ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಹಣ ವರ್ಗಾವಣೆ: ಇ.ಡಿ. ಮುಂದೆ ಹಾಜರಾದ ಎನ್‌ಸಿಪಿ ನಾಯಕ ಏಕನಾಥ್‌ ಖಡ್ಸೆ

Last Updated 8 ಜುಲೈ 2021, 9:06 IST
ಅಕ್ಷರ ಗಾತ್ರ

ಮುಂಬೈ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದ ಮಾಜಿ ಕಂದಾಯ ಸಚಿವ ಮತ್ತು ಎನ್‌ಸಿಪಿ ನಾಯಕ ಏಕನಾಥ್‌ ಖಡ್ಸೆ ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮುಂದೆ ವಿಚಾರಣೆಗಾಗಿ ಹಾಜರಾದರು.

ಬುಧವಾರ ಖಡ್ಸೆ ಅವರ ಅಳಿಯ ಗಿರೀಶ್‌ ಚೌಧರಿ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದರು.

2016ರಲ್ಲಿ ಪುಣೆಯಲ್ಲಿನ ಸರ್ಕಾರಿ ಜಮೀನಿನ ಕಬಳಿಕೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ತನಿಖೆ ನಡೆಸುತ್ತಿದೆ. ಈ ಜಮೀನಿನ ವ್ಯವಹಾರದಲ್ಲಿ ಅಕ್ರಮ ನಡೆದಿದ್ದು, ಸರ್ಕಾರದ ಬೊಕ್ಕಸಕ್ಕೆ ₹61.25 ಕೋಟಿ ನಷ್ಟವಾಗಿದೆ ಎಂದು ಇ.ಡಿ ಆರೋಪಿಸಿದೆ.

ಮಹಾರಾಷ್ಟ್ರ ಕೈಗಾರಿಕೆ ಅಭಿವೃದ್ಧಿ ನಿಗಮಕ್ಕೆ (ಎಂಐಡಿಸಿ) ಸೇರಿದ ಈ ಜಮೀನನ್ನು ಕೇವಲ ₹3.75 ಕೋಟಿಗೆ ನೋಂದಣಿ ಮಾಡಲಾಗಿತ್ತು. ಆದರೆ, ವಾಸ್ತವದಲ್ಲಿ ಈ ಜಮೀನಿನ ಮೌಲ್ಯ ₹31 ಕೋಟಿ ಎಂದು ತಿಳಿಸಿದೆ.

ನಕಲಿ ಕಂಪನಿಗಳ ಹೆಸರಿನಲ್ಲಿ ಹಣ ವರ್ಗಾವಣೆಯಾಗಿರುವುದು ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆಯ ಭ್ರಷ್ಟಾಚಾರ ನಿಗ್ರಹ ಘಟಕವು (ಎಸಿಬಿ) ಖಡ್ಸೆ ಮತ್ತು ಅವರ ಪತ್ನಿ ಮಂದಾಕಿನಿ ಹಾಗೂ ಗಿರೀಶ್‌ ಚೌಧರಿ ಅವರ ವಿರುದ್ಧ 2017ರ ಏಪ್ರಿಲ್‌ನಲ್ಲಿ ಎಫ್‌ಐಆರ್‌ ದಾಖಲಿಸಿತ್ತು. ಬಳಿಕ, ಇ.ಡಿ. ಪ್ರಕರಣದ ತನಿಖೆಯನ್ನು ಕೈಗೊಂಡಿತ್ತು.

ಈ ವರ್ಷದ ಜನವರಿಯಲ್ಲೂ ಖಡ್ಸೆ ಅವರನ್ನು ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಿದ್ದರು.

ದೇವೇಂದ್ರ ಫಡಣವೀಸ್‌ ಸರ್ಕಾರದಲ್ಲಿ ಕಂದಾಯ ಸಚಿವರಾಗಿದ್ದ ಖಡ್ಸೆ ಅವರು, ಇದೇ ಜಮೀನಿನ ಕಬಳಿಕೆ ಆರೋಪದಿಂದಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಖಡ್ಸೆ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿತ್ತು. ನಂತರದ ರಾಜಕೀಯ ಬೆಳವಣಿಗೆಯಲ್ಲಿ ಏಕನಾಥ್‌ ಖಡ್ಸೆ ಅವರು, ಕಳೆದ ವರ್ಷ ಬಿಜೆಪಿ ತೊರೆದು ಎನ್‌ಸಿಪಿ ಸೇರಿದ್ದರು.

‘ಈ ಪ್ರಕರಣವು ರಾಜಕೀಯ ಪ್ರೇರಿತವಾಗಿದೆ. ನನಗೆ ಕಳಂಕ ತರುವ ಸಂಚು ನಡೆಯುತ್ತಿದೆ. ಬಿಜೆಪಿ ತೊರೆದ ಕಾರಣಕ್ಕೆ ತನಿಖೆ ನಡೆಯುತ್ತಿದೆ. ಜಾರಿ ನಿರ್ದೇಶನಾಲಯದ ಜತೆ ತನಿಖೆಗೆ ಸಹಕರಿಸುತ್ತೇನೆ. ಈ ಪ್ರಕರಣದ ಬಗ್ಗೆ ಐದು ಬಾರಿ ತನಿಖೆ ನಡೆದಿದೆ. ಇನ್ನೂ ಎಷ್ಟು ಬಾರಿ ತನಿಖೆ ನಡೆಸುತ್ತೀರಿ? ಎಸಿಬಿ ಮತ್ತು ಆದಾಯ ತೆರಿಗೆ ಇಲಾಖೆಗಳು ಕ್ಲೀನ್‌ ಚಿಟ್‌ ನೀಡಿವೆ’ ಎಂದು ಖಡ್ಸೆ ಅವರು ಸುದ್ದಿಗಾರರಿಗೆ ಗುರುವಾರ ತಿಳಿಸಿದರು.

‘ಪುಣೆಯಲ್ಲಿನ ಜಮೀನಿನ ವ್ಯವಹಾರವು ನನ್ನ ಅಳಿಯ ಮತ್ತು ವ್ಯಕ್ತಿಯೊಬ್ಬರ ನಡುವಣ ಖಾಸಗಿ ವ್ಯವಹಾರ. ಜತೆಗೆ, ಈ ಜಮೀನು ಮಹಾರಾಷ್ಟ್ರ ಕೈಗಾರಿಕೆ ಅಭಿವೃದ್ಧಿ ನಿಗಮಕ್ಕೆ ಸೇರಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT