ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಗಳಿಗೆ ಸೋಂಕು ಹರಡದಂತೆ ತಡೆಯಿರಿ: ಮೋದಿ ಸೂಚನೆ

ಎರಡನೇ ಅಲೆ ತಡೆಗೆ ಕಠಿಣ ಕ್ರಮಕೈಗೊಳ್ಳಿ: ಪರೀಕ್ಷೆ ಹೆಚ್ಚಿಸಿ; ರಾಜ್ಯ ಸರ್ಕಾರಗಳಿಗೆ ನಿರ್ದೇಶನ
Last Updated 17 ಮಾರ್ಚ್ 2021, 22:06 IST
ಅಕ್ಷರ ಗಾತ್ರ

ನವದೆಹಲಿ: ದೇಶದಲ್ಲಿ ಕೋವಿಡ್‌–19 ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಆತಂಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಎರಡನೇ ಅಲೆಯನ್ನು ನಿಯಂತ್ರಿಸಲು ‘ತಕ್ಷಣದ ಮತ್ತು ನಿರ್ಣಾಯಕ’ ಕ್ರಮಗಳನ್ನು ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದಾರೆ.

ಕೋವಿಡ್‌–19 ಪರಿಸ್ಥಿತಿ ಕುರಿತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಬುಧವಾರ ವರ್ಚುವಲ್‌ ಸಭೆ ನಡೆಸಿದ ಅವರು, ‘ಈ ಮೊದಲು ಸುರಕ್ಷಿತ ವಲಯಗಳು ಎಂದು ಪರಿಗಣಿಸಲಾಗಿದ್ದ ಎರಡು ಮತ್ತು ಮೂರನೇ ಹಂತದ ನಗರಗಳಲ್ಲಿ ಈಗ ಸೋಂಕು ಪ್ರಕರಣಗಳು ಹೆಚ್ಚುತ್ತಿವೆ. ಸಣ್ಣ ನಗರಗಳಿಗೆ ಸೋಂಕು ಹಬ್ಬಿದರೆ ಹಳ್ಳಿಗಳಿಗೂ ವ್ಯಾಪಿಸುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಹೀಗಾಗಿ, ಪರೀಕ್ಷೆಗಳನ್ನು ಹೆಚ್ಚಿಸಬೇಕು’ ಎಂದು ಸಲಹೆ ನೀಡಿದರು.

‘ಸೋಂಕು ಗ್ರಾಮೀಣ ಪ್ರದೇಶಕ್ಕೆ ಹಬ್ಬಿದರೆ, ಈಗಿರುವ ವ್ಯವಸ್ಥೆಗಳಲ್ಲಿ ಕೊರತೆಯಾಗುವುದರಿಂದ ಈಗಿನಿಂದಲೇ ಅಗತ್ಯವಿರುವ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲೇಬೇಕು’ ಎಂದು ನಿರ್ದೇಶನ ನೀಡಿದರು.

‘ಮಹಾರಾಷ್ಟ್ರ ಮತ್ತು ಪಂಜಾಬ್‌ಗಳಲ್ಲಿ ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಮಾರ್ಚ್‌ 1ರಿಂದ 15ರ ಅವಧಿಯಲ್ಲಿ ದೇಶದ 70 ಜಿಲ್ಲೆಗಳಲ್ಲಿ ಶೇಕಡ 150ರಷ್ಟು ಪ್ರಕರಣಗಳು ಹೆಚ್ಚಾಗಿವೆ. ಮಧ್ಯಪ್ರದೇಶದ ರತ್ಲಾಮ್‌ (ಶೇಕಡ 500), ಛತ್ತೀಸಗಡದ ಸುರಜಪುದಲ್ಲಿ (ಶೇಕಡ 425) ಮಹಾರಾಷ್ಟ್ರದ ನಾಂದೇಡ್‌ನಲ್ಲಿ (ಶೇಕಡ 360) ಮತ್ತು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ (ಶೇಕಡ 360) ಅತಿ ಹೆಚ್ಚು ಪ್ರಕರಣಗಳು ಪತ್ತೆಯಾಗಿವೆ. ತಕ್ಷಣವೇ ನಾವು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳದಿದ್ದರೆ ವ್ಯಾಪಕವಾಗಿ ಹಬ್ಬುತ್ತದೆ’ ಎಂದು ಎಚ್ಚರಿಕೆ ನೀಡಿದರು.

‘ಆರ್‌ಟಿ–ಪಿಸಿಆರ್‌ ಪರೀಕ್ಷೆಗಳನ್ನು ಹೆಚ್ಚಿಸಬೇಕು. ಒಟ್ಟಾರೆ ಪರೀಕ್ಷೆಯಲ್ಲಿ ಶೇಕಡ 70ರಷ್ಟು ಆರ್‌ಟಿ–ಪಿಸಿಆರ್‌ ಪರೀಕ್ಷೆಗಳನ್ನು ಕೈಗೊಳ್ಳಬೇಕು. ಛತ್ತೀಸಗಡ, ಉತ್ತರ ಪ್ರದೇಶ, ಕೇರಳ ಮತ್ತು ಒಡಿಶಾ ರಾಜ್ಯಗಳು ಬಹುತೇಕ ಆಂಟಿಜೆನ್‌ ಪರೀಕ್ಷೆ ಮೇಲೆ ಅವಲಂಬನೆಯಾಗಿವೆ. ಪರೀಕ್ಷೆಯ ಈ ಕಾರ್ಯತಂತ್ರವನ್ನು ಬದಲಾಯಿಸಿಕೊಳ್ಳಬೇಕು’ ಎಂದು ಸೂಚಿಸಿದ್ದಾರೆ’

‘ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಭಾರತ ಯಶಸ್ವಿಯಾಗಿದೆ. ಆದರೆ, ಇದು ಅತಿಯಾದ ಆತ್ಮವಿಶ್ವಾಸಕ್ಕೆ ಮತ್ತು ನಿರ್ಲಕ್ಷ್ಯಕ್ಕೆ ಕಾರಣವಾಗಬಾರದು’ ಎಂದು ಹೇಳಿದರು.

ಸಭೆಯಲ್ಲಿ ಪಶ್ಚಿಮ ಬಂಗಾಳ ಮತ್ತು ಛತ್ತೀಸಗಡ ಸೇರಿದಂತೆ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT