ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ: ಶೇ 90ರಷ್ಟು ಪ್ರಕರಣಗಳ ವಿಚಾರಣೆ ಆರಂಭವೇ ಆಗಿಲ್ಲ

Last Updated 4 ಅಕ್ಟೋಬರ್ 2020, 19:30 IST
ಅಕ್ಷರ ಗಾತ್ರ
ADVERTISEMENT
""

ಬೆಂಗಳೂರು: ಅತ್ಯಾಚಾರ ಘಟನೆಯ ದೂರುಗಳಿಗೆ ಸಂಬಂಧಿಸಿದ ಆರೋಪಪಟ್ಟಿ ಸಲ್ಲಿಕೆಯು ತ್ವರಿತವಾಗುತ್ತಿದ್ದರೂ, ವಿಚಾರಣೆ ಪ್ರಕ್ರಿಯೆ ನಿಧಾನವಾಗಿ, ದೂರುಗಳು ಇತ್ಯರ್ಥವಾಗುವುದು ವಿಳಂಬವಾಗುತ್ತಿದೆ.

ದೇಶದಲ್ಲಿ 2019ರ ಡಿಸೆಂಬರ್‌ ಅಂತ್ಯದವರೆಗೆ ದಾಖಲಾದ ಅತ್ಯಾಚಾರ ಪ್ರಕರಣಗಳಲ್ಲಿಶೇ 80ರಷ್ಟು ಪ್ರಕರಣಗಳ ತನಿಖೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ. ಆದರೆ ಶೇ 89.5ರಷ್ಟು ಪ್ರಕರಣಗಳ ವಿಚಾರಣೆಯೇ ಆರಂಭವಾಗಿಲ್ಲ.

2018ರ ಅಂತ್ಯಕ್ಕೆ ದೇಶದ ನ್ಯಾಯಾಲಯಗಳಲ್ಲಿ 1.37 ಲಕ್ಷ ಅತ್ಯಾಚಾರ ಪ್ರಕರಣಗಳ ವಿಚಾರಣೆ ಬಾಕಿ ಉಳಿದಿತ್ತು. 2019ರಲ್ಲಿ ಹೊಸದಾಗಿ 24,848 ಪ್ರಕರಣಗಳು ನ್ಯಾಯಾಲಯಕ್ಕೆ ಬಂದಿವೆ. 2019ರಲ್ಲಿ ಒಟ್ಟು 1,62,741 ಅತ್ಯಾಚಾರ ಪ್ರಕರಣಗಳು ನ್ಯಾಯಾಲಯದಲ್ಲಿ ಇದ್ದವು.2019ರಲ್ಲಿ ದೇಶದ ಎಲ್ಲಾ ನ್ಯಾಯಾಲಯಗಳಲ್ಲಿ 17,109 ಅತ್ಯಾಚಾರ ಪ್ರಕರಣಗಳು ಮಾತ್ರ ಇತ್ಯರ್ಥವಾಗಿವೆ. ಒಟ್ಟು ಪ್ರಕರಣಗಳಲ್ಲಿ ಇತ್ಯರ್ಥವಾದ ಪ್ರಕರಣಗಳ ಪ್ರಮಾಣ ಶೇ 10.5ರಷ್ಟು ಮಾತ್ರ.

ಇತ್ಯರ್ಥವಾದ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಿರುವ ಪ್ರಮಾಣವೂ ಕಡಿಮೆ ಇದೆ. 2019ರಲ್ಲಿ ನ್ಯಾಯಾಲಯಗಳು ಇತ್ಯರ್ಥಪಡಿಸಿದ ಅತ್ಯಾಚಾರ ಪ್ರಕರಣಗಳಲ್ಲಿ ಶೇ 27.5 ಪ್ರಕರಣಗಳಲ್ಲಿ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆಯಾಗಿದೆ. ಶೇ 70ಕ್ಕಿಂತಲೂ ಹೆಚ್ಚು ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿಲ್ಲ. ಸಾಕ್ಷ್ಯಗಳ ಕೊರತೆ ಮತ್ತು ಇತರ ಕಾರಣಗಳಿಂದ ಆರೋಪಿಗಳು ಖುಲಾಸೆ ಆದ ಪ್ರಕರಣಗಳ ಪ್ರಮಾಣ ಶೇ 62.2ರಷ್ಟಿದೆ.

ಪ್ರತಿವರ್ಷ ದಾಖಲಾಗುತ್ತಿರುವ ಹೊಸ ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾಗುತ್ತಿರುವವರ ಪ್ರಮಾಣ ಅತ್ಯಂತ ಕಡಿಮೆ ಇದೆ. 2019ರಲ್ಲಿ 32 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ, ವಿಚಾರಣೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಿದ್ದು 442 ಪ್ರಕರಣಗಳಲ್ಲಿ ಮಾತ್ರ. 2019ರಲ್ಲಿ ದಾಖಲಾದ ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾದ ಪ್ರಕರಣಗಳ ಪ್ರಮಾಣ ಶೇ 1.37ರಷ್ಟು ಮಾತ್ರ. ಅತ್ಯಾಚಾರ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣ ಅತ್ಯಂತ ಕಡಿಮೆ ಇದೆ. ಖುಲಾಸೆ ಆಗುತ್ತಿರುವವರ ಪ್ರಮಾಣ ದುಪ್ಪಟ್ಟು ಇದೆ. ಹೀಗಾಗಿಯೇ ಅತ್ಯಾಚಾರದಮತಹ ಅಪರಾಧ ಕೃತ್ಯಗಳ ಸಂಖ್ಯೆ ಇಳಿಕೆಯಾಗಿಲ್ಲ ಎಂದು ವಿಶ್ಲೇಷಿಸಲಾಗಿದೆ.

ತನಿಖೆ, ವಿಚಾರಣೆ ಮತ್ತು ಶಿಕ್ಷೆ ಜಾರಿ ಪ್ರಕ್ರಿಯೆಯನ್ನು ತ್ವರಿತಗೊಳಿಸಿದರೆ ಅತ್ಯಾಚಾರ ಪ್ರಕರಣಗಳಿಗೆ ಕಡಿವಾಣ ಹಾಕಬಹುದು. ನ್ಯಾಯಾಂಗವು ಪೂರ್ಣ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲೇ ಅತ್ಯಾಚಾರ ಪ್ರಕರಣಗಳು ತ್ವರಿತವಾಗಿ ಇತ್ಯರ್ಥವಾಗುತ್ತಿರಲಿಲ್ಲ. 2020ರಲ್ಲಿ ಕೋವಿಡ್‌ ಲಾಕ್‌ಡೌನ್‌ನ ಕಾರಣದಿಂದ ಹಲವು ತಿಂಗಳು ನ್ಯಾಯಾಲಯಗಳು ಕಾರ್ಯನಿರ್ವಹಿಸಿಲ್ಲ. ಹೀಗಾಗಿ ಈ ವರ್ಷ ಇತ್ಯರ್ಥವಾಗುವ ಅತ್ಯಾಚಾರ ಪ್ರಕರಣಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿಯಲಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT