ಬುಧವಾರ, ಡಿಸೆಂಬರ್ 2, 2020
23 °C
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಸಿರು ಪೀಠ ನಿರ್ದೇಶನ

ಜಲಮೂಲಗಳ ಮೇಲೆ ನಿಗಾವಹಿಸಲು ಪ್ರತಿ ರಾಜ್ಯದಲ್ಲೂ ಸಮಿತಿ ರಚಿಸಿ: ಹಸಿರು ಪೀಠ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಜಲಮೂಲಗಳ ರಕ್ಷಣೆಗೆ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸುವಂತೆ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರೀಯ ಹಸಿರು ನ್ಯಾಯಪೀಠ (ಎನ್‌ಜಿಟಿ) ನಿರ್ದೇಶನ ನೀಡಿದೆ.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮೇಲ್ವಿಚಾರಣೆಯಲ್ಲಿ ಈ ವರ್ಷಾಂತ್ಯದೊಳಗೆ ಸಮಿತಿಯ ಸಭೆ ನಡೆಸಬೇಕು. ಸಭೆಯಲ್ಲಿ ರಾಜ್ಯಗಳಲ್ಲಿರುವ ಪ್ರಸ್ತುತ ಜಲಮೂಲಗಳ ಸ್ಥಿತಿಗತಿ ಕುರಿತು ಮಾಹಿತಿ ಸಂಗ್ರಹಿಸಬೇಕು. ಹಾಗೆಯೇ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಪೀಠ ತಿಳಿಸಿದೆ. ಮುಂದಿನ ವರ್ಷದ ಜನವರಿ 31ರೊಳಗೆ ಈ ಸಮಿತಿಯ ಮೊದಲ ಸಭೆ ನಡೆಸುವಂತೆ ನ್ಯಾಯಮಂಡಳಿ ಸೂಚಿಸಿದೆ.

ರಾಜ್ಯದ ಜಲಮೂಲಗಳ ಮೇಲೆ ನಿಗಾವಹಿಸುವ ಸಂಬಂಧ ವರ್ಷಕ್ಕೆ ಮೂರು ಬಾರಿಯಾದರೂ ಎಲ್ಲ ರಾಜ್ಯಗಳಲ್ಲೂ ನಿಯಮಿತವಾಗಿ ಸಭೆ ನಡೆಸುವಂತೆ ಹಸಿರು ನ್ಯಾಯಪೀಠ, ಕಲುಷಿತ ನದಿಗಳ ಪುನಶ್ಚೇತನಕ್ಕಾಗಿ ರಚಿಸಿರುವ ಕೇಂದ್ರೀಯ ಉಸ್ತುವಾರಿ ಸಮಿತಿಯನ್ನು ಕೇಳಿದೆ. ಮುಂದಿನ ವರ್ಷದ ಮಾರ್ಚ್ 31ರೊಗಳಗೆ ಈ ಸಮಿತಿಯ ಮೊದಲ ಸಭೆ ನಡೆಸಬಹುದು ಎಂದು ಪೀಠ ಹೇಳಿದೆ.

‘ಜಲಮೂಲಗಳ ರಕ್ಷಣೆಗಾಗಿ ಇಲ್ಲಿವರೆಗೆ ಕೈಗೊಂಡಿರುವ ಕ್ರಮಗಳ ಸಮರ್ಪಕವಾಗಿಲ್ಲ ಎನ್ನಿಸುತ್ತಿದೆ. ಜಲಮೂಲಗಳನ್ನು ರಕ್ಷಿಸುವುದರಿಂದ ನದಿ ಸೌಂದರ್ಯ ಹೆಚ್ಚುವ ಜತೆಗೆ, ವಾತಾವರಣ ಉತ್ತಮವಾಗುತ್ತದೆ. ಕುಡಿಯಲು ಶುದ್ಧ ನೀರು ಲಭ್ಯವಾಗುತ್ತದೆ. ಜಲಚರಗಳು ವೃದ್ಧಿಯಾಗುತ್ತವೆ, ಅಂತರ್ಜಲ ಮರುಪೂರಣವಾಗುತ್ತದೆ ಮಾತ್ರವಲ್ಲ, ನದಿಗಳ ಆರೋಗ್ಯವನ್ನೂ ಕಾಪಾಡಿಕೊಳ್ಳಲು ಸಹಾಯವಾಗುತ್ತದೆ' ಎಂದು ಪೀಠ ಅಭಿಪ್ರಾಯಪಟ್ಟಿದೆ.

ಹರಿಯಾಣದ ಗುರುಗ್ರಾಮ ಜಿಲ್ಲೆಯಲ್ಲಿರುವ ಘಾಟಾ ಸರೋವರ ಸೇರಿದಂತೆ, 214 ಇತರೆ ಜಲಮೂಲಗಳು ಮತ್ತು ಸ್ವಾಭಾವಿಕ ತೊರೆಗಳು ಹಾಗೂ ಫರಿದಾಬಾದ್‌ನಲ್ಲಿರುವ ಇಂಥದ್ದೇ ಜಲಮೂಲಗಳನ್ನು ಪುನಶ್ಚೇತನಗೊಳಿಸಬೇಕು ಎಂದು  ಕೋರಿ ಹರಿಯಾಣ ನಿವಾಸಿ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಸರ್ವದಮನ್‌ ಸಿಂಗ್ ಒಬೆರಾಯ್ ಸಲ್ಲಿಸಿದ್ದ ಅರ್ಜಿಯನ್ನು ಹಸಿರು ಪೀಠ ವಿಚಾರಣೆ ನಡೆಸಿತು.

ಅರ್ಜಿ ವಿಚಾರಣೆ ನಂತರ, ದೇಶದ ಪರಿಸರ ರಕ್ಷಣೆಯ ಹಿತಾಸಕ್ತಿಯಿಂದ ಸಿಂಗ್ ಅವರ ಅರ್ಜಿಯಲ್ಲಿನ ವಿಚಾರದ ಪರಿಕಲ್ಪನೆಯನ್ನು ದೇಶದಾದ್ಯಂತ ವಿಸ್ತರಿಸಲು ನ್ಯಾಪೀಠ ತೀರ್ಮಾನಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು