ಮಂಗಳವಾರ, ಮಾರ್ಚ್ 2, 2021
19 °C
ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ಸೂಚನೆ

ಜೈವಿಕ–ವೈದ್ಕಕೀಯ ತ್ಯಾಜ್ಯ ನಿರ್ವಹಣೆ; ಮಾಲಿನ್ಯ ನಿಯಂತ್ರಣ ಮಂಡಳಿಯ ದೃಢೀಕರಣ ಅಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜೈವಿಕ–ವೈದ್ಯಕೀಯ ತ್ಯಾಜ್ಯವನ್ನು ನಿರ್ವಹಣೆ ಮಾಡುವ ಘಟಕಗಳು ಕಡ್ಡಾಯವಾಗಿ ಆಯಾ ರಾಜ್ಯಗಳಲ್ಲಿನ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ದೃಢೀಕರಣ ಪಡೆಯಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ನಿರ್ದೇಶನ ನೀಡಿದೆ.

ಜೈವಿಕ–ವೈದ್ಯಕೀಯ ತ್ಯಾಜ್ಯದ ವಿಲೇವಾರಿಯನ್ನು ಸಂಬಂಧಪಟ್ಟ ನಿಯಮಗಳಿಗೆ ಅನುಸಾರವಾಗಿ ನಡೆಸಲಾಗುತ್ತಿದೆಯೇ ಎಂಬುದನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಪರಿಶೀಲಿಸಬೇಕು ಎಂದೂ ಸೂಚಿಸಿದೆ.

ಎನ್‌ಜಿಟಿಯ ಅಧ್ಯಕ್ಷ, ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ಅವರ ನೇತೃತ್ವದ ಪ್ರಧಾನ ಪೀಠ ಈ ನಿರ್ದೇಶನ ನೀಡಿದೆ.

ನಿಯಮಗಳ ಅನುಸಾರವಾಗಿ ಜೈವಿಕ–ವೈದ್ಯಕೀಯ ತ್ಯಾಜ್ಯದ ವಿಲೇವಾರಿ ನಡೆಯುತ್ತಿಲ್ಲ ಎಂದು ಆರೋಪಿಸಿ, ಉತ್ತರ ಪ್ರದೇಶ ಮೂಲದ ಪತ್ರಕರ್ತ ಶೈಲೇಶ್‌ಸಿಂಗ್‌ ಅರ್ಜಿ ಸಲ್ಲಿಸಿದ್ದರು.

‘ತ್ಯಾಜ್ಯ ವಿಲೇವಾರಿ ಘಟಕಗಳಿಂದ ನಿಯಮಗಳ ಪಾಲನೆಯಾಗುತ್ತದೆಯೇ ಇಲ್ಲವೇ ಎಂಬುದನ್ನು ಸಿಪಿಸಿಬಿ ಕಾಲಕಾಲಕ್ಕೆ ಪರಿಶೀಲಿಸಬೇಕು. ಕನಿಷ್ಠ ತ್ರೈಮಾಸಿಕವಾಗಿಯಾದರೂ ಪರಿಶೀಲಿಸಿ, ಸೂಕ್ತ ನಿರ್ದೇಶನ ನೀಡಬೇಕು’ ಎಂದು ನ್ಯಾಯಮೂರ್ತಿ ಗೋಯೆಲ್‌ ಸೂಚಿಸಿದರು.

‘ಪ್ರತಿಯೊಂದು ಆರೋಗ್ಯ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದೃಢೀಕರಣ ಪಡೆದಿರುವ ಬಗ್ಗೆ ಆಯಾ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಖಾತರಿಪಡಿಸಿಕೊಳ್ಳಬೇಕು. ಅವುಗಳು ನಿಯಮ ಪಾಲನೆ ಮಾಡುವ ಬಗ್ಗೆಯೂ ನಿಗಾ ವಹಿಸಬೇಕು’ ಎಂದು ಸೂಚಿಸಿದರು.

‘ಜೈವಿಕ–ವೈದ್ಯಕೀಯ ತ್ಯಾಜ್ಯ ಬಹಳ ಅಪಾಯಕಾರಿ. ಯಾವುದೇ ಸಂದರ್ಭದಲ್ಲಿಯೂ ಅದು ಸಾಮಾನ್ಯ ತ್ಯಾಜ್ಯದೊಂದಿಗೆ ಸೇರದಂತೆ ನೋಡಿಕೊಳ್ಳುವುದು ಅತ್ಯಗತ್ಯ’ ಎಂದೂ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದರು.

‘ನಿಯಮಗಳ ಉಲ್ಲಂಘನೆ ಮಾಡಿದ್ದಕ್ಕಾಗಿ 130 ಆರೋಗ್ಯ ಕೇಂದ್ರಗಳಿಗೆ ₹ 7.17 ಕೋಟಿ, 6 ಸಾಮಾನ್ಯ ಜೈವಿಕ–ವೈದ್ಯಕೀಯ ತ್ಯಾಜ್ಯ ವಿಲೇವಾರಿ ಘಟಕಗಳಿಗೆ ₹ 85 ಲಕ್ಷ ದಂಡ ವಿಧಿಸಲಾಗಿದೆ. ಈ ಮೊತ್ತವನ್ನು ತಕ್ಷಣವೇ ವಸೂಲು ಮಾಡುವಂತೆ’ ಸೂಚಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು