ಸೋಮವಾರ, ಜೂನ್ 14, 2021
21 °C

ಈಶಾನ್ಯದಲ್ಲಿ ಬಿಜೆಪಿ ಕಟ್ಟಿದ ಹಿಮಂತ

ಸುಮೀರ್‌ ಕರ್ಮಾಕರ್‌ Updated:

ಅಕ್ಷರ ಗಾತ್ರ : | |

Prajavani

ಗುವಾಹಟಿ: ದೀರ್ಘ ಕಾಲದವರೆಗೆ ಕಾಂಗ್ರೆಸ್‌ನಲ್ಲಿದ್ದ ಹಿಮಂತ ಬಿಸ್ವ ಶರ್ಮಾ, ತರುಣ್‌ ಗೊಗೊಯಿ ಅವರ ವಿಶ್ವಾಸಾರ್ಹ ಸಾಥಿಯೂ ಆಗಿದ್ದರು. ಆದರೆ, ಕೆಲವು ವರ್ಷಗಳ ಹಿಂದೆ ಗೊಗೊಯಿ ವಿರುದ್ಧವೇ ಬಂಡಾಯ ಸಾರಿದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಬಂಡಾಯವನ್ನು ನಡೆಸಿ, 2015ರ ಆಗಸ್ಟ್‌ನಲ್ಲಿ ಪಕ್ಷ ತ್ಯಜಿಸಿ ಬಿಜೆಪಿ ಸೇರಿದರು.

‘2016ರ ಚುನಾವಣೆಗೂ ಮುನ್ನ ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂಬುದು ಶರ್ಮಾ ಅವರ ಬೇಡಿಕೆಯಾಗಿತ್ತು’ ಎಂದು ಗೊಗೊಯಿ ಅವರು ಆಗ ಆರೋಪಿಸಿದ್ದರು. ಆದರೆ, ಆ ಆಸೆ ಈಡೇರಲಿಲ್ಲ. ಕೊನೆಗೆ ತಮ್ಮ ಕೆಲವು ವಿಶ್ವಾಸಾರ್ಹ ಶಾಸಕರ ಜತೆಗೆ ಅವರು ಬಿಜೆಪಿ ಸೇರ್ಪಡೆಯಾಗಿದ್ದರು. ಇದಾಗಿ ನಾಲ್ಕು ತಿಂಗಳ ನಂತರ ‘ಸರ್ವಾನಂದ ಸೋನೊವಾಲ್ ಅವರೇ ನಮ್ಮ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ’ ಎಂದು ಬಿಜೆಪಿ ಘೋಷಿಸಿತು. ಅದರೊಂದಿಗೆ ‘ಮುಖ್ಯಮಂತ್ರಿ ಆಗಬೇಕು’ ಎಂಬ ಶರ್ಮಾ ಅವರ ಆಸೆಗೆ ತಣ್ಣೀರು ಎರಚಿದಂತಾಯಿತು. 2016ರಲ್ಲಿ ಕಾಂಗ್ರೆಸ್‌ನಿಂದ ಅಧಿಕಾರವನ್ನು ಕಸಿದುಕೊಂಡ ಬಿಜೆಪಿ, ಅಸ್ಸಾಂನಲ್ಲಿ ತನ್ನ ಮೊದಲ ಸರ್ಕಾರವನ್ನು ರಚಿಸಿತು. ಸೋನೊವಾಲ್‌ ಅವರು ಮುಖ್ಯಮಂತ್ರಿಯಾದರು. 

ಮುಖ್ಯಮಂತ್ರಿಯಾಗಬೇಕು ಎಂಬ ಶರ್ಮಾ ಅವರ ಕನಸು ಈಗ ಸಾಕಾರಗೊಳ್ಳಲಿದೆ. ಬಿಜೆಪಿಯ ನೂತನ ಶಾಸಕರ ಸಭೆಯಲ್ಲಿ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. 

2016ರ ನಂತರ ಅಸ್ಸಾಂನಲ್ಲಿ ನಡೆದ ಎಲ್ಲಾ ಚುನಾವಣೆಗಳಲ್ಲಿ ಬಿಜೆಪಿಯು ಗೆಲುವು ಸಾಧಿಸಿರುವುದರ ಹಿಂದೆ ಶರ್ಮಾ ಅವರ ಶ್ರಮ ಇದೆ. ಚುನಾವಣಾ ಕಾರ್ಯತಂತ್ರದಲ್ಲಿ ಉತ್ತಮ ಸಾಧನೆ ತೋರಿಸಿರುವ ಶರ್ಮಾ ಅವರು, ಸಹಜವಾಗಿಯೇ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿಯ ಅತಿ ಪ್ರಭಾವಿ ನಾಯಕನಾಗಿ ಹೊರ ಹೊಮ್ಮಿದ್ದಾರೆ.

1969ರಲ್ಲಿ ಜನಿಸಿದ ಹಿಮಂತ ಅವರು ಕಾಂಗ್ರೆಸ್ ಸೇರುವುದಕ್ಕೂ ಮುನ್ನ, ಆಲ್‌ ಅಸ್ಸಾಂ ಸ್ಟೂಡೆಂಟ್ಸ್‌ ಯೂನಿಯನ್‌ನ ಕಾರ್ಯಕರ್ತರಾಗಿದ್ದರು. 1996ರಲ್ಲಿ ಜಾಲುಕ್‌ಬರಿ ಕ್ಷೇತ್ರದಿಂದ ಮೊದಲಬಾರಿಗೆ ಎಜಿಪಿಯ ಬಲಿಷ್ಠ ಸ್ಪರ್ಧಿ ಭೃಗುಕುಮಾರ್‌ ಫುಕನ್‌ ವಿರುದ್ಧ ಸ್ಪರ್ಧಿಸಿ ಸೋತಿದ್ದರು. 2001ರಲ್ಲಿ ಅದೇ ಕ್ಷೇತ್ರದಲ್ಲಿ ಫುಕನ್‌ ಅವರನ್ನು ಸೋಲಿಸಿದರು. ಅಲ್ಲಿಂದ ಸತತವಾಗಿ ಐದನೇ ಬಾರಿಗೆ ಅದೇ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.

2002ರಲ್ಲಿ ತರುಣ್‌ ಗೊಗೊಯಿ ನೇತೃತ್ವದ ಸರ್ಕಾರದಲ್ಲಿ ಅವರು ಮೊದಲ ಬಾರಿಗೆ ಮಂತ್ರಿಯಾದರು. ಆನಂತರ ಆರೋಗ್ಯ, ಶಿಕ್ಷಣ, ಮಾಹಿತಿ ತಂತ್ರಜ್ಞಾನ, ಗುವಾಹಟಿ ಅಭಿವೃದ್ಧಿ ಮತ್ತು ಅಸ್ಸಾಂ ಒಪ್ಪಂದ ಮುಂತಾದ ಸಚಿವಾಲಯಗಳನ್ನು ನಿರ್ವಹಿಸಿದರು. ಸೋನೊವಾಲ್‌ ನೇತೃತ್ವದ ಸರ್ಕಾರದಲ್ಲಿ ಶರ್ಮಾ ಅವರು ಹಣಕಾಸು , ಶಿಕ್ಷಣ, ಆರೋಗ್ಯ ಹಾಗೂ ಲೋಕೋಪಯೋಗಿ ಖಾತೆಗಳನ್ನು ನಿರ್ವಹಿಸಿದ್ದರು. ಪಿಎಚ್‌.ಡಿ ಮಾಡಿರುವ ಶರ್ಮಾ ಅವರು, ಅಸ್ಸಾಂ ಭಾಷೆಯಲ್ಲಿ ನಾಲ್ಕು ಕೃತಿಗಳನ್ನು ಸಹ ರಚಿಸಿದ್ದಾರೆ.

ಹಿಂದುತ್ವದ ಮುಖ
ಬಿಜೆಪಿ ವಿರುದ್ಧ ಸೆಣಸಲು ಕಾಂಗ್ರೆಸ್‌ ಪಕ್ಷವು ಏಳು ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಹೆಣೆದುಕೊಂಡಿತ್ತು. ಬಿಜೆಪಿಯ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದ ಶರ್ಮಾ ಅವರು ಹಿಂದುತ್ವದ ಕಾರ್ಯಸೂಚಿಯನ್ನು ಮುಂದಿಟ್ಟುಕೊಂಡೇ ಮತಗಳ ಧ್ರುವೀಕರಣ ಮಾಡಿ ಯಶಸ್ಸು ಕಂಡಿದ್ದರು. ಇದರಿಂದ ಸಹಜವಾಗಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಹೊಗಳಿಕೆಗೆ ಪಾತ್ರರಾಗಿದ್ದಾರೆ.

ಭ್ರಷ್ಟಾಚಾರದ ಆರೋಪ
2015ರಲ್ಲಿ ಶರ್ಮಾ ಅವರು ಬಿಜೆಪಿ ಸೇರುವುದಕ್ಕೂ ಕೆಲವೇ ತಿಂಗಳುಗಳ ಹಿಂದೆ, ಅಮೆರಿಕ ಮೂಲದ ಒಂದು ಸಂಸ್ಥೆಯೂ ಒಳಗೊಂಡ ನೀರು ಸರಬರಾಜು ಯೋಜನೆ ಹಾಗೂ ಶಾರದಾ ಹಗರಣದಲ್ಲಿ ಕಾಂಗ್ರೆಸ್‌ ನಾಯಕರ ವಿರುದ್ಧ ಕೆಲವು ಆರೋಪಗಳನ್ನು ಬಿಜೆಪಿಯು ಮಾಡಿತ್ತು. ಆ ನಾಯಕರ ಪಟ್ಟಿಯಲ್ಲಿ ಶರ್ಮಾ ಅವರ ಹೆಸರೂ ಇತ್ತು. ಗೊಗೊಯಿ ಅವಧಿಯಲ್ಲಿ ಭಾರಿ ಸದ್ದು ಮಾಡಿದ್ದ ₹ 1000 ಕೋಟಿ ಮೌಲ್ಯದ ಹಗರಣವೊಂದರಲ್ಲೂ ಶರ್ಮಾ ಅವರ ಹೆಸರೂ ಇತ್ತು. ಆದರೆ ಬಿಜೆಪಿಯಲ್ಲಿ ಶರ್ಮಾ ಅವರ ಪ್ರಭಾವ ಹೆಚ್ಚುತ್ತಿದ್ದಂತೆ ಆರೋಪಗಳು ಧ್ವನಿ ಕಡಿಮೆಯಾಗುತ್ತಾ ಬಂದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು