ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ: ಮಕ್ಕಳಲ್ಲಿ ಹೆಚ್ಚುತ್ತಿದೆ ಬೊಜ್ಜು

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯಿಂದ ಬಹಿರಂಗ
Last Updated 28 ನವೆಂಬರ್ 2021, 13:37 IST
ಅಕ್ಷರ ಗಾತ್ರ

ನವದೆಹಲಿ: ದೇಶದ 33 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಐದು ವರ್ಷದೊಳಗಿನ ಮಕ್ಕಳಲ್ಲಿ ಬೊಜ್ಜು ಹೆಚ್ಚಾಗುತ್ತಿರುವುದರಿಂದ, ಸ್ಥೂಲಕಾಯದ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿದೆ ಎಂದು ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (ಎನ್‌ಎಫ್‌ಎಚ್‌ಎಸ್–5) ತಿಳಿಸಿದೆ.

ದೈಹಿಕ ಚಟುವಟಿಕೆಯ ಕೊರತೆ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯ ಕಾರಣ ಮಕ್ಕಳಲ್ಲಿನ ಸ್ಥೂಲಕಾಯ ಪ್ರಮಾಣ ಹೆಚ್ಚಳವಾಗುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಎನ್‌ಎಫ್‌ಎಚ್‌ಎಸ್‌ನ ಹಿಂದಿನ ಸಮೀಕ್ಷೆಯಲ್ಲಿ ಶೇ 2.1ರಷ್ಟಿದ್ದ ಅಧಿಕ ತೂಕದ ಮಕ್ಕಳ ಪ್ರಮಾಣ ಹೊಸ ಸಮೀಕ್ಷೆಯಲ್ಲಿ ಶೇ 3.4ಕ್ಕೆ ಏರಿಕೆಯಾಗಿದೆ. ಮಕ್ಕಳಲ್ಲಷ್ಟೇ ಅಲ್ಲದೆ, ಮಹಿಳೆಯರು ಮತ್ತು ಪುರುಷರಲ್ಲೂ ಬೊಜ್ಜು ಹೆಚ್ಚಿದೆ ಎಂದು ಸಮೀಕ್ಷೆ ತಿಳಿಸಿದೆ.

ಅಧಿಕ ತೂಕದ ಮಹಿಳೆಯರ ಪ್ರಮಾಣ ಶೇ 20.6ರಿಂದ ಶೇ 24ಕ್ಕೆ ಏರಿಕೆಯಾಗಿದ್ದರೆ, ಪುರುಷರ ಪ್ರಮಾಣ ಶೇ 18.9ರಿಂದ ಶೇ 22.9ಕ್ಕೆ ಏರಿಕೆಯಾಗಿದೆ ಎಂದು ಸಮೀಕ್ಷೆ ಹೇಳಿದೆ.

ಪತಿಯ ಹೊಡೆತಕ್ಕೆ ಮಹಿಳೆಯರ ಸಮರ್ಥನೆ!

ಸಮೀಕ್ಷೆಗೊಳಪಟ್ಟ 18 ರಾಜ್ಯಗಳ ಪೈಕಿ 14 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಶೇ 30ರಷ್ಟು ಮಹಿಳೆಯರು ತಮ್ಮ ಪತಿಯರು ಹೊಡೆಯುವುದನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಎನ್‌ಎಫ್‌ಎಚ್‌ಎಸ್‌–5 ಸಮೀಕ್ಷೆ ಹೇಳಿದೆ.

ತೆಲಂಗಾಣದಲ್ಲಿ ಶೇ 84, ಆಂಧ್ರ ಪ್ರದೇಶದಲ್ಲಿ ಶೇ 84 ಮತ್ತು ಕರ್ನಾಟಕದಲ್ಲಿ ಶೇ 77ರಷ್ಟು ಮಹಿಳೆಯರು ತಮ್ಮ ಪತಿಯರು ಥಳಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಮಣಿಪುರ (ಶೇ 66), ಕೇರಳ (ಶೇ 52), ಜಮ್ಮು ಮತ್ತು ಕಾಶ್ಮೀರ (ಶೇ 49), ಮಹಾರಾಷ್ಟ್ರ (ಶೇ 44), ಪಶ್ಚಿಮ ಬಂಗಾಳದ (ಶೇ 42) ಮಹಿಳೆಯರೂ ಸಹ ಇದನ್ನು ಸಮರ್ಥಿಸಿದ್ದಾರೆ. ಹಿಮಾಚಲ ಪ್ರದೇಶದಲ್ಲಿ ಅತಿ ಕಡಿಮೆ ಅಂದರೆ ಶೇ 14.8ರಷ್ಟು ಮಹಿಳೆಯರು ತಮ್ಮ ಪತಿಯ ಈ ರೀತಿಯ ವರ್ತನೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT