ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುರುಕಿನತ್ತ ಆಡಳಿತ- ಅನಗತ್ಯ ವೆಚ್ಚ ಕಡಿತ: ಮುಖ್ಯಮಂತ್ರಿ‌‌‌‌‌‌ ಬಸವರಾಜ ಬೊಮ್ಮಾಯಿ

ಮೊದಲ ಸಭೆಯಲ್ಲೇ ಅಧಿಕಾರಿಗಳಿಗೆ ಚಾಟಿ ಬೀಸಿದ ಮುಖ್ಯಮಂತ್ರಿ‌‌‌‌‌‌ ಬಸವರಾಜ ಬೊಮ್ಮಾಯಿ
Last Updated 29 ಜುಲೈ 2021, 18:44 IST
ಅಕ್ಷರ ಗಾತ್ರ

ಬೆಂಗಳೂರು: ದೀನ ದಲಿತರ ಕಲ್ಯಾಣಕ್ಕೆ ಒತ್ತು, ವಿಶ್ವಾಸಾರ್ಹ, ದಕ್ಷ, ಪ್ರಾಮಾಣಿಕ, ಜನಪರ ಆಡಳಿತ ನೀಡುವುದು ಹಾಗೂ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವುದು ನನ್ನ ಸರ್ಕಾರದ ಆದ್ಯತೆ ಎಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಪಾದಿಸಿದರು.

‘ಏನೇ ಮಾಡಿದರೂ ನಡೆಯುತ್ತದೆ (ಚಲ್ತಾ ಹೈ) ಎಂಬ ಅಧಿಕಾರಿಗಳ ಧೋರಣೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ’ ಎಂದು ಕಾರ್ಯಭಾರ ವಹಿಸಿಕೊಂಡ ಮೊದಲ ದಿನವೇ ಅವರು ಅಧಿಕಾರಿಗಳ ಮೇಲೆ ಚಾಟಿ ಬೀಸಿದರು.

ರಾಜಭವನದಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ದೀನ ದಲಿತರು, ಕೂಲಿಕಾರರು, ಸಮಾಜದ ಕಟ್ಟ ಕಡೆಯ ಜನರಿಗೂ ಸರ್ಕಾರ ತಮ್ಮ ಪರ ಇದೆ ಎಂಬ ಭಾವನೆ ಬರುವಂತೆ ಪರಿಣಾಮಕಾರಿ ಆಡಳಿತ ನೀಡಲಾಗುವುದು. ಸರ್ಕಾರ ಕೇವಲ ಆದೇಶಗಳನ್ನು ಹೊರಡಿಸುವುದು ಮಾತ್ರವಲ್ಲ, ಆದೇಶವು ಅನುಷ್ಠಾನಗೊಳ್ಳುವಂತೆ ನೋಡಿಕೊಳ್ಳಲಾಗುವುದು. ಆ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಅವರು ಭರವಸೆ ನೀಡಿದರು.

‘ಅಧಿಕಾರಿಗಳು ದಕ್ಷತೆಯಿಂದ ಕೆಲಸ ಮಾಡಬೇಕು. ಏನು ಮಾಡಿದರೂ ನಡೆಯುತ್ತದೆ ಎಂಬ ಧೋರಣೆ ಸಹಿಸುವುದಿಲ್ಲ. ನಿಮ್ಮ ಬಳಿ ಉತ್ತಮ ಆಡಳಿತಕ್ಕೆ ಯಾವುದೇ ಸಲಹೆ– ಸೂಚನೆ ಇದ್ದರೆ ನೇರವಾಗಿ ನನ್ನ ಕಚೇರಿಗೆ ಬರಬಹುದು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಪ್ರತಿ ಅಧಿಕಾರಿಯ ಕ್ಷಮತೆಯನ್ನು ಗುರುತಿಸಿ ಅವರಿಗೆ ಸೂಕ್ತ ಆದ್ಯತೆ ನೀಡಲಾಗುವುದು’ ಎಂದು ತಿಳಿಸಿದರು.

‘ಸರ್ಕಾರದ ಎಲ್ಲ ಕಾರ್ಯಕ್ರಮಗಳು ಸಮಯಬದ್ಧವಾಗಿ ಅನುಷ್ಠಾನ ಆಗಬೇಕು. ಅನುಷ್ಠಾನದಲ್ಲಿ ತಡವಾಗುವುದು ಭ್ರಷ್ಟಾಚಾರಕ್ಕೆ ಮತ್ತು ವೆಚ್ಚ ಹಲವು ಪಟ್ಟು ಹೆಚ್ಚಾಗಲು ಕಾರಣವಾಗುತ್ತಿದೆ. ಇದಕ್ಕೆ ಅವಕಾಶ ನೀಡುವುದಿಲ್ಲ’ ಎಂದೂ ಬೊಮ್ಮಾಯಿ ಖಡಕ್ ಸಂದೇಶ ನೀಡಿದರು.

‘ಆಡಳಿತದಲ್ಲಿ ದಕ್ಷತೆ ಮತ್ತು ಚುರುಕು ಮೂಡಿಸಲಾಗುವುದು. ಜನಸಾಮಾನ್ಯರಿಗೆ ಸರ್ಕಾರದ ಎಲ್ಲ ಸೌಲಭ್ಯಗಳನ್ನು ತಲುಪಿಸಲಾಗುವುದು. ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದರು.

ಅನಗತ್ಯ ವೆಚ್ಚಕ್ಕೆ ಕಡಿವಾಣ: ‘ಕೋವಿಡ್‌ ಕಾರಣ ಹಣಕಾಸಿನ ತೊಂದರೆ ಆಗಿದೆ. ವಿತ್ತೀಯ ಕ್ಷೇತ್ರದಲ್ಲಿ ಶಿಸ್ತು ತರುವ ಅಗತ್ಯವಿದೆ. ಆದ್ದರಿಂದ, ಎಲ್ಲ ಇಲಾಖೆಗಳಲ್ಲಿ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಲು ಸೂಚಿಸಿದ್ದೇನೆ. ಮಾರ್ಚ್‌ 31 ರೊಳಗೆ ಕನಿಷ್ಠ ಶೇ 5 ರಷ್ಟು ವೆಚ್ಚವನ್ನು ಕಡಿತ ಮಾಡಬೇಕು. ಈ ಪ್ರಮಾಣವನ್ನು ಇನ್ನೂ ಹೆಚ್ಚಿಸಿದರೆ ಒಳ್ಳೆಯದು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದರು.

‘ಆರ್ಥಿಕ ಸ್ಥಿತಿಗತಿಯನ್ನು ಉತ್ತಮಪಡಿಸಲಾಗುವುದು. ಯೋಜಿತ ವೆಚ್ಚಗಳು ಮತ್ತು ಬದ್ಧತಾ ವೆಚ್ಚಗಳನ್ನು ಸರಿದೂಗಿಸಿ, ಆರ್ಥಿಕ ಶಿಸ್ತು ಕಾಪಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.

‘ಪ್ರವಾಹ ಮತ್ತು ಕೋವಿಡ್‌ ಎರಡು ತಕ್ಷಣದ ಆದ್ಯತೆಗಳು. ಕೋವಿಡ್‌ ಮೊದಲ ಅಲೆ ಮತ್ತು ಎರಡನೇ ಅಲೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದೆ. ಎಲ್ಲರಿಗೂ ಕೋವಿಡ್‌ ಲಸಿಕೆ ನೀಡಲು ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು’ ಎಂದರು.

‘ಯಡಿಯೂರಪ್ಪ ಮಾರ್ಗದರ್ಶನ ಪಡೆದು ಎಂದರೆ ಅವರ ಕೈಗೊಂಬೆಯಾಗಿ ಕಾರ್ಯನಿರ್ವಹಿಸುವುದಾ’ ಎಂಬ ಪ್ರಶ್ನೆಗೆ, ‘ಯಡಿಯೂರಪ್ಪ ಮಾರ್ಗದರ್ಶನ ಎಂದರೆ ಅವರು ಮುಖ್ಯಮಂತ್ರಿ ಆಗಿದ್ದಾಗ, ಪ್ರವಾಹ, ಕೋವಿಡ್‌ ಸನ್ನಿವೇಶವನ್ನು ನಿಭಾಯಿಸಿದ್ದು, ಆರ್ಥಿಕ ಸಂಕಷ್ಟದಲ್ಲಿದಲ್ಲಿದ್ದವರಿಗೆ ಪ್ಯಾಕೇಜ್‌ ನೀಡಿದ್ದು’ ಎಂದರು.

‘ಒಂದು ತಂಡವಾಗಿ ಕೆಲಸ ಮಾಡ್ತೇವೆ’

‘ಸಂಪುಟ ವಿಸ್ತರಣೆ ಆದ ಬಳಿಕ ನಾವೆಲ್ಲರೂ ಒಂದು ತಂಡವಾಗಿ ಕೆಲಸ ಮಾಡುತ್ತೇವೆ. ತಂಡದ ಎಲ್ಲ ಸದಸ್ಯರೂ ಸಮಾನ. ಸಂವಿಧಾನ ವ್ಯವಸ್ಥೆಯಲ್ಲಿ ಮುಖ್ಯಮಂತ್ರಿ ಎನ್ನುವುದು ಮುಖ್ಯ ಹುದ್ದೆ. ಆದರೆ, ನಮ್ಮ ತಂಡವೇ ಶಕ್ತಿ ಕೇಂದ್ರದಂತೆ ಕಾರ್ಯ ನಿರ್ವಹಿಸುತ್ತದೆ. ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತೇನೆ’ ಎಂದು ಬೊಮ್ಮಾಯಿ ಹೇಳಿದರು.

15 ದಿನಗಳಲ್ಲಿ ‘ಕಡತ ಯಜ್ಞ’

‘ಮುಂದಿನ 15 ದಿನಗಳಲ್ಲಿ ವಿಲೇವಾರಿ ಆಗದೇ ಇರುವ ಎಲ್ಲ ಇಲಾಖೆಗಳ ಕಡತಗಳನ್ನು ವಿಲೇವಾರಿ ಮಾಡಲು ಮುಖ್ಯ ಕಾರ್ಯದರ್ಶಿಯವರಿಗೆ ಸೂಚಿಸಿದ್ದೇನೆ’ ಎಂದು ಬೊಮ್ಮಾಯಿ ಹೇಳಿದರು.

‘ಎಷ್ಟು ಕಡತಗಳು ಬಾಕಿ ಇವೆ ಎಂಬುದು ಗೊತ್ತಿಲ್ಲ. ಎರಡು ದಿನಗಳಲ್ಲಿ ಆ ಕುರಿತ ಮಾಹಿತಿ ನೀಡುವಂತೆ ಸೂಚಿಸಿದ್ದೇನೆ. 15 ದಿನಗಳಲ್ಲಿ ಎಲ್ಲವನ್ನೂ ವಿಲೇವಾರಿ ಮಾಡಿ ಆಯಾ ದಿನದ ಕಡತಗಳು ಮಾತ್ರ ಇರಬೇಕು’ ಎಂಬುದಾಗಿ ನಿರ್ದೇಶನ ನೀಡಿದ್ದೇನೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT