ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ, ಸಿಗರೇಟನ್ನು ಪೊಲೀಸರ ವಶಕ್ಕೊಪ್ಪಿಸಿದ ನವಲಖಾ ಸಂಗಾತಿ

ಗೃಹಬಂಧನದ ವೇಳೆ ಮನೆಯಲ್ಲಿದ್ದ ವಸ್ತುಗಳ ಬಗ್ಗೆ ಎನ್ಐಎ ಆಕ್ಷೇಪ
Last Updated 5 ಡಿಸೆಂಬರ್ 2022, 15:44 IST
ಅಕ್ಷರ ಗಾತ್ರ

ಮುಂಬೈ:ಎಲ್ಗಾರ್‌ ಪರಿಷತ್‌ ಪ್ರಕರಣದಲ್ಲಿ ಆರೋಪಿಯಾಗಿ ಗೃಹ ಬಂಧನದಲ್ಲಿರುವ ಪತ್ರಕರ್ತ, ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ ಅವರ ಸಂಗಾತಿ, ಸಂಶೋಧಕಿ ಸಹಭಾ ಹುಸೇನ್ ಅವರು ರಾಷ್ಟ್ರೀಯ ತನಿಖಾ ದಳವು (ಎನ್ಐಎ) ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿದ್ದ ಮದ್ಯದ ಬಾಟಲಿಗಳು ಹಾಗೂ ಸಿಗರೇಟ್ ಪ್ಯಾಕೇಟ್‌ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಸೋಮವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2020ರ ಏಪ್ರಿಲ್‌ನಿಂದಲೂ ತಲೋಜಾ ಜೈಲಿನಲ್ಲಿದ್ದ ನವಲಖಾ ಅವರು ಅನಾರೋಗ್ಯದ ಕಾರಣಕ್ಕಾಗಿ ತಮ್ಮನ್ನು ಗೃಹ ಬಂಧನಕ್ಕೆ ವರ್ಗಾಯಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು. ಬಳಿಕ ನ್ಯಾಯಾಲಯದ ಆದೇಶದ ಮೇರೆಗೆ ನವಲಖಾ ಅವರನ್ನುನ. 19ರಂದು ಜೈಲಿನಿಂದ ಬಿಡುಗಡೆ ಮಾಡಿ,ನವಿಮುಂಬೈನ ಬೇಲಾಪುರ– ಅಗ್ರೋಲಿಯ ಅವರ ಮನೆಗೆ ಕಳುಹಿಸಲಾಗಿತ್ತು.

ನವಲಖಾ ಅವರೊಂದಿಗೆ ಒಂದೇ ಮನೆಯಲ್ಲಿ ವಾಸವಾಗಿರುವ ಸಹಭಾ ಹುಸೇನ್ ಅವರು, ತಮ್ಮ ವೈಯಕ್ತಿಕ ಬಳಕೆಗಾಗಿ ಎರಡು ಮದ್ಯದ ಬಾಟಲಿ ಹಾಗೂ ಸಿಗರೇಟುಗಳನ್ನು ಮನೆಯಲ್ಲಿ ತಂದಿಟ್ಟುಕೊಂಡಿದ್ದರು.

ನವಲಖಾ ಅವರನ್ನು ಮನೆಗೆ ಕರೆತರುವ ಮುನ್ನ ಮನೆಯ ತಪಾಸಣೆಗೆ ಬಂದಿದ್ದ ಎನ್‌ಐಎ ಅಧಿಕಾರಿಗಳಿಗೆ ಆಗಲೇ ಸಹಭಾ ಅವರು ಮದ್ಯದ ಬಾಟಲಿ, ಸಿಗರೇಟಿನ ಬಗ್ಗೆ ಹೇಳಿಕೊಂಡಿದ್ದರು. ಈ ವಸ್ತುಗಳು ನವಲಖಾ ಅವರಿಗಾಗಿ ಅಲ್ಲ ತಮ್ಮ ಬಳಕೆಗಾಗಿ ಎಂದೂ ಸ್ಪಷ್ಟಪಡಿಸಿದ್ದರು.

ಆದರೆ, ಈಚೆಗೆ ಎನ್ಐಎ ಈ ಬಗ್ಗೆ ತಪಾಸಣೆ ನಡೆಸಿದ್ದು, ಮದ್ಯದ ಬಾಟಲಿ ಹಾಗೂ ಸಿಗರೇಟ್ ಪ್ಯಾಕೇಟ್‌ಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿತ್ತು. ಬಳಿಕ ಸಹಭಾ ಅವರು ಈ ವಸ್ತುಗಳನ್ನು ಸಿಬಿಡಿ ಬೇಲಾಪುರ ಪೊಲೀಸರ ವಶಕ್ಕೆ ಒಪ್ಪಿಸಿದ್ದು, ಈ ಕುರಿತು ಎನ್‌ಐಎಗೆ ಪತ್ರವನ್ನೂ ಬರೆದಿದ್ದಾರೆ.

ಸಭಾಹಾ ಅವರಿಗೆ ಮನೆಯಿಂದ ಹೊರಗೆ ಹೋಗಲು ಅನುಮತಿ ಇದೆ. ಸೂಕ್ತ ಭದ್ರತೆಯೊಂದಿಗೆ ನವಲಖಾ ಅವರಿಗೆ ದಿನಕ್ಕೆ 40 ನಿಮಿಷಗಳ ಕಾಲ ವಾಕಿಂಗ್ ಮಾಡಲು ಎನ್ಐಎ ಅವಕಾಶ ನೀಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT