ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೃಹತ್‌ ಡ್ರಗ್ಸ್‌ ಜಾಲ: ಬೆಂಗಳೂರಿನ ವೈದ್ಯ ವಿದ್ಯಾರ್ಥಿ ಸೇರಿ 22 ಮಂದಿ ಬಂಧನ

ಬೃಹತ್‌ ಡ್ರಗ್ಸ್‌ ಜಾಲ ಭೇದಿಸಿದ ಎನ್‌ಸಿಬಿ * 11 ರಾಜ್ಯಗಳಲ್ಲಿ ಕಾರ್ಯಾಚರಣೆ
Last Updated 12 ಫೆಬ್ರುವರಿ 2022, 16:04 IST
ಅಕ್ಷರ ಗಾತ್ರ

ನವದೆಹಲಿ: ‘ಡಾರ್ಕ್‌ನೆಟ್‌’ ಹಾಗೂ ಕ್ರಿಪ್ಟೊಕರೆನ್ಸಿ ನೆರವಿನಿಂದ ಕೊರಿಯರ್‌ ಮೂಲಕ ದೇಶದಾದ್ಯಂತ ಮನೆಗಳಿಗೆ ಡ್ರಗ್ಸ್‌ ತಲುಪಿಸುತ್ತಿದ್ದ ಜಾಲವನ್ನು ಭೇದಿಸಿರುವ ಎನ್‌ಸಿಬಿ, ಬೆಂಗಳೂರಿನ ಎಂಬಿಬಿಎಸ್ ವಿದ್ಯಾರ್ಥಿ ಸೇರಿದಂತೆ 22 ಮಂದಿಯನ್ನು ಬಂಧಿಸಿದೆ.

ಬಂಧಿತರ ಪೈಕಿ ಫ್ರಿಲಾನ್ಸ್‌ ಫ್ಯಾಷನ್‌ ಡಿಸೈನರ್, ಮನೋವೈದ್ಯ, ಯೂಟ್ಯೂಬರ್ ಹಾಗೂ ಹಣಕಾಸು ತಜ್ಞ,ಎನ್‌ಸಿಬಿಯ ಸಿಬ್ಬಂದಿಯೂ ಆಗಿರುವ ಎಂಬಿಎ ಪದವೀಧರ, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು ಸಹ ಇದ್ದಾರೆ ಎಂದು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಎಂಬಿಬಿಎಸ್‌ ವಿದ್ಯಾರ್ಥಿ ಆದಿತ್ಯ ರೆಡ್ಡಿ, ‘ಎಲ್‌ಎಸ್‌ಡಿ ಕಿಂಗ್‌’ ಎಂದೇ ಕರೆಯಲಾಗುತ್ತಿರುವ ರಘುನಾಥಕುಮಾರ್ ಹಾಗೂ ಡ್ರಗ್ಸ್‌ ಮಾರಾಟ ಜಾಲದ ಮಾಸ್ಟರ್‌ ಮೈಂಡ್‌ ಎಂದೇ ಗುರುತಿಸಲಾದ ಮೊಹ್ಮದ್ ಅಸ್ಲಾಂ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ.

ಡ್ರಗ್ಸ್‌ಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ಕರ್ನಾಟಕ ಪೊಲೀಸರು ರಘುನಾಥಕುಮಾರ್‌ ಅವರನ್ನು ಈಗಾಗಲೇ ಬಂಧಿಸಿದ್ದರು ಎಂದು ಎನ್‌ಸಿಬಿ ಮೂಲಗಳು ಹೇಳಿವೆ.

‘ಡಾರ್ಕ್‌ನೆಟ್‌’ ಮೂಲಕ ಡ್ರಗ್ಸ್‌ ಮಾರಾಟ ಮಾಡುತ್ತಿದ್ದ ಡಿಎನ್‌ಎಂ ಇಂಡಿಯಾ, ಡಿಆರ್‌ಇಡಿ ಹಾಗೂ ದಿ ಓರಿಯಂಟ್ ಎಕ್ಸ್‌ಪ್ರೆಸ್ ಎಂಬ ಮಾರುಕಟ್ಟೆಗಳನ್ನು ಸಹ ಪತ್ತೆ ಹಚ್ಚಲಾಗಿದೆ ಎಂದು ಎನ್‌ಸಿಬಿಯ ಮಹಾ ನಿರ್ದೇಶಕ (ಉತ್ತರ ವಲಯ) ಜ್ಞಾನೇಶ್ವರ ಸಿಂಗ್ ತಿಳಿಸಿದ್ದಾರೆ.

‘ಆರೋಪಿಗಳು 20–35 ವರ್ಷ ವಯೋಮಾನದವರಾಗಿದ್ದಾರೆ. ಕೆಲವರು ಶಾಲೆ ಬಿಟ್ಟವರೂ ಇದ್ದಾರೆ. ಕೆಲವರು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದವರಾಗಿದ್ದರೆ, ಮತ್ತೆ ಕೆಲವರು ಅಪರಾಧ ಕೃತ್ಯಗಳನ್ನೆಸಗಿ ಪೊಲೀಸರಿಂದ ತಪ್ಪಿಸಿಕೊಳ್ಳುವುದರಲ್ಲಿ ರೋಮಾಂಚನಗೊಳ್ಳುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ’ ಎಂದೂ ಅವರು ತಿಳಿಸಿದ್ದಾರೆ.

ಸೂರತ್, ಪುಣೆ, ಬೆಂಗಳೂರು, ಕೋಲ್ಕತ್ತ, ಡಾರ್ಜಿಲಿಂಗ್, ದೆಹಲಿ, ಗಾಜಿಯಾಬಾದ್, ರಾಂಚಿ ಹಾಗೂ ಗುವಾಹಟಿಗಳಲ್ಲಿ ನಾಲ್ಕು ತಿಂಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಎನ್‌ಸಿಬಿಯ ಕೋಲ್ಕತ್ತ ಹಾಗೂ ದೆಹಲಿ ವಲಯಕ್ಕೆ ಲಭಿಸಿದ್ದ ಮಾಹಿತಿ ಮೇರೆಗೆ ಈ ಕಾರ್ಯಾಚರಣೆಯನ್ನು ಕೈಗೊಳ್ಳಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಪ್ರಕರಣದಲ್ಲಿ ಬಂಧಿಸಲಾಗಿರುವ ಮತ್ತೊಬ್ಬ ಆರೋಪಿ ಶ್ರದ್ಧಾ ಸುರಾನಾ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಫೈನಾನ್ಸಿಯಲ್‌ ಕನ್ಸಲ್ಟಂಟ್ ಆಗಿದ್ದಾರೆ. ಡಾರ್ಕ್‌ನೆಟ್‌ ಮೂಲಕ ವಿದೇಶಗಳಿಂದ ಡ್ರಗ್ಸ್‌ ಆಮದು ಮಾಡಿಕೊಳ್ಳುವುದು ಹಾಗೂ ಹಣಕಾಸು ವ್ಯವಹಾರ ನಿರ್ವಹಣೆ ಕಾರ್ಯದಲ್ಲಿ ಆಕೆ ಮತ್ತೊಬ್ಬ ಆರೋಪಿ ಜಸ್ಬೀರ್‌ ಎಂಬಾತಗೆ ಸಹಕರಿಸುತ್ತಿದ್ದ ಆರೋಪ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT