ಗುವಾಹಟಿ: ಅಸ್ಸಾಮಿನಲ್ಲಿ ಕೋವಿಡ್–19 ಸಾಂಕ್ರಾಮಿಕ ರೋಗದಿಂದಾಗಿ ಸುಮಾರು ಎರಡು ಸಾವಿರ ಮಹಿಳೆಯರು ವಿಧವೆಯರಾಗಿದ್ದು, ಈ ಮಹಿಳೆಯರ ಆರ್ಥಿಕ ಸಹಾಯಕ್ಕಾಗಿ ಅಲ್ಲಿನ ಸರ್ಕಾರ ಹೊಸ ಯೋಜನೆಯೊಂದನ್ನು ಅನುಷ್ಠಾನಗೊಳಿಸಿದೆ.
ವಿಧವೆಯರಿಗೆ ಆರ್ಥಿಕ ಸಹಾಯದ ಯೋಜನೆಯನ್ನು ಉದ್ಘಾಟಿಸಿ, ಅರ್ಹರಿಗೆ ₹ 2.5 ಲಕ್ಷ ಮೊತ್ತದ ಚೆಕ್ ಹಸ್ತಾಂತರಿಸಿ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮ, ಕುಟುಂಬದ ವಾರ್ಷಿಕ ಆದಾಯ ₹ 5 ಲಕ್ಷಕ್ಕಿಂತ ಕಡಿಮೆ ಇದ್ದವರು ಈ ಯೋಜನೆಗೆ ಅರ್ಹರು ಎಂದು ತಿಳಿಸಿದರು.
‘ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ 6,100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಕೋವಿಡ್‌ನಿಂದಾಗಿ ಗಂಡಂದಿರನ್ನು ಕಳೆದುಕೊಂಡು ಸುಮಾರು 2 ಸಾವಿರ ಮಹಿಳೆಯರು ವಿಧವೆಯರಾಗಿದ್ದಾರೆ. ಈ ಮಹಿಳೆಯರ ಕುಟುಂಬಕ್ಕಾದ ನಷ್ಟವನ್ನು ಭರಿಸಲು ಸಾಧ್ಯವಿಲ್ಲ. ಆದರೆ, ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿರುವ ವಿಧವೆಯರ ಬೆಂಬಲಕ್ಕಾಗಿ ರಾಜ್ಯ ಸರ್ಕಾರವು ₹2.5 ಲಕ್ಷ ಸಹಾಯಧನ ನೀಡುತ್ತಿದೆ. ಈ ಯೋಜನೆಯಡಿಯಲ್ಲಿ ಹಣಕಾಸಿನ ನೆರವು ಅಗತ್ಯವಿರುವ ವಿಧವೆಯರನ್ನು ಗುರುತಿಸಲು ಎಲ್ಲಾ ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ’ ಎಂದರು.
ವಿಧವೆಯರಿಗೆ ಆರ್ಥಿಕ ಬೆಂಬಲ ಯೋಜನೆಯಡಿ ಇದುವರೆಗೆ 883 ಮಹಿಳೆಯರನ್ನು ಗುರುತಿಸಲಾಗಿದ್ದು, ಈ ಪೈಕಿ ನಾಲ್ಕು ಜಿಲ್ಲೆಗಳ 176 ವಿಧವೆಯರಿಗೆ ಗುವಾಹಟಿಯಲ್ಲಿ ಹಿಮಂತ್ ಬಿಸ್ವಾ ಶರ್ಮ ಅವರು ಚೆಕ್ ಹಸ್ತಾಂತರಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.