಹೇಳಿಕೆ ನೀಡಿದ್ದರು.

ಆ ಬಳಿಕ ರಾಣಿ ವಿರುದ್ಧ ನಾಸಿಕ್ ನಗರದ ಶಿವಸೇನೆ ಘಟಕದ ಮುಖ್ಯಸ್ಥರು ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ, ಐಪಿಸಿ ಸೆಕ್ಷನ್ 500 (ಮಾನನಷ್ಟ), 505 (2) (ಕಿಡಿಗೇಡಿತನ), 153-ಬಿ (1) (ಸಿ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ರಾಣೆ ಹೇಳಿಕೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಕಾನೂನು ಸುವ್ಯವಸ್ಥೆ ಮತ್ತು ನಾಸಿಕ್‌ನಲ್ಲಿನ ಪರಿಸ್ಥಿತಿ ಪರಿಗಣಿಸಿ, ಪೊಲೀಸ್ ಆಯುಕ್ತ ದೀಪಕ್ ಪಾಂಡೆ ಈ ಬಗ್ಗೆ ತನಿಖೆ ನಡೆಸಿ, ಕೇಂದ್ರ ಸಚಿವರನ್ನು ತಕ್ಷಣ ಬಂಧಿಸಲು ಆದೇಶಿಸಿದ್ದಾರೆ. ಅದರಂತೆ, ನಾಸಿಕ್ ಡಿಸಿಪಿ (ಅಪರಾಧ ವಿಭಾಗ) ಸಂಜಯ್ ಬಾರ್ಕುಂಡ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಆನಂದ ವಾಘ್ ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದೆ. ಈ ತಂಡವು ರಾಣೆಯನ್ನು ಬಂಧಿಸಲು ರತ್ನಗಿರಿಯ ಚಿಪ್ಲುನ್‌ಗೆ ತೆರಳಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT