ಗುರುವಾರ , ಮೇ 26, 2022
24 °C

ಇಂಡಿಯಾ ಗೇಟ್‌ನಲ್ಲಿ ನೇತಾಜಿ ಪ್ರತಿಮೆ ಸ್ಥಾಪನೆ: ಮೋದಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಅಂಗವಾಗಿ, ಅವರ ಪ್ರತಿಮೆಯನ್ನು  ಇಂಡಿಯಾ‌ ಗೇಟ್‌ ಬಳಿ ಸ್ಥಾಪಿಸಲಾಗುವುದು. ಇದು ನೇತಾಜಿ ಅವರಿಗೆ ಭಾರತ ಋಣಿಯಾಗಿರುವ ಸಂಕೇತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

‘ಗ್ರಾನೈಟ್‌ನಿಂದ ಕೆತ್ತಲಾಗುತ್ತಿರುವ ಪ್ರತಿಮೆ ಪೂರ್ಣಗೊಳ್ಳುವವರೆಗೆ ಅಲ್ಲಿ ನೇತಾಜಿ ಅವರ ಹೋಲೋಗ್ರಾಂ ಪ್ರತಿಮೆ ಇರಲಿದೆ. ಇದನ್ನು ನೇತಾಜಿ ಅವರ ಜನ್ಮದಿನವಾದ ಜನವರಿ 23ರಂದು (ಭಾನುವಾರ) ಅನಾವರಣಗೊಳಿಸಲಿದ್ದೇನೆ’ ಎಂದೂ ಮೋದಿ ಅವರು ಟ್ವೀಟ್‌ ಮಾಡಿದ್ದಾರೆ. 

ಈ ನಿರ್ಧಾರವನ್ನು ಬಹುತೇಕ ವಿರೋಧ ಪಕ್ಷಗಳು ಸ್ವಾಗತಿಸಿವೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ಇದು ಗಣರಾಜೋತ್ಸವದ ಪರೇಡ್‌ನಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಪ್ರದರ್ಶಿಸಲು ಉದ್ದೇಶಿಸಿದ್ದ ಸ್ತಬ್ಧ ಚಿತ್ರ ತಿರಸ್ಕರಿಸಿದ್ದಕ್ಕೆ ವ್ಯಕ್ತವಾದ ಟೀಕೆಯನ್ನು ಎದುರಿಸಲು ಸರ್ಕಾರ ಕೈಗೊಂಡಿರುವ ಕ್ರಮ’ ಎಂದು ಟೀಕಿಸಿದ್ದಾರೆ. 

25 ಅಡಿ ಎತ್ತರದ ಪ್ರತಿಮೆ

ಭುವನೇಶ್ವರ: ರಾಜಧಾನಿಯ ಇಂಡಿಯಾ‌ ಗೇಟ್‌ನಲ್ಲಿ‌ ಸ್ಥಾಪಿಸಲಿರುವ ನೇತಾಜಿ ಅವರ ಪ್ರತಿಮೆ 25 ಅಡಿ ಎತ್ತರ ಇರಲಿದೆ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ನ  (ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯ) ವ್ಯವಸ್ಥಾಪಕ ನಿರ್ದೇಶಕ ಅದ್ವೈತ ಗದನಾಯಕ ಅವರು ತಿಳಿಸಿದ್ದಾರೆ.

‘ಪ್ರತಿಮೆ ರೂಪಿಸುವ ಜವಾಬ್ದಾರಿಯನ್ನು ಪ್ರಧಾನಿ ಮೋದಿ ಅವರು ನನಗೆ ನೀಡಿದ್ದಾರೆ. ಒಬ್ಬ ಶಿಲ್ಪಿಯಾಗಿ ಇದು ನನಗೆ ಬಹಳ ಗೌರವದ ಸಂಗತಿ’ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.‌ 

‘ರೈಸಿನಾ ಹಿಲ್ಸ್‌ನಿಂದ ಈ ಪ್ರತಿಮೆಯನ್ನು ಕಾಣುವಂತೆ ಅಳವಡಿಸಲಾಗುತ್ತದೆ. ನೇತಾಜಿ ಪ್ರತಿಮೆ ರೂಪಿಸಲು ಬಳಸುವ ಶಿಲೆಯನ್ನು  ತೆಲಂಗಾಣದಿಂದ ತರಲಾಗುವುದು. ಪ್ರತಿಮೆಯ ವಿನ್ಯಾಸವನ್ನು ಸಂಸ್ಕೃತಿ ಸಚಿವಾಲಯ ಸಿದ್ಧಪಡಿಸಿದೆ. ಪ್ರತಿಮೆ ಸಿದ್ಧಪಡಿಸುವ ಕೆಲಸ  ಈಗಾಗಲೇ ಆರಂಭವಾಗಿದೆ’ ಎಂದೂ ಅವರು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು