ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕಕ್ಕೆ ನೀರು ಹರಿಸುವುದನ್ನು ಮರುಪರಿಶೀಲಿಸಬೇಕಾಗುತ್ತದೆ: ಮಹಾರಾಷ್ಟ್ರ ಸಚಿವ

Last Updated 21 ಡಿಸೆಂಬರ್ 2022, 11:27 IST
ಅಕ್ಷರ ಗಾತ್ರ

ನಾಗ್ಪುರ: ಗಡಿ ವಿವಾದಕ್ಕೆ ಸಂಬಂಧಿಸಿ ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಬುಧವಾರ ಹರಿಹಾಯ್ದ ಮಹಾರಾಷ್ಟ್ರ ಸಚಿವ ಶಂಭುರಾಜ್‌ ದೇಸಾಯ್‌, ಬೊಮ್ಮಾಯಿ ಅವರು ಬೇಜವಾಬ್ದಾರಿಯುತ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸದಿದ್ದರೆ ಕರ್ನಾಟಕಕ್ಕೆ ನದಿ ನೀರು ಪೂರೈಕೆ ಮಾಡುವ ಕುರಿತು ಮಹಾರಾಷ್ಟ್ರ ಪುನರ್‌ಪರಿಶೀಲನೆ ಮಾಡಬೇಕಾಗುತ್ತದೆ ಎಂದರು.

ಸುದ್ದಿಗಾರರ ಜತೆ ಮಾತನಾಡಿದ ದೇಸಾಯಿ ಅವರು, ಮಹಾರಾಷ್ಟ್ರಕ್ಕೆ ಒಂದು ಇಂಚು ಭೂಮಿಯನ್ನೂ ಬಿಟ್ಟು ಕೊಡುವುದಿಲ್ಲ ಎಂಬ ಬೊಮ್ಮಾಯಿ ಅವರ ನಿಲುವಿನ ವಿರುದ್ಧ ಹರಿಹಾಯ್ದರು. ಗಡಿ ಪ್ರದೇಶಗಳಿಗೆ ಸಂಬಂಧಿಸಿದ ಮೊಕದ್ದಮೆಯು ವಿಚಾರಣಾ ಹಂತದಲ್ಲಿ ಇರುವಾಗ ಸಾಂವಿಧಾನಿಕ ಹುದ್ದೆಯಲ್ಲಿ ಇರುವವರು ಈ ರೀತಿ ಹೇಳಿಕೆ ನೀಡಬಾರದು ಎಂದರು.

‘ಮಹಾರಾಷ್ಟ್ರ ಬಿಡುಗಡೆ ಮಾಡುವ ನೀರನ್ನು ಕರ್ನಾಟಕವು ಬೇಸಿಗೆಗಾಲದಲ್ಲಿ ಅವಲಂಬಿಸಿರುತ್ತದೆ ಎಂಬುದನ್ನು ಬೊಮ್ಮಾಯಿ ಅವರು ಮರೆಯಬಾರದು. ಇಂಥ ಹೇಳಿಕೆಗಳನ್ನು ನೀಡುವುದನ್ನು ಅವರು ನಿಲ್ಲಿಸದಿದ್ದರೆ ಕರ್ನಾಟಕಕ್ಕೆ ನೀರು ಹರಿಸುವ ಕುರಿತು ಚಿಂತನೆ’ ನಡೆಬೇಕಾಗುತ್ತದೆ ಎಂದು ಅವರು ಹೇಳಿದರು.

ಸಚಿವರಾದ ಚಂದ್ರಕಾಂತ್‌ ಪಾಟೀಲ್‌ ಮತ್ತು ಶಂಭುರಾಜ್‌ ದೇಸಾಯಿ ಅವರನ್ನು ಕರ್ನಾಟಕ– ಮಹಾರಾಷ್ಟ್ರದ ಗಡಿ ವಿವಾದಕ್ಕೆಸಂಬಂಧಿಸಿದ ಕಾನೂನು ತಂಡದ ಜೊತೆ ಸಮನ್ವಯ ಸಾಧಿಸುವ ನೋಡಲ್‌ ಸಚಿವರನ್ನಾಗಿ ಮಹಾರಾಷ್ಟ್ರ ಸರ್ಕಾರವುಕಳೆದ ತಿಂಗಳಷ್ಟೇ ನೇಮಕ ಮಾಡಿದೆ.

ಅಣೆಕಟ್ಟುಗಳ ಎತ್ತರ ಹೆಚ್ಚಿಸಿ: ಕರ್ನಾಟಕದ ಕಡೆ ಹರಿಯುವ ನದಿಗಳಿಗೆ ಕಟ್ಟಲಾಗಿರುವ ಅಣೆಕಟ್ಟುಗಳ ಎತ್ತರವನ್ನು ಹೆಚ್ಚಿಸಿ ನದಿಗಳ ನೀರು ಕರ್ನಾಟಕಕ್ಕೆ ಹರಿಯುವುದನ್ನು ತಡೆಯುವಂತೆ ಎನ್‌ಸಿಪಿ ನಾಯಕ ಜಯಂತ್‌ ಪಾಟೀಲ್‌ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ಕರೆ ನೀಡಿದ್ದಾರೆ.

’ಗಡಿ ಪ್ರದೇಶದ ಮರಾಠಿ ಭಾಷಿಕರ ಮೇಲೆ ಬೇಕಂತಲೇ ಕರ್ನಾಟಕ ದಬ್ಬಾಳಿಕೆ ನಡೆಸುತ್ತಿದೆ. ಕರ್ನಾಟಕ ಮುಖ್ಯಮಂತ್ರಿಗೆ ಅವರ ಭಾಷೆಯಲ್ಲೇ ಉತ್ತರ ನೀಡಬೇಕು. ಅವರಿಗೆ ಅಷ್ಟೊಂದು ಗರ್ವವಿದ್ದರೆ, ನಾವು ಕೋಯ್ನಾ ಮತ್ತು ವಾರ್ನ ನದಿಗಳಿಗೆ ಅಡ್ಡಲಾಗಿ ಕಟ್ಟಿರುವ ಅಣೆಕಟ್ಟೆಗಳು ಹಾಗೂ ಸತಾರ ಮತ್ತು ಕೊಲ್ಹಾಪುರ ಜಿಲ್ಲೆಗಳಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟುಗಳ ಎತ್ತರವನ್ನು ಹೆಚ್ಚಿಸೋಣ. ಇಲ್ಲದಿದ್ದರೆ ಕರ್ನಾಟಕದ ನಾಯಕರನ್ನು ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲ‘ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT