ಸೋಮವಾರ, ಆಗಸ್ಟ್ 8, 2022
22 °C
ಕಿರುತೆರೆ, ಸಿನಿಮಾ, ಒಟಿಟಿ ವೇದಿಕೆ ಒಳಗೊಂಡು ಕರಡು ನಿಯಮ

ಬಾಲನಟರ ಹಕ್ಕುಗಳ ರಕ್ಷಣೆಗೆ ಮಾರ್ಗಸೂಚಿ: ಕರಡು ನಿಯಮ ಪ್ರಕಟಿಸಿದ ಎನ್‌ಸಿಪಿಸಿಆರ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಸಿನಿಮಾ, ಕಿರುತೆರೆ, ರಿಯಾಲಿಟಿ ಶೋ ಒಳಗೊಂಡಂತೆ ಮನರಂಜನಾ ಉದ್ಯಮ ಕ್ಷೇತ್ರದಲ್ಲಿ ಬಾಲನಟರ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು (ಎನ್‌ಸಿಪಿಸಿಆರ್‌) ಕರಡು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಯಾವುದೇ ಬಾಲನಟ ನಿರಂತರವಾಗಿ 27 ದಿನ ಕೆಲಸ ಮಾಡುವಂತಿಲ್ಲ ಹಾಗೂ ಬಾಲನಟನ ಆದಾಯದಲ್ಲಿ ಶೇ 20ರಷ್ಟನ್ನು ಆತನ ಹೆಸರಿನಲ್ಲಿಯೇ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ನಿಶ್ಚಿತ ಠೇವಣಿಯಾಗಿ ಇಡಬೇಕು ಎಂಬುದು ಕರಡು ಮಾರ್ಗಸೂಚಿಗಳ ಪ್ರಮುಖ ಅಂಶವಾಗಿದೆ. 

ಸಿನಿಮಾ, ಕಿರುತರೆ ಅಲ್ಲದೇ ಟಿ.ವಿ.ಧಾರಾವಾಹಿಗಳು, ಸುದ್ದಿ ಮತ್ತು ಸಂವಹನ ಮಾಧ್ಯಮ, ಒಟಿಟಿ ವೇದಿಕೆಯಲ್ಲಿನ ಅಡಕಗಳು, ಸಾಮಾಜಿಕ ಜಾಲತಾಣಗಳು, ಪ್ರದರ್ಶನ ಕಲೆ, ಜಾಹೀರಾತು ಅಥವಾ ಮಕ್ಕಳು ಭಾಗಿಯಾಗುವ ಎಲ್ಲ ರೀತಿಯ ಮನರಂಜನಾತ್ಮಕ ಚಟವಟಿಕೆಗಳು ಈ ಮಾರ್ಗಸೂಚಿಗಳ ಪರಿಧಿಗೆ ಒಳಪಡಲಿವೆ.

ಬಾಲನಟರನ್ನು ದೈಹಿಕ ಮತ್ತು ಮಾನಸಿಕ ಒತ್ತಡದಿಂದ ರಕ್ಷಿಸುವುದು ಹಾಗೂ ಅವರಿಗೆ ಕೆಲಸದ ಸ್ಥಳದಲ್ಲಿ ಆರೋಗ್ಯಕರವಾದ ವಾತಾವರಣವನ್ನು ಕಲ್ಪಿಸುವುದು ಎನ್‌ಸಿಪಿಸಿಆರ್‌ ಹೊರಡಿಸಿರುವ ಕರಡು ನಿಯಮಗಳ ಮುಖ್ಯ ಉದ್ದೇಶವಾಗಿದೆ.

ನಿಯಮದ ಅನುಸಾರ, ಚಿತ್ರೀಕರಣದಲ್ಲಿ ಬಾಲನಟರನ್ನು ತೊಡಗಿಸಿಕೊಳ್ಳುವ ಮುನ್ನ ಜಿಲ್ಲಾ ಮ್ಯಾಜಿಸ್ಟ್ರೇಟರಿಂದ ಅನುಮತಿ ಪಡೆಯಬೇಕು. ಬಾಲನಟರು ಶೋಷಣೆಗೆ ಒಳಗಾಗದಂತೆ ಎಲ್ಲ ಮುಂಜಾಗ್ರತೆ ವಹಿಸಲಾಗಿದೆ ಎಂಬ ಘೋಷಣಾ ವಿವರಗಳನ್ನು ಚಿತ್ರೀಕರಣ ಸ್ಥಳದಲ್ಲಿ ಪ್ರದರ್ಶಿಸುವುದು ಅಗತ್ಯ.

ಬಾಲನಟರು ಸತತ 27 ದಿನ ಕೆಲಸ ನಿರ್ವಹಿಸುವಂತಿಲ್ಲ. ಮಕ್ಕಳು ನಿತ್ಯ ಒಂದು ಪಾಳಿಯಲ್ಲಿ ಕೆಲಸ ಮಾಡಬಹುದು. ಪ್ರತಿ ಮೂರು ಗಂಟೆಗೆ ಒಮ್ಮೆ ವಿರಾಮ ಇರಬೇಕು. ಸೇವೆ ಕುರಿತಂತೆ ಬಾಲನಟನೊಂದಿಗೆ ಯಾವುದೇ ಒಪ್ಪಂದ ಮಾಡಿಕೊಳ್ಳಬಾರದು ಎಂದು ನಿಯಮದಲ್ಲಿ ಹೇಳಲಾಗಿದೆ.

ಮಕ್ಕಳ ವಯಸ್ಸು, ಪಕ್ವತೆ, ಭಾವನೆಗಳು, ದೈಹಿಕ ಬೆಳವಣಿಗೆಗಳನ್ನು ಗಮನದಲ್ಲಿ ಇಟ್ಟುಕೊಂಡು ಪಾತ್ರ ನಿರ್ವಹಣೆಗೆ ಅವಕಾಶ ಕಲ್ಪಿಸಬೇಕು. ನಿರ್ಮಾಣ ಸ್ಥಳಗಳಲ್ಲಿ ಸುರಕ್ಷತೆಗೆ ಒತ್ತು ನೀಡಬೇಕು. ಅಪಾಯಕಾರಿ ಲೈಟಿಂಗ್, ಇರಿಸುಮುರಿಸಿಗೆ ಒಳಗಾಗುವ ಪ್ರಸಾಧನ ಬಳಸುವುದರ ವಿರುದ್ಧ ಜಾಗ್ರತೆ ವಹಿಸಬೇಕು ಎಂದು ಹೇಳಲಾಗಿದೆ.

ವಯಸ್ಕರ ಪ್ರಾಬಲ್ಯದ ಮನರಂಜನಾ ಉದ್ಯಮದಲ್ಲಿ ಭಾಗವಹಿಸುವ ಮಕ್ಕಳು ಆಗಿಂದಾಗ್ಗೆ ಸೂಕ್ತವಲ್ಲದ, ಅಪಾಯಕಾರಿ ಸನ್ನಿವೇಶದಲ್ಲಿ ಕಾರ್ಯನಿರ್ವಹಿಸುವ ಸ್ಥಿತಿ ಇದೆ. ಮಕ್ಕಳ ಹಕ್ಕುಗಳ ರಕ್ಷಣೆಗೆ ಹಲವು ಕಾಯ್ದೆಗಳು ಇದ್ದರೂ, ನಿರ್ದಿಷ್ಟವಾಗಿ ನಿಯಮಾವಳಿಗಳು ಇರಲಿಲ್ಲ. ಹೀಗಾಗಿ, ನಿಯಮ ರೂಪಿಸಬೇಕಾದ ಅಗತ್ಯವನ್ನು ಎನ್‌ಸಿಪಿಸಿಆರ್ ಮನಗಂಡಿದೆ. ಬಾಲಾಪರಾಧಿಗಳು, ಬಾಲ ಕಾರ್ಮಿಕರು, ಲೈಂಗಿಕ ದೌರ್ಜನ್ಯದಿಂದ ಮಕ್ಕಳ ರಕ್ಷಣೆ ಸೇರಿದಂತೆ ಹಲವು ಕಾಯ್ದೆಗಳಿವೆ. ಮನರಂಜನೆಗೆ ಸಂಬಂಧಿಸಿ ಕರಡು ನಿಯಮ ರಚಿಸಲಾಗಿದೆ ಎಂದು ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು