ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡ್ರಗ್ಸ್ ಪ್ರಕರಣ: ಎನ್‌ಸಿಬಿಯಿಂದ ನಟಿ ಅನನ್ಯಾ ಪಾಂಡೆ ವಿಚಾರಣೆ

Last Updated 21 ಅಕ್ಟೋಬರ್ 2021, 15:24 IST
ಅಕ್ಷರ ಗಾತ್ರ

ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್‌ ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಮಾದಕವಸ್ತುಗಳ ನಿಯಂತ್ರಣ ಘಟಕ (ಎನ್‌ಸಿಬಿ) ಮತ್ತಷ್ಟೂ ಚುರುಕುಗೊಳಿಸಿದೆ.

ಈ ನಡುವೆ, ಪುತ್ರ ಆರ್ಯನ್‌ ಖಾನ್‌ಗೆ ಎನ್‌ಡಿಪಿಎಸ್‌ ಕೋರ್ಟ್‌ ಜಾಮೀನು ನಿರಾಕರಿಸಿದ್ದರಿಂದ, ಬಾಲಿವುಡ್‌ ನಟ ಶಾರುಕ್‌ ಖಾನ್‌ ಅವರು ಆರ್ಥರ್ ರೋಡ್‌ ಜೈಲಿನಲ್ಲಿರುವ ಪುತ್ರನನ್ನು ಗುರುವಾರ ಭೇಟಿ ಮಾಡಿದರು.

ನಟ ಚಂಕಿ ಪಾಂಡೆ ಪುತ್ರಿ ಹಾಗೂ ನಟಿ ಅನನ್ಯಾ ಪಾಂಡೆ ಅವರನ್ನು ಎನ್‌ಸಿಬಿ ಅಧಿಕಾರಿಗಳು ಇದೇ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗೆ ಒಳಪಡಿಸಿದರು. ‘ಸ್ಟುಡೆಂಟ್‌ ಆಫ್‌ ದಿ ಇಯರ್– 2’, ‘ಪತಿ ಪತ್ನಿ ಔರ್ ವೊ’ ಚಿತ್ರಗಳಲ್ಲಿ ಅನನ್ಯಾ ನಟಿಸಿದ್ದಾರೆ.

ನಗರದ ಬಲ್ಲಾರ್ಡ್‌ ಎಸ್ಟೇಟ್‌ನಲ್ಲಿರುವ ಕಚೇರಿಯಲ್ಲಿ ಅನನ್ಯಾ ಪಾಂಡೆಯನ್ನು ಎರಡೂವರೆ ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ ಎನ್‌ಸಿಬಿ ಅಧಿಕಾರಿಗಳು, ಶುಕ್ರವಾರ (ಅ.22) ಪುನಃ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದರು.

ಇದಕ್ಕೂ ಮುನ್ನ, ಬಾಂದ್ರಾದಲ್ಲಿರುವ ನಟಿಯ ಮನೆಗೂ ಭೇಟಿ ನೀಡಿದ ಎನ್‌ಸಿಬಿ ಅಧಿಕಾರಿಗಳಿದ್ದ ತಂಡ, ಮೊಬೈಲ್‌ ಫೋನ್‌ ಸೇರಿ ಕೆಲವು ಎಲೆಕ್ಟ್ರಾನಿಕ್ಸ್‌ ಸಾಧನಗಳನ್ನು ವಶಪಡಿಸಿಕೊಂಡಿತು. ಆರ್ಯನ್‌ಖಾನ್‌ ಜೊತೆ ನಡೆಸಿದ್ದ ವಾಟ್ಸ್‌ಆ್ಯಪ್‌ ಚಾಟ್‌ಗಳ ಆಧಾರದ ಮೇಲೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ ಸಮನ್ಸ್‌ ಜಾರಿ ಮಾಡಲಾಗಿತ್ತು ಎಂದು ಮೂಲಗಳು ಹೇಳಿವೆ.

ಜಾಮೀನು ಅರ್ಜಿ ವಿಚಾರಣೆ: ಜಾಮೀನು ಕೋರಿ ಆರ್ಯನ್‌ ಖಾನ್‌ ಪರ ವಕೀಲ ಸತೀಶ್‌ ಮಾನೆಶಿಂಧೆ ಅವರು ಹೈಕೋರ್ಟ್‌ ನ್ಯಾಯಮೂರ್ತಿ ಎನ್‌.ಡಬ್ಲ್ಯು.ಸಾಂಬ್ರೆ ನೇತೃತ್ವದ ಏಕಸದಸ್ಯ ನ್ಯಾಯಪೀಠಕ್ಕೆ ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆಯನ್ನು ಶುಕ್ರವಾರವೇ ಕೈಗೆತ್ತಿಕೊಳ್ಳುವಂತೆಯೂ ಕೋರಿದರು.

‘ಎನ್‌ಸಿಬಿ ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಅನಿಲ್‌ ಸಿಂಗ್‌ ಅವರು ಸಮಯ ಕೇಳಿದ್ದರಿಂದ, ಅರ್ಜಿ ವಿಚಾರಣೆಯನ್ನು ಮುಂದಿನ ಮಂಗಳವಾರ ನಿಗದಿ ಮಾಡಲಾಗಿದೆ’ ಎಂದು ವಕೀಲ ಮಾನೆಶಿಂಧೆ ನಂತರ ಸುದ್ದಿಗಾರರಿಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT