ಭಾನುವಾರ, ಜುಲೈ 3, 2022
28 °C

ನವನೀತ್‌ ರಾಣಾಗೆ ಲಕಡಾವಾಲಾನಿಂದ ₹80 ಲಕ್ಷ; ಇ.ಡಿ ತನಿಖೆ ಯಾವಾಗ?–ಸಂಜಯ್ ರಾವುತ್

ಪಿಟಿಐ Updated:

ಅಕ್ಷರ ಗಾತ್ರ : | |

ಸಂಸದೆ ನವನೀತ್‌ ರಾಣಾ

ಮುಂಬೈ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ ಸಿನಿಮಾ ಫೈನಾನ್ಶಿಯರ್‌ ಮತ್ತು ಬಿಲ್ಡರ್‌ ಯುಸೂಫ್‌ ಲಕಡಾವಾಲಾನಿಂದ ಸಂಸದೆ ನವನೀತ್‌ ರಾಣಾ ₹80 ಲಕ್ಷ ಸಾಲ ಪಡೆದಿದ್ದರು ಎಂದು ಶಿವ ಸೇನಾ ಸಂಸದ ಸಂಜಯ್‌ ರಾವುತ್‌ ಆರೋಪಿಸಿದ್ದಾರೆ.

ಲಕಡಾವಾಲಾನಿಂದ ಸಾಲ ಪಡೆದಿರುವುದಕ್ಕೆ ಸಂಬಂಧಿಸಿದಂತೆ ಕೇಂದ್ರದಿಂದ ತನಿಖೆ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಲಕಡಾವಾಲಾ ಆರ್ಥರ್‌ ರೋಡ್‌ ಜೈಲಿನಲ್ಲಿ ಸಾವಿಗೀಡಾಗಿದರು.

1993ರ ಮುಂಬೈ ಸರಣಿ ಸ್ಫೋಟಗಳ ರೀತಿಯಲ್ಲಿ ಹನುಮಾನ್‌ ಚಾಲೀಸಾ ಪಠಣವು ರಾಜಕೀಯವಾಗಿರುವುದರ ಹಿಂದೆ 'ಭೂಗತ ಲೋಕದ ಸಂಪರ್ಕ' ಇರುವ ಬಗ್ಗೆ ರಾವುತ್‌ ಸಂಶಯ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ 'ಮಾತೊಶ್ರೀ' ನಿವಾಸದ ಎದುರು ಹನುಮಾನ್‌ ಚಾಲೀಸಾ ಪಠಣ ಮಾಡುವುದಾಗಿ ಹೇಳಿಕೆ ನೀಡಿದ್ದ ಸಂಸದೆ ನವನೀತ್‌ ಕೌರ್‌ ರಾಣಾ ಮತ್ತು ಅವರ ಪತಿ, ಶಾಸಕ ರವಿ ರಾಣಾ ಅವರನ್ನು ಶನಿವಾರ ಮುಂಬೈ ಪೊಲೀಸರು ಬಂಧಿಸಿದ್ದರು. ರಾಣ ದಂಪತಿ ಹನುಮಾನ್‌ ಚಾಲೀಸಾ ಪಠಿಸುವ ಯೋಜನೆಯನ್ನು ಕೈಬಿಟ್ಟರೂ ದೇಶ ದ್ರೋಹ ಕಾಯ್ದೆಯಡಿ ಹಾಗೂ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ನವನೀತ್‌ ರಾಣಾ ಅವರನ್ನು ರಕ್ಷಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ರಾವುತ್‌ ಟೀಕಿಸಿದ್ದಾರೆ.

 

'ನವನೀತ್‌ ರಾಣಾ ಅವರು ಯುಸೂಫ್‌ ಲಕಡಾವಾಲಾನಿಂದ ₹80 ಲಕ್ಷ ಸಾಲ ಪಡೆದಿದ್ದರು. ಅದೇ ಲಕಡಾವಾಲಾ ಹಣ ಅಕ್ರಮ ವರ್ಗಾವಣೆ ಪ್ರಕರಣ ಮತ್ತು ಡಿ–ಗ್ಯಾಂಗ್‌ನೊಂದಿಗೆ ಸಂರ್ಪಕದ ಆರೋಪದ ಮೇಲೆ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದ. ಆತ ಜೈಲಿನಲ್ಲೇ ಸಾವಿಗೀಡಾಗಿದ್ದನು. ಜಾರಿ ನಿರ್ದೇಶನಾಲಯವು ಈ ವಿಚಾರದ ತನಿಖೆ ನಡೆಸಿದೆಯೇ? ಇದು ರಾಷ್ಟ್ರೀಯ ಭದ್ರತೆಯ ಪ್ರಶ್ನೆಯಾಗಿದೆ' ಎಂದು ಮಂಗಳವಾರ ರಾತ್ರಿ ರಾವುತ್‌ ಟ್ವೀಟಿಸಿದ್ದರು. ಬಿಜೆಪಿ ಮುಖಂಡ ದೇವೇಂದ್ರ ಫಡಣವಿಸ್‌ ಮತ್ತು ಪ್ರಧಾನ ಮಂತ್ರಿ ಕಾರ್ಯಾಲಯದ ಖಾತೆಗಳನ್ನು ಅದರಲ್ಲಿ ಟ್ಯಾಗ್‌ ಮಾಡಿದ್ದಾರೆ.

ಇದನ್ನೂ ಓದಿ–

ಬುಧವಾರ ಮತ್ತೊಂದು ಟ್ವೀಟ್‌ ಮಾಡಿರುವ ಅವರು, 'ಭೂಗತಲೋಕದ ಸಂಪರ್ಕ. ಲಕಡಾವಾಲಾ ₹200 ಕೋಟಿ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಇ.ಡಿಯಿಂದ ಬಂಧಿಸಲ್ಪಟ್ಟಿದ್ದ ಹಾಗೂ ಲಾಕ್‌ಅಪ್‌ನಲ್ಲೇ ಸಾವಿಗೀಡಾಗಿದ್ದ. ಲಕಡಾವಾಲಾನ ಅಕ್ರಮ ಹಣವು ಈಗ ರಾಣಾ ಅವರ ಖಾತೆಯಲ್ಲಿದೆ. ಇ.ಡಿ ರಾಣಾ ಅವರಿಗೆ ಯಾವಾಗ ಟೀ ಕೊಟ್ಟು ಉಪಚರಿಸಲಿದೆ? ಡಿ–ಗ್ಯಾಂಗ್‌ ಅನ್ನು ಯಾಕೆ ರಕ್ಷಿಸಲಾಗಿದೆ? ಬಿಜೆಪಿ ಏಕೆ ಮೌನವಹಿಸಿದೆ?' ಎಂದು ಪ್ರಶ್ನಿಸಿದ್ದಾರೆ.

ನಟಿ, ರಾಜಕಾರಣಿ ನವನೀತ್‌ ರಾಣಾ ಅವರು ಠಾಣೆಯಲ್ಲಿ ತಮಗೆ ಜಾತಿ ನಿಂದನೆ ಮಾಡಲಾಗಿದೆ. ಅಧಿಕಾರಿಗಳು ನೀರು ಕುಡಿಯಲು ಹಾಗೂ ಶೌಚಾಲಯ ಬಳಸಲು ಬಿಡುತ್ತಿಲ್ಲ ಎಂದು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಮುಂಬೈ ಪೊಲೀಸರು ಮಂಗಳವಾರ ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದರು. ಆ ವಿಡಿಯೊದಲ್ಲಿ ರಾಣಾ ದಂಪತಿ ಚಹಾ ಸೇವಿಸುತ್ತಿರುವುದು ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು