ಭಾನುವಾರ, ಮಾರ್ಚ್ 26, 2023
23 °C
ಅಧಿಕಾರ ಸ್ವೀಕರಿಸಿದ ರಾಜ್ಯದ ಸಚಿವರು

ಸಮರ್ಥ ನಿರ್ವಹಣೆ, ಉತ್ತಮ ಸೇವೆಯ ಭರವಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೇಂದ್ರ ಸಚಿವರಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿರುವ ರಾಜ್ಯದ ಸಂಸದರಾದ ಎ.ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ, ಭಗವಂತ ಖೂಬಾ ಮತ್ತು ರಾಜೀವ್‌ ಚಂದ್ರಶೇಖರ್‌ ಗುರುವಾರ ಅಧಿಕಾರ ಸ್ವೀಕರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುವ ಭರವಸೆ ನೀಡಿದರು.

ಕೃಷಿ ಕಾಯ್ದೆಯ ಅರಿವು: ಕೇಂದ್ರವು ರೈತರ ಹಿತದೃಷ್ಟಿಯಿಂದ ಜಾರಿಗೆ ತಂದಿರುವ ನೂತನ ಕೃಷಿ ಕಾಯ್ದೆಯ ಬಗ್ಗೆ ಅರಿವು ಮೂಡಿಸುವ ಉದ್ದೇಶ ಹೊಂದಿದ್ದಾಗಿ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.

ನೂತನ ಕೃಷಿ ಕಾಯ್ದೆಯನ್ನು ರಾಜಕೀಯ ಕಾರಣಗಳಿಂದ ಕೆಲವರು ವಿರೋಧಿಸುತ್ತಿದ್ದಾರೆ. ದೇಶದಾದ್ಯಂತ ಪ್ರವಾಸ ಮಾಡಿ, ಈ ಕಾಯ್ದೆಗಳಿಂದ ಉಂಟಾಗುವ ಅನುಕೂಲತೆಗಳ ಕುರಿತು ಕೃಷಿಕರಲ್ಲಿ ತಿಳಿವಳಿಕೆ ಮೂಡಿಸಲಾಗುವುದು ಎಂದರು.

‘ರೈತರ ಆದಾಯ ದ್ವಿಗುಣಗೊಳಿಸಬೇಕು ಎಂಬುದು ಪ್ರಧಾನಿ ಮೋದಿ ಅವರ ಕನಸಾಗಿದ್ದು, ಅದನ್ನು ಸಾಕಾರಗೊಳಿಸಲು ಪ್ರಯತ್ನಿಸುವೆ. ಪ್ರವಾಹ, ಬರಗಾಲ, ಕೃಷಿ ಉತ್ಪನ್ನಗಳ ದರ ಕುಸಿತದ ಸಂದರ್ಭ ರೈತರು ಎದುರಿಸುವ ಸಮಸ್ಯೆಗಳ ಪರಿಹಾರಕ್ಕೆ ಶ್ರಮಿಸುವೆ’ ಎಂದು ಅವರು ಭರವಸೆ ನೀಡಿದರು.

ಯೋಜನೆಗಳ ಪ್ರಚಾರ ಅಗತ್ಯ:ಕೇಂದ್ರ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಹಾಗೂ ಯುವಜನತೆಗೆ ಅನುಕೂಲ ಕಲ್ಪಿಸಲು ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ರಾಜ್ಯಗಳಲ್ಲಿ ಪ್ರಚಾರ ಕೈಗೊಳ್ಳುವ ಅಗತ್ಯವಿದೆ ಎಂದು ಸಾಮಾಜಿಕ ನ್ಯಾಯ ಹಾಗೂ ಸಬಲೀಕರಣ ಖಾತೆ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಅಭಿಪ್ರಾಯಪಟ್ಟರು.

‘ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದವರಿಗಾಗಿ ಕೇಂದ್ರವು ವಸತಿಯುತ ಶಾಲೆಗಳನ್ನು ತೆರೆದಿದೆ. ಸ್ವಯಂ ಉದ್ಯೋಗಕ್ಕಾಗಿ ಸಾಲ ಸೌಲಭ್ಯ ನೀಡಲಾಗುತ್ತಿದೆ. ಅಂಗವಿಕಲರಿಗೆ ಅನೇಕ ಕಾರ್ಯಕ್ರಮಗಳಿವೆ. ಹಿರಿಯ ನಾಗರಿಕರಿಗೂ ಸೌಲಭ್ಯಗಳಿವೆ. ಈ ಬಗ್ಗೆ ಆಯಾ ರಾಜ್ಯ ಸರ್ಕಾರಗಳು ಪ್ರಚಾರ ನೀಡದ್ದರಿಂದ ಪ್ರಯೋಜನ ದೊರೆಯುತ್ತಿಲ್ಲ. ಈ ಕೊರತೆ ನೀಗಿಸುವುದು ನನ್ನ ಗುರಿ’ ಎಂದು ಅವರು ಹೇಳಿದರು.

ಕೌಶಲಾಭಿವೃದ್ಧಿ ತರಬೇತಿಗೆ ಕ್ರಮ:
ಯುವಜನರಿಗೆ ಕೌಶಲ್ಯಾಧಾರಿತ ಉದ್ಯೋಗ ನೀಡುವುದು ಕೇಂದ್ರದ ಗುರಿ. ಯುವಜನ ದೇಶದ ಭವಿಷ್ಯ. ಅವರ ಅಭ್ಯುದಯಕ್ಕೆ ಅಗತ್ಯ ತರಬೇತಿ ಒದಗಿಸುವ ಉದ್ದೇಶ ಇಲಾಖೆಯದ್ದು ಎಂದು ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದರು.

‘ನಿರುದ್ಯೋಗ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕೌಶಲ್ಯ ಅಭಿವೃದ್ಧಿಪಡಿಸುವುದು ಸಚಿವಾಲಯದ ಪ್ರಮುಖ ಕೆಲಸ. ಯುವಸಮೂಹದ ಉತ್ತಮ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಶಕ್ತಿ ಮೀರಿ ಶ್ರಮಿಸಲಾಗುವುದು’ ಎಂದು ಅವರು ಹೇಳಿದರು.

ಜನರ ಆಶಯಕ್ಕೆ ತಕ್ಕಂತೆ ಕೆಲಸ: ಸಚಿವ ಸ್ಥಾನ ದೊರೆಯಲು ಕಾರಣವಾದ ಬೀದರ್‌ ಕ್ಷೇತ್ರದ ಜನರಿಗೆ ಚ್ಯುತಿ ಬಾರದಂತೆ, ಅವರ ಆಶಯಕ್ಕೆ ತಕ್ಕಂತೆ ಕೆಲಸ ಮಾಡುವೆ’ ಎಂದು ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ವಿಶ್ವಾಸ ವ್ಯಕ್ತಪಡಿಸಿದರು.

‘ರೈತರ ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸುತ್ತಿರುವ ಪ್ರಧಾನಿ ಮೋದಿ ಅವರೊಂದಿಗೆ ಕೈಜೋಡಿಸುವೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.