ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ, ಧರ್ಮ ಉಲ್ಲೇಖಿಸಿ ಮಾತನಾಡದಿರಿ: ಸಂಸತ್‌ ಸದಸ್ಯರಿಗೆ ಸ್ಪೀಕರ್‌ ತಾಕೀತು

Last Updated 12 ಡಿಸೆಂಬರ್ 2022, 11:20 IST
ಅಕ್ಷರ ಗಾತ್ರ

ನವದೆಹಲಿ: ಯಾರೊಬ್ಬರೂ ಯಾರ ಜಾತಿ, ಧರ್ಮವನ್ನು ಪ್ರಸ್ತಾಪಿಸಿ ಮಾತನಾಡಬಾರದು ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಸೋಮವಾರ ಲೋಕಸಭೆಯಲ್ಲಿ ಸದಸ್ಯರಿಗೆ ತಾಕೀತು ಮಾಡಿದ್ದಾರೆ.

‘ನಾನು ಕೆಳಜಾತಿಯವನೆಂಬ ಕಾರಣಕ್ಕೆ ಹಿಂದಿ ಭಾಷೆಯಲ್ಲಿನ ನನ್ನ ಪ್ರಾವಿಣ್ಯತೆಯ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಟೀಕೆ ಮಾಡಿದ್ದಾರೆ’ ಎಂದು ಕಾಂಗ್ರೆಸ್‌ ಸಂಸದ ಎ.ಆರ್ ರೆಡ್ಡಿ ಸಂಸತ್‌ನಲ್ಲಿ ಆರೋಪಿಸಿದರು. ಈ ಹಿನ್ನೆಲೆಯಲ್ಲಿ ಓಂ ಬಿರ್ಲಾ ಅವರು ಸದಸ್ಯರಿಗೆ ಎಚ್ಚರಿಕೆ ನೀಡಿದರು.

ಪ್ರಶ್ನೋತ್ತರ ವೇಳೆಯಲ್ಲಿ ಎ.ಆರ್ ರೆಡ್ಡಿ ತಮ್ಮ ಸಾಮಾಜಿಕ ವರ್ಗವನ್ನು ಉಲ್ಲೇಖಿಸಿ ಬಳಸಿದ ಪದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ‘ಜನರು ಜಾತಿ ಮತ್ತು ಧರ್ಮದ ಆಧಾರದ ಮೇಲೆ ಸದಸ್ಯರನ್ನು ಲೋಕಸಭೆಗೆ ಆಯ್ಕೆ ಮಾಡಿಲ್ಲ’ ಎಂದು ತಿಳಿಸಿದರು.

‘ಯಾರೇ ಆಗಲಿ ಸದನದಲ್ಲಿ ಅಂತಹ ಪದಗಳನ್ನು ಬಳಸಬಾರದು. ಇಲ್ಲವಾದರೆ ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಸಭಾಧ್ಯಕ್ಷರು ಎಚ್ಚರಿಕೆ ನೀಡಿದರು.

ರೆಡ್ಡಿ ಅವರು ಪ್ರಶ್ನೆ ಕೇಳುವ ವೇಳೆ, "ಅಡ್ಡಿಪಡಿಸಬೇಡಿ" ಎಂದು ಹೇಳಿದ್ದನ್ನೂ ಸ್ಪೀಕರ್‌ ಗಂಭೀರವಾಗಿ ಪರಿಗಣಿಸಿದರು. ‘ಸ್ಪೀಕರ್ ಬಗ್ಗೆ ಟೀಕೆಗಳನ್ನು ಎಂದಿಗೂ ಮಾಡದಿರುವಂತೆ ಸದಸ್ಯರಿಗೆ ಅರ್ಥ ಮಾಡಿಸಿ‘ ಎಂದು ಸದನದ ಕಾಂಗ್ರೆಸ್‌ನ ನಾಯಕ ಅಧೀರ್ ರಂಜನ್ ಚೌಧರಿ ಅವರಿಗೆ ಬಿರ್ಲಾ ತಾಕೀತು ಮಾಡಿದರು.

ಏನಿದು ಘಟನೆ?

ರೂಪಾಯಿ ಅಪಮೌಲ್ಯದ ಬಗ್ಗೆ ಕಾಂಗ್ರೆಸ್‌ ಸದಸ್ಯ ಎ.ಆರ್ ರೆಡ್ಡಿ ಲೋಕಸಭೆಯಲ್ಲಿ ಪ್ರಶ್ನೆ ಕೇಳುತ್ತಿದ್ದರು. ‘ರೂಪಾಯಿ ಐಸಿಯುನಲ್ಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಹೇಳಿಕೆಯನ್ನು ಈ ವೇಳೆ ಅವರು ಉಲ್ಲೇಖಿಸಿದರು.

ಆಗ ಮಧ್ಯಪ್ರವೇಶಿಸಿದ ಸ್ಪೀಕರ್‌, ರೆಡ್ಡಿ ಮಾತಿಗೆ ಆಕ್ಷೇಪಿಸಿದರು. ಪ್ರಶ್ನೆಯನ್ನು ಮಾತ್ರ ಕೇಳಲು ಅವರಿಗೆ ತಿಳಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೆಡ್ಡಿ, ‘ಸರ್, ನೀವು ನನಗೆ ಅಡ್ಡಿಪಡಿಸಲಾಗದು’ ಎಂದು ಹೇಳಿದರು!

ಸ್ಪೀಕರ್ ವಿರುದ್ಧ ಹೀಗೆ ಮಾತನಾಡದಂತೆ ಎಚ್ಚರಿಕೆ ನೀಡಿದ ಬಿರ್ಲಾ, ರೆಡ್ಡಿ ಅವರಿಗೆ ಪ್ರಶ್ನೆ ಕೇಳಲು ಅವಕಾಶ ಮಾಡಿಕೊಟ್ಟರು.

ರೆಡ್ಡಿ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ‘ಕಾಂಗ್ರೆಸ್ ಸದಸ್ಯರು ‘ಕಳಪೆ ಹಿಂದಿ’ಯಲ್ಲಿ ಕೇಳಿದ ಪ್ರಶ್ನೆಗೆ ನಾನೂ ‘ಕಳಪೆ ಹಿಂದಿ’ಯಲ್ಲೇ ಉತ್ತರವನ್ನು ನೀಡುತ್ತೇನೆ’ ಎಂದರು!

ಈ ಹಿಂದೆ ಡಾಲರ್ ಎದುರು ರೂಪಾಯಿ ಅಪಮೌಲ್ಯಗೊಂಡಿದ್ದರ ಬಗ್ಗೆ ಮೋದಿಯವರು ಮಾಡಿದ್ದ ಟೀಕೆಗಳನ್ನು ಉಲ್ಲೇಖಿಸಿದ ಕಾಂಗ್ರೆಸ್ ಸದಸ್ಯರು, ಆ ಕಾಲದ ಆರ್ಥಿಕ ಸೂಚಕಗಳನ್ನೂ ಉಲ್ಲೇಖಿಸಬೇಕಿತ್ತು. ಆಗ ಭಾರತದ ಆರ್ಥಿಕತೆಯು ಖಂಡಿತವಾಗಿಯೂ ಐಸಿಯುನಲ್ಲಿತ್ತು. ಭಾರತದ ಆರ್ಥಿಕತೆಯನ್ನು ದುರ್ಬಲ ಐದರ ಪಟ್ಟಿಯಲ್ಲಿ ಇರಿಸಲಾಗಿತ್ತು’ ಎಂದು ಅವರು ತಿರುಗೇಟು ನೀಡಿದರು.

ಸಾಂಕ್ರಾಮಿಕ ರೋಗ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಹೊರತಾಗಿಯೂ ಭಾರತ ಇಂದು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ ಎಂದು ಅವರು ಪ್ರತಿಪಾದಿಸಿದರು.

‘ಇದು ಹೆಮ್ಮೆಯ ವಿಷಯ. ಆದರೆ ಅವರು (ಕಾಂಗ್ರೆಸ್‌ ಸದಸ್ಯರು) ಗೇಲಿ ಮಾಡುತ್ತಿದ್ದಾರೆ. ನಮ್ಮ ಆರ್ಥಿಕತೆಯು ಉತ್ತಮವಾಗಿರುವಾಗ ಅವರು ಅಸೂಯೆಯಿಂದ ಇಂತಹ ವಿಷಯಗಳನ್ನು ಮಾತನಾಡುತ್ತಿರುವುದು ದುಃಖಕರ‘ ಎಂದು ನಿರ್ಮಲಾ ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT