ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈ ರೀತಿಯ ಶಿಸ್ತಿನ ಪ್ರತಿಭಟನೆಯನ್ನು ನಾನು ನೋಡಿಯೇ ಇಲ್ಲ: ರೈತರನ್ನು ಕೊಂಡಾಡಿದ ಹೂಡ

Last Updated 11 ಡಿಸೆಂಬರ್ 2021, 14:27 IST
ಅಕ್ಷರ ಗಾತ್ರ

ಚಂಡೀಗಡ: ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಕಳೆದ ಒಂದು ವರ್ಷದಿಂದ ನಡೆದ ಪ್ರತಿಭಟನೆಗೆ 'ಜಯ' ದೊರೆತಿರುವುದಕ್ಕೆ ಕಾಂಗ್ರೆಸ್ ನಾಯಕ ಭೂಪಿಂದರ್ ಸಿಂಗ್ ಹೂಡಾ ರೈತರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

'ಈ ರೀತಿಯ ದೀರ್ಘ ಮತ್ತು ಶಿಸ್ತುಬದ್ಧ ಪ್ರತಿಭಟನೆಯನ್ನು ನಾನು ನೋಡಿಯೇ ಇಲ್ಲ. ಒಂದು ವರ್ಷಕ್ಕೂ ಅಧಿಕ ಕಾಲ ಚಳಿ, ಬಿಸಿಲು, ಮಳೆ, ಬಿರುಗಾಳಿ ಮತ್ತು ಕಷ್ಟದ ಪರಿಸ್ಥಿತಿಯಲ್ಲೂ ಪ್ರತಿಭಟನೆ ನಡೆಸಿದ ರೈತರು ಹಗಲು ಮತ್ತು ರಾತ್ರಿಗಳನ್ನು ರಸ್ತೆ ಬದಿಯಲ್ಲಿ ಕಳೆದಿದ್ದಾರೆ' ಎಂದು ಹೇಳಿದರು.

'ಅಧಿಕಾರದಲ್ಲಿರುವವರಿಂದ ರೈತರು ಕಿರುಕುಳ ಮತ್ತು ಅವಮಾನಕ್ಕೊಳಗಾದರು. ಅವರ ಮೇಲೆ ಲಾಠಿ ಚಾರ್ಜ್, ಅಶ್ರುವಾಯು, ಜಲಫಿರಂಗಿ, ಮೊಳೆಗಳ ಪ್ರಯೋಗ, ದೆಹಲಿ ಗಡಿಯಿಂದ ಒಳಗೆ ಪ್ರವೇಶಿಸದಂತೆ ಕಾಲುವೆ ತೋಡುವುದು ಸೇರಿದಂತೆ ಪ್ರತಿಭಟನಾ ವಿರೋಧಿ ಕ್ರಮಗಳನ್ನು ರೈತರ ಮೇಲೆ ಹೇರಲಾಯಿತು. ಹೀಗಿದ್ದರೂ ರೈತರು ಶಾಂತಿ, ಸತ್ಯ ಮತ್ತು ಅಹಿಂಸಾ ಮಾರ್ಗದಿಂದಲೇ ಪ್ರತಿಭಟನೆ ನಡೆಸಿದರು. ಈ ಗೆಲುವಿನಿಂದಾಗಿ ಇಡೀ ದೇಶದಲ್ಲಿ ಸಂತಸದ ವಾತಾವರಣವಿದೆ' ಎಂದರು.

'ರೈತರು ತಮ್ಮ ಗ್ರಾಮಗಳಿಗೆ ಹಿಂದಿರುಗಿದ್ದನ್ನು ಮತ್ತು ಅವರಿಗೆ ಹೃದಯ ಪೂರ್ವಕ ಸ್ವಾಗತ ಕೋರಿದ್ದನ್ನು ನೋಡಿ ನನಗೆ ಖುಷಿಯಾಗಿದೆ. ಸರ್ಕಾರ ತಾನು ಭರವಸೆ ನೀಡಿರುವಂತೆ ಪ್ರತಿಭಟನಾನಿರತ ರೈತರ ಮೇಲೆ ದಾಖಲಿಸಿದ್ದ ಎಲ್ಲ ಪ್ರಕರಣಗಳನ್ನು ಕೂಡಲೇ ಹಿಂಪಡೆಯಬೇಕು' ಎಂದು ಹೂಡಾ ಒತ್ತಾಯಿಸಿದರು.

'ರೈತರು ಬೇಡಿಕೆಯಿಟ್ಟಿರುವ ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಖಾತ್ರಿ ನೀಡುವುದರೊಂದಿಗೆ, ಪ್ರತಿಭಟನೆ ವೇಳೆ ಸಾವಿಗೀಡಾದ ರೈತರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗ ಮತ್ತು ಆರ್ಥಿಕ ನೆರವನ್ನು ನೀಡಬೇಕು' ಎಂದು ಆಗ್ರಹಿಸಿದ್ದಾರೆ.

'ಕೃಷಿಯನ್ನು ಲಾಭದಾಯಕ ಉದ್ಯಮವನ್ನಾಗಿ ಮಾಡಬೇಕು ಮತ್ತು ಭವಿಷ್ಯದಲ್ಲಿ ಸರ್ಕಾರವು ನೀತಿಗಳನ್ನು ರೂಪಿಸುವಾಗ ಅನ್ನದಾತ ಮತ್ತೆ ರಸ್ತೆಗಿಳಿಯುವಂತೆ ಮಾಡಬಾರದು. ಕಳೆದ ಒಂದು ವರ್ಷದಿಂದ ಪ್ರತಿಭಟನೆ ವೇಳೆ ದೇಶದ ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಇದು ಮತ್ತೆ ಪುನರಾವರ್ತನೆಯಾಗಬಾರದು' ಎಂದರು.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಿರುವ ಕೇಂದ್ರ, ಬೆಳೆಗಳಿಗೆ ಕನಿಷ್ಠ ಬೆಂಬಲ (ಎಂಎಸ್‌ಪಿ) ಬೆಲೆ ನಿಗದಿ ಮಾಡುವುದಾಗಿ ರೈತರಿಗೆ ಭರವಸೆ ನೀಡಿದೆ. ಹೀಗಾಗಿ ಒಂದು ವರ್ಷಗಳಿಗೂ ಅಧಿಕ ಕಾಲ ನಡೆದ ಪ್ರತಿಭಟನೆಯನ್ನು ಹಿಂಪಡೆಯಲು ರೈತ ಸಂಘಟನೆಯಾದ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ನಿರ್ಧರಿಸಿತು. ಹೀಗಾಗಿ ಡಿ. 11ರಂದು ರೈತರು ಹೋರಾಟದ ಸ್ಥಳದಿಂದ ತಮ್ಮ 'ಊರುಗಳತ್ತ ವಿಜಯ ಯಾತ್ರೆ' ಕೈಗೊಂಡರು. ಈ ವೇಳೆ ರೈತರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT